ಕುಣಿಗಲ್: ತಾಲೂಕಿನ ರೈತರಿಗೆ ಬೆಸ್ಕಾಂ ಸಿಬ್ಬಂದಿ ಸಮರ್ಪಕ ಹಣ ಕಟ್ಟಿಸಿಕೊಂಡರೂ ವಿದ್ಯುತ್ ಪರಿವರ್ತಕ, ಸಂಪರ್ಕ ನೀಡದೆ ಇಲಾಖೆಯ ಪ್ರತಿಯೊಂದು ಸೇವೆಗೂ ಲಂಚಕ್ಕೆ ಬೇಡಿಕೆ ಇಡುವುದನ್ನು ಖಂಡಿಸಿ ರೈತ ಸಂಘದ ನೇತೃತ್ವದಲ್ಲಿ ರೈತರು ಬೆಸ್ಕಾಂ ವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು.
ಬುಧವಾರ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್, ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ನೇತೃತ್ವದಲ್ಲಿ ಸಂಘಟಿತರಾದ ರೈತರು ಬೆಸ್ಕಾಂ ಕಚೇರಿವರೆಗೂ ಪ್ರತಿಭಟನೆ ನಡೆಸಿ, ಇಲಾಖಾ ಧೋರಣೆ ಖಂಡಿಸಿ ಘೋಷಣೆ ಕೂಗಿ, ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಈ ವೇಳೆ ಆನಂದ್ ಪಟೇಲ್ ಮಾತನಾಡಿ, ಬೆಸ್ಕಾಂ ತತ್ಕಾಲ್ ಯೋಜನೆ ಜಾರಿಗೊಳಿಸಿದ್ದು, ರೈತರು ಸಾಲ ಸೋಲ ಮಾಡಿ ಬಡ್ಡಿಗೆ ಹಣತಂದು ಪೂರ್ಣ ಹಣ ಕಟ್ಟಿದರೂ ಇಲಾಖಾಧಿಕಾರಿಗಳು ಸಂಪರ್ಕ ನೀಡುತ್ತಿಲ್ಲ, ಎಚ್.ವಿ.ಡಿ.ಎಸ್ ಯೋಜನೆಯಡಿಯಲ್ಲೂ ಹಣಕಟ್ಟಿಸಿಕೊಂಡು ಗುಣಮಟ್ಟದ ಪರಿವರ್ತಕ ನೀಡುತ್ತಿಲ್ಲ, ಕೇಳಿದರೆ ಸರ್ವಾಧಿಕಾರಿ ಧೋರಣೆ, ರೈತ ಹಣ ಕಟ್ಟಿದರೂ ಪರಿವರ್ತಕ ನೀಡದೆ ಸರ್ಕಾರ ದಿವಾಳಿಯಾಗಿದೆ. ಕಳಪೆ ಗುಣಮಟ್ಟದ ವಿದ್ಯುತ್ ನೀಡಿ ದುಬಾರಿ ಶುಲ್ಕ ವಸೂಲು ಮಾಡುತ್ತಾ ರೈತರ ಶೋಷಣೆ ಮಾಡುತ್ತಿದೆ. ರೈತ ಅತ್ತ ಬಡ್ಡಿ ದುಡ್ಡು ಕಟ್ಟಲಾರದೆ, ಇತ್ತ ವಿದ್ಯುತ್ ಇಲ್ಲದೆ ಬೆಳೆ ಬೆಳೆಯಲಾರದೆ ಅತಂತ್ರ ಸ್ಥಿತಿಯಲ್ಲಿ ಬದುಕುವ ಸ್ಥಿತಿಗೆ ಸರ್ಕಾರವೇ ನೂಕುತ್ತಿದೆ, ಸರ್ಕಾರಕ್ಕೆ ನಾಚಿಕೆ ಆಗಬೇಕು, ಇಂತಹ ಸರ್ಕಾರದಲ್ಲಿ ಅಧಿಕಾರಿಗಳು ಪ್ರತಿಯೊಂದು ಸೇವೆಗೂ ಹಣ ಕಟ್ಟಿಸಿಕೊಂಡರೂ ಸೇವೆ ನೀಡಲು ಲಂಚ ನೀಡಬೇಕು, ತತ್ಕಾಲ್ ಎಂದರೆ ತ್ವರಿತ ಸೇವೆ, ತ್ವರಿತ ಎಂದರೆ ವರ್ಷಗಟ್ಟಲೆನಾ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಅಂಕನಹಳ್ಳಿಯ ರೈತರೊಬ್ಬರು, ಬೆಸ್ಕಾಂ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಕರೆ ಮಾಡಿದರೆ ಅಶ್ಲೀಲವಾಗಿ ಮಾತನಾಡುತ್ತಾರೆ, ರೈತರೆಂದರೆ ಲೆಕ್ಕಕ್ಕೆ ಇಲ್ಲದಂತೆ ವರ್ತಿಸುತ್ತಾರೆಂದು ಆರೋಪಿಸಿ ಇಇ ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ಬೆಸ್ಕಾಂ ಇಇ ತಾವು ಆ ರೀತಿ ವರ್ತಿಸಿಲ್ಲ, ವರ್ತಿಸಿದ್ದಲ್ಲಿ ಕೆಲಸಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಏರುಧ್ವನಿಯಲ್ಲಿ ಉತ್ತರಿಸಿದ್ದು ರೈತರ ತಾಳ್ಮೆ ಕೆರಳಿಸಿ ಗೊಂದಲಕ್ಕೆ ಕಾರಣವಾಗಿ, ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ, ರೈತರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಯಾವುದೇ ಅಧಿಕಾರಿಯಾಗಲಿ ಅವರನ್ನು ಅವರ ಕಚೇರಿ ಮುಂದೆಯೆ ಕಂಬಕ್ಕೆ ಕಟ್ಟುತ್ತೇವೆ, ನಿಮ್ಮ ಕಾನೂನಿಗೆ ಹೆದರುವುದಿಲ್ಲ, ಜವಾಬ್ದಾರಿಯಿಂದ ವರ್ತಿಸಿದರೆ ಕ್ಷೇಮ ಎಂದು ಎಚ್ಚರಿಸಿದರು.
ಬೆಸ್ಕಾಂ ಇಇ ಪುರುಷೋತ್ತಮ್ ಮಾತನಾಡಿ, ತತ್ಕಾಲ್ ಸೇವೆಯಲ್ಲಿ ಕೇವಲ 50 ಬಾಕಿ ಇದೆ, ಹಂತ ಹಂತವಾಗಿ ಸಂಪರ್ಕ ನೀಡುತ್ತಿದ್ದೇವೆ ಎಂದಾಗ ರೈತರು ಹಣ ಕೊಟ್ಟವರಿಗೆ ಮೊದಲು ಕೊಡುತ್ತೀರಾ, ಸಿನಿಯಾರಿಟಿ ಚೆಕ್ ಮಾಡೊಲ್ಲ, ರೈತರು ಹಾಳಾದರೆ ನಿಮಗೇನು ಎಂದು ವಾಗ್ವಾದಕ್ಕೆ ಇಳಿದರು. ಕೆಲಕಾಲ ಚರ್ಚೆ ನಡೆದು ಸಮರ್ಪಕ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಅಧಿಕಾರಿಗಳು ರೈತರ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳದೆ ಇದ್ದರೆ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ರೈತ ಸಂಘದ ಮುಖಂಡರಾದ ನಾರಾಯಣಪ್ಪ, ತಮ್ಮಣ್ಣಗೌಡ, ಗೋವಿಂದರಾಜು, ವೆಂಕಟೇಶ, ಪುಟ್ಟಸ್ವಾಮಿ, ನಾರಾಯಣ, ರಾಜೇಶ ಇತರರು ಇದ್ದರು.
ಬೆಸ್ಕಾಂನಲ್ಲಿ ಲಂಚಾವತಾರ- ರೈತರಿಂದ ಪ್ರತಿಭಟನೆ
Get real time updates directly on you device, subscribe now.
Prev Post
Comments are closed.