ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ಅಗತ್ಯ: ನಾಗೇಂದ್ರ

ರೈತ ಚಳವಳಿ ಗೆದ್ದರೆ ದೇಶ ಗೆಲ್ಲಲಿದೆ

140

Get real time updates directly on you device, subscribe now.

ತುಮಕೂರು: ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ದೇಶ ಒಂದಾಗಿ, ಜಾತಿ, ಧರ್ಮ ಮೀರಿ ಸಂಘಟಿತವಾಗಿ ಹೋರಾಡುತ್ತಿವೆ, ದೇಶಕ್ಕೆ ಅಪಾಯವಾಗಿರುವುದರ ವಿರುದ್ಧ ನಡೆಯುತ್ತಿರುವ ದೇಶ ಪ್ರೇಮಿ ಚಳವಳಿ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.
ಬೆಂಗಳೂರು ವಿಭಾಗೀಯ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಸಾರ್ವಭೌಮತೆ ಧಿಕ್ಕಿರಿಸಿ ಮಸೂದೆ ರೂಪಿಸಿರುವ ಜನವಿರೋಧಿ, ಜೀವ ವಿರೋಧಿ ಕಾಯ್ದೆ ಇದಾಗಿವೆ, ರೈತರು ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದರೆ ಈ ರೈತ ಚಳವಳಿ ಗೆದ್ದರೆ ದೇಶ ಗೆಲ್ಲಲಿದೆ, ಕಾರ್ಮಿಕ, ದಲಿತ, ರೈತ ಸಂಯುಕ್ತ ಹೋರಾಟ ಸಮಿತಿ ಎತ್ತು, ಎಮ್ಮೆ, ಕೋಳಿ, ಎತ್ತಿನಗಾಡಿ, ಟ್ರ್ಯಾಕ್ಟರ್‌ ನೊಂದಿಗೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ತಡೆಹಿಡಿದ್ದರೆ, ರಾಜ್ಯ ಸರ್ಕಾರ ಅದನ್ನು ಜಾರಿಗೆ ತಂದಿವೆ, ಎಪಿಎಂಸಿಗಳ ಬಳಿ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ, ಶಿವಮೊಗ್ಗದಂತಹ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ವಹಿವಾಟು ಶೇ.18ಕ್ಕೆ ಇಳಿದಿದೆ, ಮುಂದಿನ ದಿನಗಳಲ್ಲಿ ಎಪಿಎಂಸಿಗಳು ಅದಾನಿ, ಅಂಬಾನಿಗಳ ಸಂತತಿ ಪಾಲಾಗಾಲಿದೆ ಎಂದು ಹೇಳಿದರು.
ಭೂ ಸುಧಾರಣೆ ಕಾಯ್ದೆ ಹೆಸರಿನಲ್ಲಿ ಜಾರಿಗೆ ಬಂದ ನಂತರ ನೋಂದಣಿ ಶುಲ್ಕ ಹೆಚ್ಚಳವಾಗಿದೆ, ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗಳಿಗೆ ಸುಲಭವಾಗಿ ದೊರಕುವಂತಾಗಿದೆ ಎಂದ ಅವರು ಐಟಿ, ಬಿಟಿಯವರು ಕೃಷಿಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ನವೆಂಬರ್‌ 26ರ ನಂತರ ರಾಜ್ಯದ ಹತ್ತು ಕಡೆ ಮಹಾ ಪಂಚಾಯತ್‌ ಹಮ್ಮಿಕೊಂಡು ಈ ಕಾಯ್ದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಬಜೆಟ್‌ ಮಂಡನೆಗೆ ಮೊದಲು ಜನಾಧಿವೇಶನ ಹಮ್ಮಿಕೊಂಡು ನಿರ್ಣಯ ಕೈಗೊಳ್ಳಲಾಗುವುದು, ನ.28ರಿಂದ ಕೇಂದ್ರ ಸಚಿವರಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಲಿದ್ದೇವೆ ಎಂದರು.
