ಹುಳಿಯಾರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯು ಕೃಷಿ ಬೆಳೆಗಳಿಗೆ ಕಂಟಕವಾಗಿ ಪರಿಣಮಿಸಿದೆ. ಎರಡ್ಮೂರು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆರಾಯನಿಂದ ರಾಗಿ ಫಸಲಿಗೆ ಹಾನಿಯಾಗಿ ಅನ್ನದಾತರ ಕಣ್ಣಲ್ಲಿ ನೀರು ಹರಿಯುತ್ತಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು ಇಲ್ಲಿನ ಪ್ರಮುಖ ಬೆಳೆಯಲ್ಲಿ ರಾಗಿ ಬೆಳೆ ಮೊದಲ ಸ್ಥಾನದಲ್ಲಿದೆ. ಪೂರ್ವ ಮುಂಗಾರು ಬಿತ್ತನೆ ಕೈ ಬಿಟ್ಟಿದ್ದರೂ ಸಹ ಮುಂಗಾರು ಬೆಳೆಯಾಗಿ ರಾಗಿ ಮಾತ್ರ ಬಿಡದೆ ರೈತ ಬಿತ್ತುತ್ತಾನೆ. ಕಳೆದ ಎರಡ್ಮೂರು ವರ್ಷ ಉತ್ತಮ ಬೆಳೆಯಾದ ಹಿನ್ನೆಲೆಯಲ್ಲಿ ಈ ವರ್ಷ ಬಹಳ ಹುರುಪಿನಿಂದ ರಾಗಿ ಬಿತ್ತನೆ ಮಾಡಿದ್ದಾರೆ.
ತಾಲೂಕಿನಲ್ಲಿ ಆರಂಭದಲ್ಲಿ ಉತ್ತಮ ಮಳೆಯಾಗದಿದ್ದರೂ ಬಿದ್ದ ಅಲ್ಪ ಮಳೆಯಲ್ಲೇ ಭಂಡಧೈರ್ಯದಿಂದ ರಾಗಿ ಬಿತ್ತಲಾಗಿತ್ತು. ಅದೃಷ್ಠವಶತ್ ವರಣ ಕೃಪೆ ತೋರಿದ ಪರಿಣಾಮ ಬಂಪರ್ ಬೆಳೆ ಬರುವಂತೆ ರಾಗಿ ಹುಲುಸಾಗಿ ಬೆಳೆದು ಫಸಲು ಭರ್ಜರಿಯಾಗಿತ್ತು. ಆದರೆ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ಅಕಾಲಿಕ ಮಳೆಯು ತಣ್ಣೀರೆರಚಿದೆ.
ತಾಲೂಕಿನಲ್ಲಿ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ರಾಗಿ ಕೊಯ್ಲು ಆರಂಭವಾಗುತ್ತದೆ. ಈ ಬಾರಿ ಎಲ್ಲೆಡೆ ರಾಗಿ ಬೆಳೆ ಸೊಂಪಾಗಿ ಬೆಳೆದಿದ್ದು, ತೆನೆಗಳು ಚೆನ್ನಾಗಿ ಕಾಳು ಕಟ್ಟಿವೆ. ಇದೀಗ ಕೊಯ್ಲು ಆರಂಭವಾಗುವ ಹೊತ್ತಿಗೆ ಮಳೆ ಸುರಿಯುತ್ತಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಸತತ ಮಳೆಯ ಕಾರಣಕ್ಕೆ ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ರಾಗಿ ತೆನೆಗಳು ನೆಲಕ್ಕೆ ಬಾಗಿ ಮೊಳಕೆ ಬರಲು ಆರಂಭಿಸಿವೆ. ಒಂದಕ್ಕೊಂದು ತಾಗಿಕೊಂಡು ಬಿದ್ದಿರುವ ರಾಗಿ ಪೈರಿನಲ್ಲಿ ತೆನೆಗಳು ಸಿಕ್ಕಿಕೊಂಡಿದ್ದು ಅವುಗಳನ್ನು ವಿಂಗಡಿಸಲು ಮಳೆ ಬಿಡುವು ಕೊಡುತ್ತಿಲ್ಲ. ನೆಲ ಕಚ್ಚಿರುವ ರಾಗಿ ಪೈರನ್ನು ಎತ್ತಿಕಟ್ಟುವ ಕೆಲಸವಾಗಬೇಕು. ಆದರೆ, ರೈತರು ಹೊಲಗಳ ಒಳಗೆ ಹೋಗಲಾಗದಂತೆ ಚಾಪೆ ರೀತಿಯಲ್ಲಿ ರಾಗಿ ಪೈರು ಮಲಗಿರುವುದು ಆತಂಕ ಹೆಚ್ಚಿಸಿದೆ.
