ಕುಣಿಗಲ್: ಅಧಿಕ ಲಾಭ, ಕಮಿಷನ್ ಆಸೆಗೆ ಪಟ್ಟಣದ ಹಲವಾರು ಯುವ ಜನತೆ ಚೈನ್ ಲಿಂಕ್ ಫೈನಾನ್ಸ್ ಆಪ್ ಗೆ ಹಣ ಹೂಡಿಕೆ ಮಾಡಿ ಇದೀಗ ಆಪ್ ಕಾರ್ಯ ನಿರ್ವಹಿಸದೆ ಬಂದ್ ಆದ ಕಾರಣ ಅತಿಯಾಸೆ ಗತಿಗೇಡು ಎಂಬಂತೆ ಪೆಚ್ಚುಮೋರೆ ಹಾಕಿಕೊಂಡಿದ್ದಾರೆ.
ಕಳೆದ ಐದಾರು ತಿಂಗಳಿನಿಂದ ವ್ಯವಸ್ಥಿತವಾಗಿದ್ದ ಹಣಕಾಸು ನಿರ್ವಹಣೆ ಆನ್ ಲೈನ್ ಮೊಬೈಲ್ ಆಪ್ ಹೂಡಿಕೆದಾರ ಗ್ರಾಹಕರಿಗೆ ಚಿನ್ನದ ಮೊಟ್ಟೆಯಾಗಿತ್ತು. ಕಂಪನಿಯ ಮೂಲ ಯಾವುದು, ಎಲ್ಲಿಯದು ಎಂದು ಗೊತ್ತಿಲ್ಲ, ಬೆಂಗಳೂರಿನಿಂದ ಅಗಮಿಸಿದ ಅನಾಮಿಕನೊಬ್ಬ ಈ ಆಪ್ ಬಗ್ಗೆ ಕೆಲ ಯುವಕರಿಗೆ ಮಾಹಿತಿ ನೀಡಿ ಫೋನ್ ಪೇ ಮೂಲಕ ಒಂದು ನಂಬರಿಗೆ ಹಣ ಹಾಕಿಸಿದ್ದಾನೆ. ಹೂಡಿಕೆಯು ಚೈನ್ ಲಿಂಕ್ ಸ್ವರೂಪದ ಹಣ ವಹಿವಾಟಿನ ವ್ಯವಸ್ಥೆಯಾಗಿದೆ. ಕನಿಷ್ಟ ಮೂರು ಸಾವಿರದಿಂದ ಗರಿಷ್ಟ ಎರಡು ಲಕ್ಷದ ವರೆಗೂ ಹೂಡಿಕೆ ಮಾಡಬಹುದಾಗಿದೆ.
ಒಬ್ಬ ವ್ಯಕ್ತಿ ಮೊದಲೆ ಸೂಚಿಸಿದ ಫೋನ್ ಪೇ ನಂಬರಿಗೆ ಮೂರು ಸಾವಿರ ಹೂಡಿಕೆ ಮಾಡಿದ ನಂತರ ಆತನಿಗೆ ಒಂದು ಐಡಿ ಬರಲಿದ್ದು, ಈ ಐಡಿ ಮೂಲಕ ಇತರೆಯವರಿಗೆ ಹಣ ಹೂಡಲು ಪ್ರೇರೇಪಿಸಿ ಈತನ ಐಡಿಯಿಂದ ಒಂದು ದಿನಕ್ಕೆ ಮೂರು ಮಂದಿಯ ಹೂಡಿಕೆ ಮಾಡಿಸಿದರೆ ಪ್ರತಿ ಹೂಡಿಕೆಗೆ ಒಂದು ಸಾವಿರ, ನಿರ್ದಿಷ್ಟ ಅವಧಿಗೆ ದಿನಕ್ಕೆ 144 ರೂ. ಮೊದಲ ಹೂಡಿಕೆದಾರನಿಗೆ ಕಮಿಷನ್, ಲಾಭದ ಮೂಲಕ, ಹಣ ನೀಡಲಾಗುತ್ತದೆ, ಇದೆ ರೀತಿ ಮೊದ ಮೊದಲು ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಸಾಕಷ್ಟು ಮಂದಿ ಹಣ ಹೂಡಿಕೆ ಮಾಡಿ ಸೂಕ್ತ ಲಾಭಾಂಶ ಪಡೆದರು. ಇವರು ಪಡೆದ ಲಾಭ, ಬಡ್ಡಿಯ ಆಸೆಗೆ ಮರುಳಾಗಿ ಕೆಲವಾರು ಮಂದಿ ಹೂಡಿಕೆ ಮಾಡಿದರೆ, ಕೆಲವರಂತೂ ಲಕ್ಷದ ಲೆಕ್ಕದಲ್ಲಿ ಹೂಡಿಕೆ ಮಾಡಿದರು, ಆದರೆ ಕಳೆದ ಎರಡು ತಿಂಗಳಿನಿಂದ ಈ ಖಾಸಗಿ ಹಣಕಾಸು ಚೈನ್ ಲಿಂಕ್ ಆಪ್ ಮೂಲಕ ಸಾವಿರಾರು ಮಂದಿ ಹೂಡಿಕೆ ಮಾಡಿ ಲಾಭಾಂಶವೂ ಇಲ್ಲದೆ, ಆಪ್ ಸಹ ಕಾರ್ಯ ನಿರ್ವಹಿಸದೆ ಪೆಚ್ಚುಮೋರೆ ಹಾಕಿಕೊಂಡು ಕುಳಿತಿದ್ದಾರೆ.
