ಶಿರಾ: ತಾಲ್ಲೂಕಿನಲ್ಲಿ ನಡೆಯುತ್ತಿದ್ದ ನೀರಿನ ರಾಜಕೀಯ ಪ್ರಸ್ತುತ ವರ್ಷ ತುಂಬಿರುವ ಕೆರೆ ಕಟ್ಟೆಗಳಿಗೆ ಬಾಗಿನ ಅರ್ಪಿಸುವ ಸಂಪ್ರದಾಯಕ್ಕೂ ವಕ್ಕರಿಸಿದ್ದು, ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ಪೈಪೋಟಿಗೆ ಕಾರಣವಾಗಿದೆ.
ಇದಕ್ಕೆ ಪೂರಕ ಎನ್ನುವಂತೆ ಇಲ್ಲಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗುರುವಾರ ಪಕ್ಷದ ತಾಲ್ಲೂಕು ಮತ್ತು ನಗರ ಮಂಡಲ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿದ್ದು, ಶಾಸಕರಿಗೂ ಮುನ್ನ ಬಾಗಿನ ಅರ್ಪಿಸುವುದು ತಪ್ಪು ಎಂದು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಗರಾಧ್ಯಕ್ಷ ವಿಜಯರಾಜ್ ಶಾಸಕರು ತಾಲ್ಲೂಕಿನ ಜನತೆ ಪರವಾಗಿ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಬೇಕು. ನಂತರವೇ ಬೇರೆಯವರು ಪೂಜೆ ಸಲ್ಲಿಸಬೇಕು. ಕನ್ನಂಬಾಡಿ ಕಟ್ಟೆ ತುಂಬಿದರೆ ರಾಜ್ಯದ ಮುಖ್ಯಮಂತ್ರಿ ಮೊದಲಿಗೆ ಬಾಗಿನ ಅರ್ಪಿಸುತ್ತಾರೆ. ಅದರಂತೆ ತಾಲ್ಲೂಕಿನಲ್ಲಿ ಶಾಸಕರಿರುತ್ತಾರೆ. ಅವರೇ ಮೊದಲಿಗೆ ಪೂಜೆ ಸಲ್ಲಿಸಬೇಕು, ಇಂತಹ ಸಾಮಾನ್ಯ ಜ್ಞಾನ ಮಾಜಿ ಸಚಿವ ಜಯಚಂದ್ರರಿಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಾಡದೊರೆ ಒಳ್ಳೆಯವನಾದರೆ ದೇಶ ಸುಭಿಕ್ಷ ಎನ್ನುವ ಮಾತಿದೆ, ಅದರಂತೆ ಪ್ರಸ್ತುತ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಇದಕ್ಕೆ ಶಾಸಕ ರಾಜೇಶ್ ಗೌಡ ಒಳ್ಳೆಯವರು ಎನ್ನುವುದೇ ಕಾರಣ, ನಮ್ಮ ಶಾಸಕರು ಜಿಲ್ಲೆಯ ಇತರೆ ಶಾಸಕರ ಮನವೊಲಿಸಿ ಆಯಾ ಭಾಗಗಳಲ್ಲಿ ಬಳಕೆಯಾಗದ ಹೇಮಾವತಿ ನೀರನ್ನು ಶಿರಾಕ್ಕೆ ಹರಿಸಿದ ಕಾರಣ ಮದಲೂರು ಕೆರೆ ತುಂಬುವ ಹಂತದಲ್ಲಿದೆ, ಇಂಥ ಸಂದರ್ಭದಲ್ಲಿ ನಾಲಾ ಭಾಗದ ಇತರೆ ಕೆರೆ ಅಚ್ಚುಕಟ್ಟುದಾರರನ್ನು ಎತ್ತಿಕಟ್ಟಿ, ರೊಚ್ಚಿಗೆಬ್ಬಿಸುವ ಮೂಲಕ ರಾಜಕೀಯ ಲಾಭ ಪಡೆಯುವ ಮಾಜಿ ಸಚಿವರ ಯೋಜನೆ ವಿಫಲಗೊಳ್ಳಲಿದೆ. ಏಕೆಂದರೆ ಡಿಸೆಂಬರ್ ಅಂತ್ಯದವರೆಗೂ ಹೇಮಾವತಿ ನಾಲೆಯಲ್ಲಿ ನೀರು ಹರಿಯಲಿದ್ದು, ಮದಲೂರು ಕೆರೆ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ ಕಾಮಗಾರಿಯೂ ತಾಲ್ಲೂಕಿನಲ್ಲಿ ಭರದಿಂದ ಸಾಗುತ್ತಿದ್ದು, ತಾಲ್ಲೂಕಿನ 68 ಕೆರೆಗಳಿಗೆ ನೀರು ಹರಿಸಲಾಗುವುದು, ಇದನ್ನೂ ಸಹಿಸದ ಮಾಜಿ ಸಚಿವರು ಹಳ್ಳದ ಮೂಲಕ ನೀರು ಹರಿಸಬೇಕು ಎನ್ನುವಂತೆ ಜನರನ್ನು ಪ್ರಚೋದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮದಲೂರು ಕೆರೆ ತುಂಬಿಸುವ ಕೆಲಸವಿರಬಹುದು, ಭದ್ರಾ ಮೇಲ್ದಂಡೆ ಕೆಲಸ ಇರಬಹುದು, ನಮ್ಮ ಶಾಸಕರು ಎಲ್ಲವೂ ಪ್ರಕೃತಿ, ರೈತರು ಮತ್ತು ಸರ್ಕಾರಕ್ಕೆ ಸೇರಿದ್ದು ಎನ್ನುವ ಉದಾರ ಮಾತನಾಡಿದರೆ, ಮಾಜಿ ಸಚಿವರು ಇದು ನನ್ನದೇ ಕೆಲಸ ಎಂದು ಹೇಳಿಕೊಳ್ಳುತ್ತಾರೆ, ಇದರೊಟ್ಟಿಗೆ ತಾಕತ್ತು, ಗಂಡಸ್ತನ ಎನ್ನುವ ಪದಗಳ ಪ್ರಯೋಗವೂ ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಕುಟುಕಿದರು.
ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆ, ವಿವಿಧ ಗ್ರಾಮಗಳಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕಗಳು, ಅಂಗನವಾಡಿ ಕೇಂದ್ರಗಳ ನಿರ್ಮಾಣದ ಸಹಿತ ವಿವಿಧ ಅಂಶಗಳನ್ನು ಶಾಸಕರ ಅಭಿವೃದ್ಧಿ ಕೆಲಸಗಳು ಎಂದು ವಿವರಿಸಿದರು. ಪಕ್ಷದ ಮಾಜಿ ಅಧ್ಯಕ್ಷರಾದ ಬಸವರಾಜು, ಮಾಲಿಮರಿಯಪ್ಪ, ಮುದಿಮಡು ಮಂಜುನಾಥ್, ರಾಮಕೃಷ್ಣಪ್ಪ, ರಮೇಶ್ ಇತರೆ ಮುಖಂಡರು ಹಾಜರಿದ್ದರು.
Get real time updates directly on you device, subscribe now.
Prev Post
Comments are closed.