ಮೋಡ ಮುಸುಕಿದ ವಾತಾವರಣದೊಂದಿಗೆ ಮಳೆ ಮುಂದುವರಿದರೆ ಅಪಾರ ಪ್ರಮಾಣದ ರಾಗಿ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ. ಈ ವರ್ಷ ತಾಲೂಕಿನಾಧ್ಯಂತ ಬಂಪರ್ ಫಸಲು ಬಂದಿದೆ. ಮಳೆರಾಯ ಸುಮ್ಮನಾಗದಿದ್ದರೆ ಕಷ್ಟು ಪಟ್ಟು ಸಾಲಾಸೂಲ ಮಾಡಿ ಉತ್ತುಬಿತ್ತಿದ್ದ ರಾಗಿ ಅರ್ಧಕರ್ದ ಕೈ ತಪ್ಪುವ ಸಾಧ್ಯತೆ ಇದೆ. ಹಾಗಾಗಿ ಮಳೆಗಾಗಿ ಪ್ರಾರ್ಥಿಸುತ್ತಿದ್ದ ರೈತರು ಈಗ ಬಿಸಿಲಿಗಾಗಿ ಪ್ರಾರ್ಥಿಸುವ ಕಾಲ ಬಂದಿದೆ.
ಈ ವರ್ಷ ತಾಲೂಕಿನೆಲ್ಲೆಡೆ ರಾಗಿ ಬಹಳ ಉತ್ತಮವಾಗಿ ಬೆಳೆದು ಕಟಾವಿಗೆ ಬಂದಿದೆ. ಆದರೆ, ಮಳೆ ಅದಕ್ಕೆ ಅವಕಾಶವೇ ಕೊಡುತ್ತಿಲ್ಲ. ಸತತ ಮಳೆಯಿಂದ ಹೊಲದಲ್ಲಿ ನೀರು ನಿಂತಿದೆ. ಅಲ್ಲದೆ ಇನ್ನೂ ಮೂರ್ನಲ್ಕು ದಿನಗಳ ಕಾಲ ಮಳೆ ಬರುವ ಸಾಧ್ಯತೆಯನ್ನು ಹವಮಾನ ಇಲಾಖೆ ತಿಳಿಸಿದೆ. ಪರಿಸ್ಥಿತಿ ಹೀಗಿರುವಾಗ ಕಟಾವು ಮಾಡುವುದಾದರೂ ಹೇಗೆ, ಕಟಾವು ಮಾಡಿದ್ದ ರಾಗಿ ಒಣಗಿಸಿ ಮಾರುಕಟ್ಟೆಗೆ ಮಾರುವುದಾದರು ಹೇಗೆ?