ಸರ್ಕಾರ ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎಂದ ಅವರು 12 ಜಿಲ್ಲೆಗಳಲ್ಲಿ ಬೆಳೆಯುವ ಮುಸುಕಿನ ಜೋಳವನ್ನು ಸರ್ಕಾರ ಖರೀದಿಸಿ ಪಶು ಆಹಾರವನ್ನಾಗಿ ಮಾರ್ಪಡಿಸಬೇಕು, ಇದರಿಂದ ಉದ್ಯೋಗ ಹೆಚ್ಚಳವಾಗಲಿದೆ, ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ, ಸರ್ಕಾರ ನೀಡುವ ಸಬ್ಸಿಡಿ ದೊರಕದಂತೆ ಆಗಿದೆ ಎಂದರು.
ಬರಪೀಡಿತ ಪ್ರದೇಶವಾದ ಚಿತ್ರದುರ್ಗದಲ್ಲಿ ಮಳೆಯಿಂದಾಗಿ ಈರುಳ್ಳಿ, ಶೇಂಗಾ ಬೆಳೆ ನಾಶವಾಗಿದೆ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು, ಪೂರ್ಣ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಫಸಲ್‌ ಬೀಮಾ ಯೋಜನೆ ರೈತರ ಪರವಾಗಿಲ್ಲ, ಅದು ವಿಮಾ ಸಂಸ್ಥೆಗಳ ಪರವಾಗಿದೆ ಎಂದು ದೂರಿದರು.
ನರೇಂದ್ರ ಮೋದಿ ಅವರ ಸ್ವಂತ ರಾಜ್ಯ ಗುಜರಾತ್‌ ನಲ್ಲಿ ಈ ಯೋಜನೆ ಜಾರಿಗೊಳಿಸಿಲ್ಲ, ಮೇಲ್ನೋಟಕ್ಕೆ ರೈತ ಪರವಾದ ಯೋಜನೆಗಳು ಕಾರ್ಪೋರೇಟ್‌ ಸಂಸ್ಥೆಗಳ ಪರವಾಗಿದೆ, ಖಾಸಗಿ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ನ.26 ರಂದು ಹೆದ್ದಾರಿ ಬಂದ್‌ ಮಾಡಲಿದ್ದೇವೆ, ಜಿಲ್ಲೆಯಲ್ಲಿ ಶೇಂಗಾ, ರಾಗಿ ನಾಶವಾಗಿವೆ, ಮಳೆಯಿಂದಾಗಿ ಬಾಳೆ ಬೆಲೆ ಕುಸಿದಿದೆ, ನೀರಾವರಿ ಯೋಜನೆ ಅನುಷ್ಠಾನ ಮತ್ತು ರೈತರ ನಷ್ಟ ತುಂಬಿಕೊಡುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುವುದಾಗಿ ತಿಳಿಸಿದರು.
ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳನ್ನು ಒಳಗೊಂಡಂತೆ ಡಿಸೆಂಬರ್ ನಲ್ಲಿ ಮಹಾ ಪಂಚಾಯತ್‌ ಹಮ್ಮಿಕೊಳ್ಳಲಾಗುವುದು ಎಂದ ಅವರು ಸಂಯುಕ್ತ ಹೋರಾಟ ಸಮಿತಿಯ ಮುಖಂಡರು, ಕಾರ್ಯಕರ್ತರು ಸೇರಿ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಒಳಗೊಂಡ ಮಹಾ ಪಂಚಾಯತಿ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ನುಲೇನೂರು ಶಂಕರಪ್ಪ, ವಿಭಾಗೀಯ ಕಾರ್ಯದರ್ಶಿ ಡಾ.ಚೌಕೀಮಠ್‌, ವಿಭಾಗೀಯ ಕಾರ್ಯದರ್ಶಿ ವಿ.ಗೋಪಾಲ್‌, ಸುರೇಶ್‌ ಬಾಬು, ಸಂಘಟನಾ ಕಾರ್ಯದರ್ಶಿ ರಾಜು, ಚಂದ್ರಶೇಖರ್‌, ಅನುಸೂಯಮ್ಮ ಜೆ.ಸಿ.ಶಂಕರಪ್ಪ, ಕೆ.ಮಲ್ಲಯ್ಯ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!