ಅಬ್ಬರಿಸಿದ ಮಳೆ- ಜರುಗಿದ ಬೃಹತ್‌ ಬಂಡೆ

568

Get real time updates directly on you device, subscribe now.

ಮಧುಗಿರಿ: ಸುಮಾರು 20 ವರ್ಷಗಳ ನಂತರ ಬರಿದಾಗಿದ್ದ ಕೆರೆ ಕಟ್ಟೆ, ತೊರೆಗಳು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಯಮಂಗಲಿ, ಉತ್ತರ ಪಿನಾಕಿನಿ ನದಿಗಳು ಜಲಧಾರೆಯಾಗಿ ಹರಿದು ರೈತ ಮೊಗದಲ್ಲಿ ಮಂದಹಾಸ ಬೀರತೊಡಗಿವೆ.
ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಜೋರು ಮಳೆಯಾಗಿದ್ದು, ಕೆರೆ, ಕಟ್ಟೆಗಳು ಭರ್ತಿಯಾಗಿದ್ದು ಸಿದ್ದಾಪುರ, ಚೋಳೆನಹಳ್ಳಿ, ಹೊಸಕೆರೆ, ವಿರುಪಗೊಂಡನಹಳ್ಳಿ, ಹನುಮಂತಪುರ, ವೀರಣ್ಣನಹಳ್ಳಿ, ಕೆ.ಬಸವನಹಳ್ಳಿ, ಸಿದ್ದರಕಟ್ಟೆ, ಚಿನಕವಜ್ರ ಗ್ರಾಮಗಳ ಕೆರೆಗಳು ಕೋಡಿ ಹರಿಯುತ್ತಿವೆ.
ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಮಧುಗಿರಿ, ಗೌರಿಬಿದನೂರು, ಹಿಂದೂಪುರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಅಗಸರ ಹೊಳೆಯ ಸೇತುವೆಯು ಮಳೆಯ ನೀರಿನ ರಭಸಕ್ಕೆ ಶಿಥಿಲವಾಗಿದೆ ಹಾಗೂ ಪಟ್ಟಣದ ಬಸವಣ್ಣನ ಬೆಟ್ಟದ ಬುಡದಲ್ಲಿ ಬೃಹತ್‌ ಬಂಡೆಯೊಂದು ಸುಮಾರು 3 ಅಡಿಗಳಷ್ಟು ದೂರ ಜರುಗಿದ್ದು, ಈ ಬಂಡೆಯು ಒಂದು ವೇಳೆ ಜಾರಿದರೆ ಪಟ್ಟಣದ ಬಸ್‌ ನಿಲ್ದಾಣಕ್ಕೆ ಹೋಗುವ ದಾರಿಯು ಸಂಪರ್ಕ ಕಳೆದುಕೊಳ್ಳಲಿದೆ.
ಮಧುಗಿರಿ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಸುಮಾರು 20 ವರ್ಷಗಳ ನಂತರ ಜಯಮಂಗಲಿ ನದಿ ತುಂಬಿ ಹರಿಯುತ್ತಿದೆ, ನದಿ ಹರಿಯುವುದನ್ನು ನೋಡಲು ಜನರು ಸಾಗರೋಪಾದಿಯಲ್ಲಿ ಜಮಾಯಿಸುತ್ತಿದ್ದಾರೆ.
ಮೊಬೈಲ್ ಗಳಲ್ಲಿ ಫೋಟೊ ತೆಗೆದುಕೊಂಡು, ವೀಡಿಯೊ ಮಾಡಿಕೊಂಡು ಇತರರಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ಕಳೆದ ಕೆಲ ವರ್ಷಗಳಿಂದ ಒಣಗಿ ನಿಂತಿದ್ದ, ನೀರನ್ನೇ ಕಾಣದ ಕೆರೆಗಳಿಗೂ ಜೀವ ಕಳೆ ಬಂದಿದೆ, ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಕೋಡಿ ಹರಿಯುತ್ತಿದೆ, ಕೆರೆ ಕೋಡಿಯಲ್ಲಿ ನೀರು ಹರಿಯುವುದನ್ನು ನೋಡಲು ಜನರು ಬರುತ್ತಿದ್ದಾರೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರು ಅಂತ್ಯದ ನಂತರ ಅಕ್ಟೋಬರ್‌ ತಿಂಗಳ ಕೊನೆಯವರೆಗೂ ಮಳೆಯಾಗುತ್ತದೆ. ಹೆಚ್ಚೆಂದರೆ ನವೆಂಬರ್‌ ತಿಂಗಳ ಆರಂಭದಲ್ಲಿ ಒಂದೆರಡು ಬಾರಿ ಸುರಿಯುತ್ತದೆ, ಆದರೆ ಈ ಸಲ ನವೆಂಬರ್ ಮಧ್ಯಭಾಗದಲ್ಲೂ ಮಳೆಯಾಗುತ್ತಿದೆ.
ಕಸಬ ಹೋಬಳಿಯ ಗೋಪಗೊಂಡನಹಳ್ಳಿಯ ಅಂಗನವಾಡಿಗೆ ಮಳೆಯ ನೀರು ನುಗ್ಗಿದ್ದು ನಂತರ ಸಹಾಯಕಿಯರು ಮಳೆಯ ನೀರನ್ನು ಹೊರ ಹಾಕಿದರು.
ಕೆಲ ಗ್ರಾಮಗಳಲ್ಲಿ ಓಡಾಡುವ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ, ಪಟ್ಟಣದ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬೃಹತ್‌ ಬಂಡೆ ಅಡ್ಡವಾಗಿ ಸ್ಥಾನ ಪಲ್ಲಟವಾಗಿದ್ದರಿಂದ ಅಧಿಕಾರಿಗಳು ಬೇರೆ ಮಾರ್ಗದಲ್ಲಿ ವಾಹನಗಳ ವ್ಯವಸ್ಥೆ ಕಲ್ಪಿಸಿದ್ದರು.

Get real time updates directly on you device, subscribe now.

Comments are closed.

error: Content is protected !!