ಅಧಿಕ ಲಾಭದ ಆಸೆಗೆ ಹೂಡಿಕೆ ಮಾಡಿ ಅತ್ತ ಲಾಭವೂ ಇಲ್ಲದೆ ಇತ್ತ ಅಸಲು ಇಲ್ಲದೆ ಪೆಚ್ಚುಮೋರೆ ಹಾಕಿಕೊಂಡು ತಮ್ಮ ನೋವು ತಾವೇ ಅನುಭವಿಸುತ್ತಿದ್ದಾರೆ. ಪಟ್ಟಣದಲ್ಲಿ ಕಳೆದ ಕೆಲ ತಿಂಗಳಿನಿಂದ ಈ ಗೊತ್ತುಗುರಿ ಇಲ್ಲದ ಚೈನ್ ಲಿಂಕ್ ಫೈನಾನಸ್ ಆಪ್ ಗೆ 70 ರಿಂದ 80 ಲಕ್ಷ ರೂ. ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ತಾಲೂಕು ಬಿಜೆಪಿ ಅಲ್ಪಸಂಖ್ಯಾತ ಮೊರ್ಚದ ಅಧ್ಯಕ್ಷ ಸಲ್ಮಾನ್, ಬೆಂಗಳೂರಿನಿಂದ ಆಗಮಿಸಿದ ವಿದ್ಯಾವಂತರಂತೆ ಕಾಣುವ ಕೆಲ ಸಂಭಾವಿತರ ಮಾತು ಕೇಳಿ ಬಹಳಷ್ಟು ಯುವಕರು ಹಣ ತೊಡಗಿಸಿ ಕಳೆದುಕೊಂಡಿದ್ದಾರೆ. ದೂರು ನೀಡಲಾಗದೆ ಪರದಾಡುವ ಸ್ಥಿತಿ ಇದೆ, ಇವರೆ ಮೇಲೇ ಬಿದ್ದು ಹಣ ಹಾಕಿದ್ದು ಇದೀಗ ಏನು ಮಾಡಲಾಗದೆ ಪರದಾಡುತ್ತಿದ್ದಾರೆ. ಸಾರ್ವಜನಿಕರು ಇಂತಹ ಆಪ್ ಗಳು ನೀಡುವ ಅಧಿಕ ಬಡ್ಡಿ, ಲಾಭದ ಆಸೆಗೆ ಹಣ ತೊಡಗಿಸದೆ ಕೇಂದ್ರ, ರಾಜ್ಯಸರ್ಕಾರದ ಅಧಿಕೃತ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಹಣ ತೊಡಗಿಸಿ ಸುರಕ್ಷಿತವಾಗಿ ವಹಿವಾಟು ನಡೆಸುವಂತೆ ಮನವಿ ಮಾಡಿದ್ದಾರೆ.
ಚೈನ್ ಲಿಂಕ್ ಆಪ್ ನಂಬಿ ಕೆಟ್ಟ ಜನ
Get real time updates directly on you device, subscribe now.
Prev Post
Next Post
Comments are closed.