ಇನ್ನೆರಡು ದಿನದಲ್ಲಿ ಜೆಡಿಎಸ್ ನ ಎಂ.ಎಲ್.ಸಿ ಅಭ್ಯರ್ಥಿ ಘೋಷಣೆ

ಕಾಂಗ್ರೆಸ್ ನಿಂದ ದೇಶ ಒಡೆಯುವ ಕೆಲಸ: ಹೆಚ್.ಡಿ.ಕೆ

975

Get real time updates directly on you device, subscribe now.

ಕೊರಟಗೆರೆ: ವಿಧಾನ ಪರಿಷತ್‌ ಹಾಗೂ ವಿಧಾನಸಭೆ ಚುನಾವಣೆ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷದ ರಾಷ್ಟ್ರ, ರಾಜ್ಯ ನಾಯಕರು ಜಾತಿ ರಾಜಕಾರಣ ವೈಭವೀಕರಿಸಿ ಭಾರತ ದೇಶವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಮೊನ್ನೆ ಕಾಂಗ್ರೆಸ್‌ ಸಭೆಯಲ್ಲಿ ದಲಿತರು, ಅಲ್ಪಸಂಖ್ಯಾತರು ಒಂದಾಗಬೇಕು ಎಂದು ಕರೆ ನೀಡಿದ್ದಾರೆ, ಜಾತಿ ಹೆಸರಿನಲ್ಲಿ ಚರ್ಚೆ ನಡೆದಿದೆ, ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು ಎನ್ನುವ ಉದ್ದೇಶದಿಂದ ಜೈ ಅಹಿಂದ್‌ ಘೋಷಣೆ ಕೂಗಿದ್ದಾರೆ, ಈಗ ದೇಶ ಒಟ್ಟಾಗಿರಲು ನಾವು ಜೈಹಿಂದ್‌ ಘೋಷಣೆ ಕೂಗ್ತೇವೆ, ಆದರೇ ಕಾಂಗ್ರೆಸ್‌ ಅವರು ಜೈ ಅಹಿಂದ್‌ ಎಂದು ಘೋಷಣೆ ಕೂಗಲು ಹೊರಟಿದ್ದಾರೆ, ಚುನಾವಣೆಯಲ್ಲಿ ಮತ ಪಡೆಯಲು ಜಾತಿ ಹೆಸರಿನ ರಾಜಕಾರಣ ವೈಭವೀಕರಿಸುತ್ತಿದ್ದಾರೆ, ಜಾತ್ಯತೀತತೆ ಬಗ್ಗೆ ಮಾತನಾಡುವ ಇವರು ತಮ್ಮ ಆತ್ಮಕ್ಕೆ ಕೇಳಿಕೊಳ್ಳಲಿ, ಈ ವಿಚಾರದಲ್ಲಿ ನಾನು ಜಾತಿ ರಾಜಕಾರಣ ಮಾಡೋದಕ್ಕೆ ಹೋಗೋದಿಲ್ಲ ಎಂದರು.
ತುಮಕೂರಿನ ವಿಧಾನಪರಿಷತ್‌ ಚುನಾವಣಾ ಅಭ್ಯರ್ಥಿ ಹೆಸರು ಒಂದೆರಡು ದಿನದಲ್ಲಿ ಘೋಷಣೆಯಾಗುತ್ತೆ, ಕೆಐಎಡಿಬಿ ಅಧಿಕಾರಿ ಅನಿಲ್‌ ಕುಮಾರ್‌ ರಾಜೀನಾಮೆಗೂ, ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ, ಮಾಧ್ಯಮದಲ್ಲಷ್ಟೆ ಅವರ ಹೆಸರು ಕೇಳಿ ಬರುತ್ತಿದೆ, ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಬಳಿಕ ತೀರ್ಮಾನಿಸಲಾಗುವುದು ಎಂದರು.
ತುಮಕೂರಿನಲ್ಲಿ ದೇವೇಗೌಡರ ಸೋಲಿನ ವಿಚಾರದ ಬಗ್ಗೆ ಮಾತನಾಡಿ, ಅದೆಲ್ಲಾ ಮುಗಿದು ಹೋದ ಅಧ್ಯಾಯ, ಕಾಂಗ್ರೆಸ್‌ ಜೊತೆ ಸೇರಿ ಸರ್ಕಾರ ಮಾಡಿದ್ದೇ ನಮ್ಮ ಪಕ್ಷದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ, ಅದನ್ನು ಒಂದೊಂದಾಗಿ ಸರಿಪಡಿಸಿಕೊಳ್ಳಬೇಕಿದೆ, ಹಾಗಾಗಿ ಪಕ್ಷದಲ್ಲಿ ಎಲ್ಲವನ್ನೂ ಆಂತರಿಕ ತೀರ್ಮಾನವಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಬಿಟ್‌ ಕಾಯಿನ್‌ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಬಿಟ್‌ ಕಾಯಿನ್‌ ಹಗರಣ 2016 ರಲ್ಲೇ ನಡೆಯುತ್ತಿತ್ತು, ಕಾಂಗ್ರೆಸ್‌ ಸರ್ಕಾರ ಅಂದು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

Get real time updates directly on you device, subscribe now.

Comments are closed.

error: Content is protected !!