ಜಿಟಿಜಿಟಿ ಮಳೆಗೆ ನಡುಗಿದ ಜನತೆ

259

Get real time updates directly on you device, subscribe now.

ತುಮಕೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಮುಂಜಾನೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ಮಳೆಯ ಕಿರಿಕಿರಿ ಉಂಟಾಯಿತು.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜಿಟಿಜಿಟಿ ಮಳೆಯಾಗುತ್ತಿರುವ ಬೆನ್ನಲ್ಲೆ ಕಲ್ಪತರು ನಾಡಿನಲ್ಲೂ ಮುಂಜಾನೆಯಿಂದ ಸೋನೆ ಮಳೆಯಾಗುತ್ತಿದೆ. ಕೊರೆವ ಚಳಿ, ಈ ಚಳಿಯಲ್ಲಿ ಶಾಲಾ ಮಕ್ಕಳು ಶಾಲೆಗಳಿಗೆ ತೆರಳುವುದೇ ಒಂದು ಸಾಹಸ, ಜಿಟಿಜಿಟಿ ಮಳೆಯಾಗುತ್ತಿರುವುದು ಮಕ್ಕಳಿಗೆ ಕೊಂಚೆ ಬೇಸರ ತರಿಸಿದ್ದು, ಮಕ್ಕಳು ಸ್ವೆಟರ್‌, ಜರ್ಕಿನ್‌ ಧರಿಸಿ ಪೋಷಕರೊಂದಿಗೆ ಛತ್ರಿ ಹಿಡಿದು ಸುರಿಯುವ ಮಳೆಯಲ್ಲೂ ಶಾಲೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂತು.
ಇನ್ನು ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ಸರ್ಕಾರಿ ನೌಕರರು, ಖಾಸಗಿ ಕಂಪೆನಿಗಳ ನೌಕರರು, ಕೂಲಿ ಕಾರ್ಮಿಕರು ಜಿಟಿಜಿಟಿ ಮಳೆಯಲ್ಲೇ ನೆನೆದುಕೊಂಡು ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಒಂದು ಕಡೆ ಚಳಿ, ಮತ್ತೊಂದು ಕಡೆ ಜಿಟಿಜಿಟಿ ಮಳೆ, ಇವೆರಡರ ಮಧ್ಯೆ ಜನತೆ ನಡುಗಿಕೊಂಡು ಜರ್ಕಿನ್‌ ಧರಿಸಿ ತಮ್ಮ ಕೆಲಸಗಳಿಗೆ ತೆರಳಿದರು, ಇನ್ನು ಬೇರೆ ಬೇರೆ ಊರುಗಳಿಗೆ ತೆರಳಲು ಬಸ್‌ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಪ್ರಯಾಣಿಕರಂತೂ ಚಳಿ, ಮಳೆಯಲ್ಲೆ ನೆನೆದು ಬಸ್‌ ಹತ್ತಲು ಪರದಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಇನ್ನು ಗ್ರಾಮೀಣ ಪ್ರದೇಶದಲ್ಲೂ ಜಿಟಿಜಿಟಿ ಮಳೆಯಿಂದ ರೈತರು ಕಂಗಾಲಾಗಿದ್ದಾರೆ, ಕಳೆದ ನಾಲ್ಕೈದು ತಿಂಗಳಿಂದ ಕಷ್ಟಪಟ್ಟು ರಾಗಿ ಕೃಷಿ ಮಾಡಿದ್ದು, ಕೆಲವು ರಾಗಿ ಹೊಲಗಳು ಕಟಾವಿಗೆ ಬರುವ ಹೊತ್ತಿಗೆ ಸರಿಯಾಗಿ ಮಳೆ ಸುರಿಯುತ್ತಿರುವುದು ರೈತ ಸಮೂಹಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಮಳೆ ಇನ್ನು ಮೂರ್ನಾಲ್ಕು ದಿನ ಹೀಗೆ ಸುರಿದರೆ ರಾಗಿ ಹೊಲಗಳು ಮಲಗಿಕೊಳ್ಳುತ್ತವೆ. ಹೊಲಗಳು ಮಲಗಿದರೆ ಅರ್ಧ ರಾಗಿ ಬೆಳೆ ನಾಶವಾಗುತ್ತದೆ. ಜೊತೆಗೆ ರಾಗಿ ಬೆಳೆ ಕಟಾವು ಮಾಡಲು ಒಂದಕ್ಕೆರಡು ಕೂಲಿ ತೆರಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಈಗ ಸುರಿಯುತ್ತಿರುವ ಮಳೆಯಿಂದ ಎದುರಾಗುವ ಸಾಧ್ಯತೆ ಇದೆ.

Get real time updates directly on you device, subscribe now.

Comments are closed.

error: Content is protected !!