ಅಬ್ದುಲ್‌ ಜಬ್ಬಾರ್‌ ಪದಗ್ರಹಣ ಸಮಾರಂಭ 16ಕ್ಕೆ

426

Get real time updates directly on you device, subscribe now.

ತುಮಕೂರು: ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಮಾಜಿ ಶಾಸಕ ಅಬ್ದುಲ್‌ ಜಬ್ಬಾರ್‌ ಅವರನ್ನು ನೇಮಕ ಮಾಡಿರುವ ಹಿನ್ನಲೆಯಲ್ಲಿ ನವೆಂಬರ್‌ 16 ರಂದು ಅರಮನೆ ಮೈದಾನದ ನಲಪಾಡ್‌ ಪೆವಲಿಯನ್ ನಲ್ಲಿ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮುದಾಫೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಲವತ್ತು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಅಬ್ದುಲ್‌ ಜಬ್ಬಾರ್‌ ಅವರು, ದಾವಣಗೆರೆಯ ನಗರಸಭೆ ಅಧ್ಯಕ್ಷರಾಗಿ, ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಸೇವಾ ಹಿರಿತನವನ್ನು ಪರಿಗಣಿಸಿ ಎಐಸಿಸಿ ಅಧ್ಯಕ್ಷರಾದ ಸೋನಿಯಗಾಂಧಿ, ರಾಹುಲ್‌ಗಾಂಧಿ ಅವರು ಅಬ್ದುಲ್‌ ಜಬ್ಬಾರ್‌ ಸಾಬ್‌ ಅವರನ್ನು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷರಾಗಿ ನ.16 ರಂದು ಅಧಿಕಾರ ಸ್ವೀಕರಿಸಲಿದ್ದು, ಸಮಾರಂಭಕ್ಕೆ ಎಲ್ಲ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಅರಮನೆ ಮೈದಾನದ ನಲಪಾಡ್‌ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಐಸಿಸಿ ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕವಿಗಳಾದ ಇಮ್ರಾನ್‌ ಪ್ರತಾಪಗಡಿ, ಕರ್ನಾಟಕದ ಸರಕಾರದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್‌ ಖರ್ಗೆ, ಡಾ.ಜಿ.ಪರಮೇಶ್ವರ್‌ ಸೇರಿದಂತೆ ಎಲ್ಲಾ ಮುಖಂಡರು,ರಾಜ್ಯದ ಎಲ್ಲಾ ಜಿಲ್ಲೆಗಳ ಅಲ್ಪಸಂಖ್ಯಾತರ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಅಲ್ಪಸಂಖ್ಯಾತರಿಗೆ ಏನಾದರೂ ಸಾಮಾಜಿಕ ನ್ಯಾಯದ ಅನ್ವಯ ಅವಕಾಶಗಳು, ಅಧಿಕಾರ ದೊರೆತ್ತಿದ್ದರೆ ಅದು ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ, ಇದಕ್ಕೆ ತಾಜಾ ಉದಾಹರಣೆಯೇ ಇತ್ತೀಚಿನ ಹಾನಗಲ್‌ ಮತ್ತು ಸಿಂದಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನರು ನೀಡಿದ ಮತಗಳು, ಸಿ.ಎಂ.ಇಬ್ರಾಹಿಂ ಯಾವ ಉದ್ದೇಶಕ್ಕೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೋ ತಿಳಿಯುತ್ತಿಲ್ಲ, ಎಲ್ಲಾ ಸಂದರ್ಭದಲ್ಲಿ ಅಧಿಕಾರಕ್ಕೆ ಅಂಟಿ ಕುಳಿತರೆ, ಅವರ ಕೋರಿಕೆ ಈಡೇರಿಸುವುದು ಕಷ್ಟ ಸಾಧ್ಯ ಎಂದು ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮುದಾಫೀರ್‌ ಅಹಮದ್‌ ಖಾನ್‌ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್‌ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್‌ ಅಹಮದ್‌ ಮಾತನಾಡಿ, ತುಮಕೂರಿನಲ್ಲಿ ಅಲ್ಪಸಂಖ್ಯಾತರ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎರಡು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಡಾ.ಮೆಹಮೂದ್‌, ತುಮಕೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಅಹಮದ್‌, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾರ್ಯದರ್ಶಿ ಮುಜೀಬ್‌, ಮುಖಂಡರಾದ ಖಲೀಂ ಅಹಮದ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!