ತುಮಕೂರು: ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನ್ಯೂಮೋಕಾಕಲ್ ಕಾಂಜುಗೇಟ್ ವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿದ್ದು, ಮಕ್ಕಳಿಗೆ ಈ ಲಸಿಕೆ ಹಾಕಿಸುವ ಮೂಲಕ ನ್ಯೂಮೋಕಾಕಲ್ ಸೋಂಕಿನಿಂದ ರಕ್ಷಿಸಬೇಕೆಂದು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರಜಿನಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಕ್ಕಳ ಆರೋಗ್ಯ ಕಾಪಾಡುವಲ್ಲಿ ತಾಯಂದಿರ ಜೊತೆಗೆ ಆರೋಗ್ಯ ಕಾರ್ಯಕರ್ತರ ಪಾತ್ರವೂ ಬಹಳ ಮುಖ್ಯವಾಗಿರುತ್ತದೆ. ನ್ಯೂಮೋಕಾಕಲ್ ಸೋಂಕಿನಿಂದ ಮಕ್ಕಳಲ್ಲಿ ಶೇ. 80ರಷ್ಟು ನ್ಯೂಮೋನಿಯ ಸಂಬಂಧಿತ ರೋಗಗಳು ಕಾಣಿಸಿಕೊಳ್ಳಲಿದ್ದು, ಸೋಂಕಿನ ತೀವ್ರತೆ ಹೆಚ್ಚಾದಲ್ಲಿ ಮಕ್ಕಳು ಸಾವನ್ನಪ್ಪುವ ಸಂಭವವಿರುತ್ತದೆ ಎಂದರಲ್ಲದೆ ಶಿಶು ಮರಣವನ್ನು ನಿಯಂತ್ರಿಸುವ ಉದ್ದೇಶದಿಂದ 2017 ರಿಂದ ರಾಜ್ಯಾದ್ಯಂತ ಹಂತ ಹಂತವಾಗಿ ಜಿಲ್ಲಾವಾರು ಈ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸರ್ಕಾರದಿಂದ ಉಚಿತವಾಗಿ ಈ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಶುಗಳಿಗೆ ಸಾಂಕೇತಿಕವಾಗಿ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಎಂ.ಬಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಟಿ.ಎಂ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಕೇಶವರಾಜ್ ಜಿ., ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ಮೋಹನ್ ದಾಸ್, ಆಡಳಿತ ವೈದ್ಯಾಧಿಕಾರಿ ಡಾ.ಅನಿತಾ ಬಿ.ಗೌಡ ಹಾಗೂ ಆರೋಗ್ಯ ಸಿಬ್ಬಂದಿ ಮತ್ತಿತರರು ಇದ್ದರು.
ಪಿಸಿವಿ ಲಸಿಕೆ ಹಾಕಿಸಿ ನ್ಯೂಮೋಕಾಕಲ್ ಸೋಂಕಿನಿಂದ ರಕ್ಷಿಸಿ: ಡಾ.ರಜಿನಿ
ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
Get real time updates directly on you device, subscribe now.
Prev Post
Comments are closed.