ಮೈಸೂರುಹುಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ

268

Get real time updates directly on you device, subscribe now.

ತುಮಕೂರು: ನಗರದ ಅಮಾನಿಕೆರೆ ಉದ್ಯಾನವನದಲ್ಲಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಯಿತು.
ಮೊದಲಿಗೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು, ಟಿಪ್ಪು ಅವರ ಭಾವಚಿತ್ರಕ್ಕೆ ಪುಷ್ಪನಮನವ ಸಲ್ಲಿಸಿದರು. ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಪಿ.ಎನ್‌.ರಾಮಯ್ಯ, ಭಾರತ ಮಹಾರಾಜರ ಅಳ್ವಿಕೆಗೆ ಒಳಪಟ್ಟ ದಿನಗಳಲ್ಲಿ, ಬ್ರಿಟಿಷರನ್ನು ಅತ್ಯಂತ ದಿಟ್ಟ ತನದಿಂದ ಎದುರಿಸಿ ರಣಾಂಗಣದಲ್ಲಿಯೇ ವೀರ ಮರಣ ಅಪ್ಪಿದ್ದು ಟಿಪ್ಪು ಸುಲ್ತಾನ್‌, ಯುದ್ಧದಲ್ಲಿ ಸೋತ ಸಂದರ್ಭದಲ್ಲಿ ಬ್ರಿಟಿಷರಿಗೆ ಕೊಡಬೇಕಾಗಿದ್ದ ದಂಡಕೋಸ್ಕರ ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟ ಏಕೈಕ ರಾಜನಿದ್ದರೆ ಅದು ಟಿಪ್ಪು ಸುಲ್ತಾನ್‌, ಇಂತಹ ಟಿಪ್ಪು ಸುಲ್ತಾನ್‌ ವಿರುದ್ಧ ಕೆಲ ಕೋಮುವಾದಿಗಳು, ಹಿಂದೂ ವಿರೋಧಿ, ಕ್ರಿಶ್ಚಿಯನ್‌ ವಿರೋಧಿ ಎಂಬ ಹಣೆಪಟ್ಟೆ ಕಟ್ಟಿ, ದೇಶದ ಜನರಲ್ಲಿ ತಪ್ಪು ಭಾವನೆ ಬರುವಂತೆ ಮಾಡುತ್ತಿದ್ದಾರೆ, ಜನತೆ ಇತಿಹಾಸದ ದಾಖಲೆಗಳ ಮೂಲಕ ಸತ್ಯ ತಿಳಿಸಿ ಅಪ್ಟಟ ದೇಶಪ್ರೇಮಿಗೆ ಗೌರವ ಸಲ್ಲಿಸೋಣ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್‌ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್‌.ಕೆ.ನಿಧಿಕುಮಾರ್‌ ಮಾತನಾಡಿ, ಟಿಪ್ಪು ಸುಲ್ತಾನ್‌ ಹಿಂದೂ ವಿರೋಧಿಯಲ್ಲ ಎಂಬುದಕ್ಕೆ ಇತಿಹಾಸಕಾರರ ಬಳಿ ಆಪಾರ ದಾಖಲೆಗಳಿವೆ, ಮರಾಠರ ಶಿವಾಜಿ ಶೃಂಗೇರಿ ಮಠವನ್ನು ಕೊಳ್ಳೆ ಹೊಡೆದಾಗ, ಟಿಪ್ಪು ಸುಲ್ತಾನ್‌ ಆ ಮಠಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡುವ ಮೂಲಕ ಹಿಂದೂ ಮಠವೊಂದರ ಜೀರ್ಣೋದ್ಧಾರ ಮಾಡುತ್ತಾರೆ, ಅಲ್ಲದೆ ತನ್ನ ಅರಮನೆಗೆ ಅನತಿ ದೂರದಲ್ಲಿದ್ದ ಶ್ರೀರಂಗಪಟ್ಟದ ರಂಗನಾಥ ದೇವಾಲಯಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಚಾಲ್ತಿಯಲ್ಲಿದ್ದ ಅನಿಷ್ಠ ತೆರಿಗೆ ಪದ್ಧತಿ ರದ್ದು ಪಡಿಸಿ ದಲಿತ ಹೆಣ್ಣು ಮಕ್ಕಳ ಮಾನ, ಪ್ರಾಣ ಕಾಪಾಡಿದ ವೀರ ಟಿಪ್ಪು ಸುಲ್ತಾನ್‌ ಇಂತಹ ವ್ಯಕ್ತಿಯನ್ನು ಕೇವಲ ಒಂದು ಜಾತಿ, ಧರ್ಮದ ಗೂಡೊಳಗಿಟ್ಟು ನೋಡುವುದು ತರವಲ್ಲ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕನ ರೀತಿ, ಟಿಪ್ಪು ಸುಲ್ತಾನ್‌ ಸಹ ಅಪ್ರತಿಮ ದೇಶ ಭಕ್ತ, ಅವರನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ ಎಂದರು.
ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕ ಟಿ.ಆರ್‌.ನಾಗೇಶ್‌ ಮಾತನಾಡಿ, ಟಿಪ್ಪು ಸುಲ್ತಾನ್‌ ರಾಜನಾಗಿಯೇ ಅಲ್ಲ, ಉತ್ತಮ ಆಡಳಿತಗಾರನಾಗಿಯೂ ಹೆಚ್ಚು ಕೆಲಸ ಮಾಡಿದ್ದಾರೆ, ದೇಶಕ್ಕೆ ರೇಷ್ಮೆ ಪರಿಚಯಿಸಿದ್ದು, ರಾಕೇಟ್‌ ತಂತ್ರಜ್ಞಾನ ನೀಡಿದ್ದು ಇದೇ ಟಿಪ್ಪು ಸುಲ್ತಾನ್‌, ತನ್ನ ಮುಂದಾಲೋಚನೆಯ ಫಲವಾಗಿ ಕಂದಾಯ ಇಲಾಖೆಯಲ್ಲಿ ಹಲವಾರು ಸುಧಾರಣೆ ತಂದು, ದಲಿತರು ಭೂಮಿಯ ಹಕ್ಕು ಹೊಂದುವಂತೆ ಮಾಡಿದ್ದು ಟಿಪ್ಪು ಆಡಳಿತದಲ್ಲಿ, ಇಂತಹ ಜಾತ್ಯಾತೀತ ರಾಜನನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸುವುದು ಅಪರಾಧ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಟಿ.ಆರ್‌.ಗುರುಪ್ರಸಾದ್‌, ಗೋವಿಂದರಾಜು ಕೆ., ಸಿದ್ದಲಿಂಗಯ್ಯ ಜಿ.ಸಿ., ಶಿವರಾಜು ಸಂತೆಪೇಟೆ, ರಜಿನಿಕಾಂತ್‌, ನರಸಿಂಹಮೂರ್ತಿ, ಜಬಿವುಲ್ಲಾ,ರಾಜೇಶ್‌ ಹೆಚ್‌.ಬಿ., ನಾರಾಯಣ್‌, ಮಾರುತಿ, ಶಿವಣ್ಣ, ರಾಜಶೇಖರ್‌, ಶಿವರಾಜ್‌, ಮನು.ಟಿ, ತ್ಯಾಗರಾಜು, ಬೋರೇಗೌಡ, ರಂಗಸ್ವಾಮಯ್ಯ, ಸಿದ್ದಲಿಂಗಯ್ಯ ಕೆ.ಎನ್‌., ಮುಜಾಮುಲ್ಲಾ, ಶಿವು ಹೆತ್ತೇನಹಳ್ಳಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!