। ಹೊಸಹಳ್ಳಿ ಚಂದ್ರಣ್ಣ, ರಾಜ್ಯಾಧ್ಯಕ್ಷ, ರೈತ ಸಂಘ
ಕಳೆದ ಎರಡ್ಮೂರು ವರ್ಷ ಉತ್ತಮವಾಗಿ ರಾಗಿ ಬೆಳೆ ಬಂದ ಹಿನ್ನೆಲೆಯಲ್ಲಿ ರೈತರು ಉತ್ಸಾಹದಿಂದ ಈ ವರ್ಷ ಸಾಲಸೂಲ ಮಾಡಿ ರಾಗಿ ಬಿತ್ತಿದ್ದಾರೆ. ಆದರೆ ಅಕಾಲಿಕ ಮಳೆಯಿಂದ ಕಟಾವಿಗೆ ಬಂದಿದ್ದ ರಾಗಿ ಹೊಲದಲ್ಲೇ ಮಲಗಿ ಮೊಳಕೆ ಯೊಡೆಯುತ್ತಿವೆ. ವಿಮೆ ಮಾಡಿಸಿದವರಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ. ಆದರೆ ವಿಮೆ ಮಾಡಿಸದ ರೈತರ ಸ್ಥಿತಿ ಹೇಳತೀರದಾಗಿದ್ದು ಸರ್ಕಾರ ಅತಿವೃಷ್ಠಿ ಪರಿಹಾರದಲ್ಲಿ ರಾಗಿ ಬೆಳೆಗಾರರಿಗೆ ಪರಿಹಾರ ನೀಡಬೇಕು.
। ಕೆಂಕೆರೆ ಸತೀಶ್, ಉಪಾಧ್ಯಕ್ಷ, ರೈತ ಸಂಘ
ಯಳನಾಡು ಗ್ರಾಮದ ನನ್ನ ಜಮೀನಿನಲ್ಲಿ 3 ಎಕರೆ ರಾಗಿ ಬಿತ್ತಿದ್ದೇನೆ. ವಾಯುಬಾರ ಕುಸಿತದಿಂದ ಸುಮಾರು ಎರಡು ಎಕರೆ ರಾಗಿ ಸಂಪೂರ್ಣ ನಷ್ಟವಾಗಿದೆ. ಫಸಲ್ ಬೀಮಾ ಯೋಜನೆಯಲ್ಲಿ 1 ಎಕರೆಗೆ 335 ರೂ ವಿಮೆ ಕಟ್ಟಿದ್ದೇನೆ. ಕಾಲ್ ಸೆಂಟರ್ ನಂಬರ್ ಗೆ ಕರೆ ಮಾಡಿ ದೂರು ಸಹ ದಾಖಲಿಸಿದೆ. ಜಮೀನಿಗೆ ಬಂದು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ವಿಮಾ ಕಂಪನಿಯ ಜೋಶಿ ಹೇಳಿದ್ದಾರೆ. 1 ಎಕರೆಗೆ ವಿಮಾ ಪರಿಹಾರ ಸಿಕ್ಕರೆ ಉಳಿದ ಇನ್ನೊಂದು ಎಕರೆಯ ನಷ್ಟ ತುಂಬಿಕೊಡುವವರಾರು?
| ವೈ.ಎನ್.ಅರುಣ್, ಯುವ ರೈತ, ಯಳನಾಡು
ತಾಲೂಕಿನಲ್ಲಿ ಈ ವರ್ಷ ಬಹಳ ಸಂಖ್ಯೆಯಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ಉತ್ತಮ ಮಳೆಯಾಗಿ ಬೆಳೆಯೂ ಸಹ ಉತ್ತಮವಾಗಿ ಬಂದಿದೆ. ಇನ್ನೇನು ಕಟಾವು ಮಾಡುವ ಹಂತದಲ್ಲಿ ನಿರಂತರವಾಗಿ ಮಳೆ ಬಂದು ನಷ್ಟವಾಗಿದೆ. ಈ ಬಗ್ಗೆ ಇಲಾಖೆಯಿಂದ ಬೆಳೆ ನಷ್ಟದ ಅಂಕಿಅಂಶ ಕೊಡುವಂತೆ ಕೇಳಿದ್ದಾರೆ. ಸೋಮವಾರದಿಂದ ಕೃಷಿ ಸಿಬ್ಬಂದಿ ರೈತರ ಜಮೀನಿಗೆ ತೆರಳಿ ಬೆಳೆ ನಷ್ಟದ ವರದಿ ತಯಾರಿಸುತ್ತಾರೆ. ಪರಿಹಾರದ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ.
। ಡಿ.ಆರ್.ಹನುಮಂತರಾಜು, ಸಹಾಯಕ ಕೃಷಿ ನಿರ್ದೇಶಕ, ಚಿ.ನಾ.ಹಳ್ಳಿ
Comments are closed.