ಬಿಜೆಪಿ ಸರ್ಕಾರದಿಂದ ಪಂಚಾಯತ್ ರಾಜ್‌ ವ್ಯವಸ್ಥೆಗೆ ಶಕ್ತಿ

ಶಿರಾದ ಎಲ್ಲಾ ಕೆರೆಗಳಿಗೆ ನೀರು: ಮಾಧುಸ್ವಾಮಿ

445

Get real time updates directly on you device, subscribe now.

ಶಿರಾ: ಪಂಚಾಯತ್ ರಾಜ್‌ ವ್ಯವಸ್ಥೆಗೆ ಶಕ್ತಿ ತುಂಬಿದ್ದು ಬಿಜೆಪಿ ಸರ್ಕಾರ, ನರೇಂದ್ರ ಮೋದಿಯವರು 15ನೇ ಹಣಕಾಸು ಯೋಜನೆಯ ಅನುದಾನವನ್ನು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ನೀಡಲು ಕ್ರಮ ಕೈಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದ ಪ್ರೆಸಿಡೆನ್ಸಿ ಶಾಲಾ ಆವರಣದಲ್ಲಿ ತಾಲ್ಲೂಕು ಬಿಜೆಪಿ ವತಿಯಿಂದ ವಿಧಾನಪರಿಷತ್‌ ಚುನಾವಣೆಯ ಅಂಗವಾಗಿ ಶಿರಾ, ಮಧುಗಿರಿ, ಪಾವಗಡ ತಾಲೂಕುಗಳ ಗ್ರಾಪಂ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಅಪ್ಪರ್‌ ಭದ್ರ ಯೋಜನೆಯಡಿ ಶಿರಾ ತಾಲ್ಲೂಕಿ 41 ಕೆರೆ ಮಾತ್ರ ಸೇರಿಸಲಾಗಿತ್ತು, ನಮ್ಮ ಸರ್ಕಾರ 65 ಕೆರೆಗಳನ್ನು ಸೇರಿಸಿದೆ, ಅಪ್ಪರ್‌ ಭದ್ರ ಯೋಜನೆಯಡಿ ಶಿರಾ ಮತ್ತು ಚಿಕ್ಕನಾಯಕನಹಳ್ಳಿಗೆ ನೀರಿನ ಹಂಚಿಕೆ ಪ್ರಮಾಣ ಕಡಿಮೆಯಾಗಿದೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ನೀರಿನ ನಿಗದಿಯನ್ನು ಹೆಚ್ಚಿಸಲಾಗುವುದು, ಮುಂದಿನ ದಿನಗಳಲ್ಲಿ ಶಿರಾದ ಎಲ್ಲಾ ಕೆರೆಗಳಿಗೆ ನೀರು ನೀಡಲಾಗುವುದು ಎಂದರು.
ಜಲ್ ಜೀವನ್‌ ಮಿಷನ್ ಗೆ 5.50 ಸಾವಿರ ಕೋಟಿ: ತುಮಕೂರು ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲೂ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬ ಉದ್ದೇಶದಿಂದ ಜಿಲ್ಲೆಯನ್ನು ಜಲ್ ಜೀವನ್‌ ಮಿಷನ್‌ ಯೋಜನೆಗೆ ಒಳಪಡಿಸಲಾಗಿದೆ. ಕೇಂದ್ರ ಸರ್ಕಾರ ಜಲ್ ಜೀವನ್‌ ಯೋಜನೆ ಅನುಷ್ಠಾನಗೊಳಿಸಲು ಸುಮಾರು 5.50 ಸಾವಿರ ಕೋಟಿ ಅನುದಾನ ನೀಡಿದೆ. ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಮಾತನಾಡಿ, ವಿಧಾನಪರಿಷತ್ ನಲ್ಲಿ ಬಿಜೆಪಿ ಸರ್ಕಾರದ ಸಂಖ್ಯಾಬಲ ಹೆಚ್ಚಿದ್ದರೆ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ. ಆದ್ದರಿಂದ ಗ್ರಾಮ ಪಂಚಾಯಿತಿ ಸದಸ್ಯರು ಬಿಜೆಪಿ ಅಭ್ಯರ್ಥಿಯ ಗೆಲುಗೆ ಒಗ್ಗಟ್ಟಿನಿಂದ ಶ್ರಮವಹಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ, ಶಿರಾ ಉಪ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಕಂಡಂತೆ ವಿಧಾನಪರಿಷತ್‌ ಚುನಾವಣೆಯಲ್ಲೂ ಐತಿಹಾಸಿಕ ಗೆಲುವಿಗೆ ಕಾರಣರಾಗಿ ಎಂದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 7 ವರ್ಷದ ಅವಧಿಯಲ್ಲಿ ಸುಭದ್ರ ಸರ್ಕಾರ ನಡೆಸಿ ಅನೇಕ ಜನಪರ ಕಾರ್ಯಕ್ರಮ ನೀಡಿದ್ದಾರೆ. ರೈತರು, ಸಾರ್ವಜನಿಕರಿಗೆ ಯೋಜನೆಗಳನ್ನು ತಂದಿದ್ದಾರೆ ಎಂದರು.
ವಿಧಾನಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಮಾತನಾಡಿ, ಯಾವುದೇ ಕಾಯಿದೆ ವಿಧಾನಸಭೆಯಲ್ಲಿ ಪಾಸಾಗಿ ವಿಧಾನಪರಿಷತ್ ನಲ್ಲಿ ಪಾಸಾಗದಿದ್ದರೆ ಸರ್ಕಾರಕ್ಕೆ ಮುಜುಗರವಾಗುತ್ತದೆ. ಆದ್ದರಿಂದ ಕೆಲವು ಕಾಯ್ದೆಗಳನ್ನು ಜಾರಿಗೆ ತರಲು ವಿಧಾನಪರಿಷತ್ ನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿರಬೇಕು, ಆದ್ದರಿಂದ ವಿಧಾನಪರಿಷತ್‌ 25 ಸ್ಥಾನಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಆರ್‌.ಗೌಡ, ನಾರು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್‌, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಸುರೇಶ್‌ ಗೌಡ, ದಾವಣಗೆರೆ ವಿಭಾಗ ಸಹ ಪ್ರಭಾರ ಲಕ್ಷ್ಮೀಶ್‌, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್‌, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಚಂಗಾವರ ಮಾರಣ್ಣ, ಯಲಿಯೂರು ಬಸವರಾಜು ಸೇರಿದಂತೆ ಬಿಜೆಪಿಯ ಮೂರು ತಾಲೂಕಿನ ಅಧ್ಯಕ್ಷರು, ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!