ಪುನೀತ್‌ ರಾಜ್ ಕುಮಾರ್‌ ಎಲ್ಲರಿಗೂ ಆದರ್ಶ: ಎಸ್.ಪಿ.ಎಂ

343

Get real time updates directly on you device, subscribe now.

ಕುಣಿಗಲ್‌: ಪುನೀತ್‌ ರಾಜ್ ಕುಮಾರ್‌ ನಿಧನರಾಗಿಲ್ಲ, ಅವರು ಮಾಡಿದ ಪುಣ್ಯ ಕಾರ್ಯಗಳು ಶಕ್ತಿಯಾಗಿ ನಮ್ಮೊಂದಿಗೆ ಶಾಶ್ವತವಾಗಿ ಇರುತ್ತವೆ ಎಂದು ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಹೇಳಿದರು.
ಮಂಗಳವಾರ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ನಲ್ಲಿ ಡಾ.ರಾಜ್ ಕುಮಾರ್‌ ಅಭಿಮಾನಿಗಳ ಸಂಘ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯುವರತ್ನ ಪುನೀತ್‌ ರಾಜ್ ಕುಮಾರ್‌ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಉತ್ತಮ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಂಡು ಕ್ರಿಯಾಶೀಲವಾಗಿ ಪಾದರಸದಂತಿದ್ದ ಪುನೀತ್ ರವರ ಸಕಾರಣವಲ್ಲದ ಅಕಾಲಿಕ ಮರಣವನ್ನು ರಾಜ್ಯ, ರಾಷ್ಟ್ರದ ಜನ ಇನ್ನು ಅರಗಿಸಿಕೊಳ್ಳಲಾಗುತ್ತಿಲ್ಲ, ಪುನೀತರ ಸಾವು ಅನೇಕ ಪ್ರಶ್ನೆಗಳನ್ನು ಚಿತ್ರರಂಗ, ವೈದ್ಯಕೀಯ ರಂಗಕ್ಕೆ ಹುಟ್ಟು ಹಾಕಿದೆ, ಅಕ್ಷರಶಃ ಕನ್ನಡ ಭಾಷೆಯ ನಟರಾಗಿದ್ದು ಬೇರೆ ಭಾಷೆಯಲ್ಲಿ ಅವಕಾಶಿದ್ದರೂ ನಟಿಸಲಿಲ್ಲ, ಗುಣಮಟ್ಟದ ಸಾಮಾಜಿಕ ಸಂದೇಶ ನೀಡಿದ ಅವರ ಚಿತ್ರಗಳು ಇಡೀ ಕುಟುಂಬವದರು ಕುಳಿತು ನೋಡುವಂತಾಗಿದ್ದವು, ಅವರು ಚಿಕ್ಕ ವಯಸ್ಸಿನಲ್ಲಿ ಮಾಡಿರುವ ಜನೋಪಕಾರಿ ಕಾರ್ಯಗಳು ಅವರನ್ನು ಜನರ ಮನಸಿನಲ್ಲಿ ಉಳಿಯುವಂತೆ ಮಾಡಿದೆ, ಪುನೀತ್ ರವರ ಕುಟುಂಬಕ್ಕೂ ತಾಲೂಕಿನ ಜನತೆಗೂ ಅವಿನಾಭಾವ ಸಂಬಂಧ ಎಂದರು.
ಶಾಸಕ.ಡಾ.ರಂಗನಾಥ ಮಾತನಾಡಿ, ಪುನೀತ್ ರವರ ಸಾವು ಕನ್ನಡ ಚಿತ್ರರಂಗ ಸೇರಿದಂತೆ ಕನ್ನಡನಾಡಿಗೆ ನಷ್ಟವಾಗಿದೆ. ತಮ್ಮ ನಟನೆಯ ಮೂಲಕ ಎಲ್ಲಾ ವರ್ಗದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು, ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ಇರುವಿಕೆ ಎಲ್ಲಾ ರೀತಿಯಲ್ಲೂ ಕಂಡುಬರುತ್ತಿದೆ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಪುನೀತ್ ರವರ ಸಾವಿನ ಬಗ್ಗೆ ವೈದ್ಯರ ಬಗ್ಗೆ ಅವಹೇಳನಕಾರಿ ವಿಷಯ ಪ್ರಸ್ತಾಪವಾಗುತ್ತಿದೆ, ಇದು ಸರಿಯಲ್ಲ, ಯಾವುದೇ ವೈದ್ಯರು ಅದರಲ್ಲೂ ವಿಶೇಷವಾಗಿ ಸಮಾಜಕ್ಕೆ ಬೇಕಿರುವ ವ್ಯಕ್ತಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂಬುದು ಸರಿಯಲ್ಲ, ಪುನೀತ್‌ ಚಿತ್ರ ನಟರಾಗಿದ್ದಾರೂ ಯಾವುದೇ ಪ್ರಚಾರ ಇಲ್ಲದೆ ಅವರು ಮಾಡಿರುವ ಸಾಮಾಜಿಕ ಕಾರ್ಯ ಎಲ್ಲರಿಗೂ ಮಾರ್ಗದರ್ಶಿಯಾಗಿದೆ ಎಂದರು.
ಕಾರ್ಯಕ್ರಮದ ಆಯೋಜಕ ಡಾ.ರಾಜ್ ಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷ, ಪುರಸಭಾ ಸದಸ್ಯ ರಂಗಸ್ವಾಮಿ, ಪುನೀತ್ ರವರು ಬಡವರ ಬಗ್ಗೆ ಅತೀವ ಕಾಳಜಿ ಉಳ್ಳವರಾಗಿದ್ದರು, ಪುನೀತ್‌ರವರ ಹೆಸರಲ್ಲಿದ್ದ ಕಾರೊಂದು ಮಾರಾಟವಾದ ನಂತರ ಪಟ್ಟಣದ ಬಿದನಗೆರೆ ಗ್ರಾಮದ ವ್ಯಕ್ತಿಗೆ ಅಪಘಾತ ಮಾಡಿ ಆತನ ಕಾಲು ಮುರಿದು ನ್ಯಾಯಾಲಯ ಐದು ಲಕ್ಷ ರೂ. ಪರಿಹಾರ ನೀಡುವಂತೆ ಘೋಷಿಸಿತ್ತು, ವಿಷಯ ತಿಳಿಯದ ಪುನೀತ್ ರವರಿಗೆ ಕೆಲ ವರ್ಷದ ನಂತರ ವಿಷಯ ತಿಳಿದು, ಗಾಯಾಳು ವ್ಯಕ್ತಿ ತೀವ್ರ ಬಡವರಾದ್ದರಿಂದ ಹತ್ತು ಲಕ್ಷ ರೂ. ಪರಿಹಾರ ನೀಡಿದ್ದರು. ಪಟ್ಟಣದೊಂದಿಗೆ ಅವಿನಾವಭಾವ ಸಂಬಂಧ ಹೊಂದಿದ್ದ ಅವರು ಮುಂದಿನ ತಿಂಗಳು ಪಟ್ಟಣದಲ್ಲಿ ತಾವೇ ಖುದ್ದು ಕಾರ್ಯಕ್ರಮ ನೀಡಿ ಅದರಿಂದ ಬರುವ ಹಣದಿಂದ ಪಟ್ಟಣದಲ್ಲಿ ಯಾವುದಾದರು ಶಾಶ್ವತ ಕಾರ್ಯ ಮಾಡುವಂತೆ ಸೂಚಿಸಿದ್ದರು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮ, ಪುರಸಭೆ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಬಿಜೆಪಿ ಮುಖಂಡ ರಾಜೇಶ್ ಗೌಡ, ಕರವೆ ಅಧ್ಯಕ್ಷ ಮಂಜುನಾಥ, ಪುರ ಸಭೆ ಮಾಜಿ ಅಧ್ಯಕ್ಷರಾದ ರೆಹಮಾನ್ ಶರೀಫ್‌, ಕೆ.ಎಲ್‌.ಹರೀಶ್‌, ಪುರಸಭೆ ಸದಸ್ಯರಾದ ನಾಗಣ್ಣ, ದೇವರಾಜು, ಗೋಪಿ, ಜಯಲಕ್ಷ್ಮೀ, ಪ್ರಮುಖರಾದ ಶಿವಣ್ಣ, ಶ್ರೀನಿವಾಸ, ಎಸ್‌.ಆರ್‌.ಚಿಕ್ಕಣ್ಣ, ಅವಿನಾಶ್‌, ದಿನೇಶ್‌ ಇತರರು ಇದ್ದರು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ವೈಕುಂಠನಾರಯಣ ಪೂಜೆಯ ನಂತರ, ರಕ್ತದಾನ, ನುಡಿಗೀತ, ಪುಷ್ಪನಮನ ಏರ್ಪಡಿಸಲಾಗಿತ್ತು, ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!