ಬೆಮೆಲ್ ವಿರುದ್ಧ ಪ್ರತಿಭಟನೆ ಕೈ ಬಿಟ್ಟ ಯುವ ಕಾಂಗ್ರೆಸ್

429

Get real time updates directly on you device, subscribe now.

ತುರುವೇಕೆರೆ: ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿರುವ ಜೆಡಿಎಸ್‌ ಪಕ್ಷದ ವಿಧಾನಪರಿಷತ್‌ ಸದಸ್ಯ ಬೆಮೆಲ್‌ ಕಾಂತರಾಜ್‌ ವಿರುದ್ಧ ಕ್ಷೇತ್ರಕ್ಕೆ ಹೊರಗಿನವರು ಬೇಡ ಎಂಬ ಘೋಷಣೆಯೊಂದಿಗೆ ಪಟ್ಟಣದಲ್ಲಿ 15 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು, ಆದರೆ ನೀತಿ ಸಂಹಿತೆ ಜಾತಿ ಇರುವ ಹಿನ್ನಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಗಿದೆ ಎಂದು ಯುವ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರಾದ ವಿನಯ್‌ ಎನ್‌. ಗೌಡ ಹಾಗೂ ಗುರುರಾಜ್‌, ಎಂ.ಬಿ.ಯಾದವ್‌ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ ಪಕ್ಷದಿಂದ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿರುವ ಬೆಮೆಲ್‌ ಕಾಂತರಾಜ್‌ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿರುವುದು ಖಂಡನೀಯ. ಸ್ಥಳೀಯವಾಗಿ ಅನೇಕ ನಾಯಕರು ಕಾಂಗ್ರೆಸ್‌ ಪಕ್ಷ ಸಂಘಟಿಸುವಲ್ಲಿ ಸುಮಾರು ವರ್ಷಗಳಿಂದ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಇವರ ಸೇವೆಯನ್ನು ಲೆಕ್ಕಿಸದೆ ನಮ್ಮ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿ ಪಕ್ಷದಲ್ಲಿ ಒಡಕು ಉಂಟು ಮಾಡಲು ಮುಂದಾಗಿರುವುದು ಅವರ ಘಟನತೆಗೆ ಶೋಭೆ ತರುವುದಿಲ್ಲ, ಮುಂಬರುವ ವಿಧಾನಸಭೆ ಚುನಾವಣೆಗೆ ನಮ್ಮ ಪಕ್ಷದಿಂದ ಸ್ಥಳೀಯರಿಗೆ ಹೈ ಕಮಾಂಡ್‌ ಆದ್ಯತೆ ನೀಡಬೇಕು, ನೀತಿ ಸಂಹಿತೆ ಮುಗಿದ ನಂತರ ಹೊರಗಿನವರಿಗೆ ಬೇಡ ಎಂಬ ಘೋಷಣೆಯೊಂದಿಗೆ ಯುವ ಕಾಂಗ್ರೆಸ್‌ ಬೆಮೆಲ್‌ ವಿರುದ್ಧ ಹೋರಾಟ ನಡೆಸಲಿದೆ ಎಂದು ಸ್ಪಷ್ಟ ಪಡಿಸಿದರು.
ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆಯಿದ್ದು ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ, ತುರುವೇಕೆರೆಯಲ್ಲಿಯೂ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಗೆಲುವು ಸಾಧಿಸುವುದು ಖಂಡಿತ, ಹೊರಗಿನಿಂದ ಬಂದು ಕಾಂಗ್ರೆಸ್‌ ಅಭ್ಯರ್ಥಿ ನಾನೇ ಎಂದು ಹೇಳಿಕೊಂಡು ಓಡಾಡುವವರಿಂದ ಪಕ್ಷ ಸದೃಡವಾಗಲಾರದು, ತಾಲೂಕಿನ ಮತದಾರರು ಸಹ ಯಾರೇ ಆದರೂ ಸರಿ ನಮ್ಮ ಕ್ಷೇತ್ರದವರಿಗೆ ಮತ ಹಾಕೋಣ ಎಂಬ ತೀರ್ಮಾನದಲ್ಲಿದ್ದಾರೆ, ಹೊರಗಿನವರಿಗೆ ಸ್ಥಳೀಯ ಸಮಸ್ಯೆಗಳ ಅರಿವು ಇರುವುದಿಲ್ಲ, ಕೇವಲ ಅಧಿಕಾರಕ್ಕಾಗಿ ತುರುವೇಕೆರೆ ಜನತೆಯನ್ನು ಗೊಂದಲಕ್ಕೆ ದೂಡುವ ವ್ಯಕ್ತಿಗಳಿಂದ ಕ್ಷೇತ್ರದ ಮತದಾರರು ಅಂತರ ಕಾಯ್ದುಕೊಳ್ಳಲಿದ್ದಾರೆ ಎಂದರು.
ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ರಾಜೇಶ್‌, ಸಿದ್ದನಟ್ಟಿ ಪ್ರವೀಣ್‌, ಜಿತೇಂದ್ರ, ತ್ಯಾಗರಾಜು, ದಿಲೀಪ್‌, ಲೋಹಿತ್‌, ಸ್ವಾಮಿ, ಹೊನ್ನೇಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!