ಕಾಂಗ್ರೆಸ್‌ ಜನ ಜಾಗೃತಿ ಯಶಸ್ವಿಗೊಳಿಸಿ: ಡಾ.ರಫಿಕ್

153

Get real time updates directly on you device, subscribe now.

ತುಮಕೂರು: ಕಾಂಗ್ರೆಸ್‌ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡುವ ಬಿಜೆಪಿಗೆ ಉತ್ತರ ನೀಡುವುದಕ್ಕೆ ಕಾಂಗ್ರೆಸ್‌ ಹಮ್ಮಿಕೊಂಡಿರುವ ಜನಜಾಗೃತಿ ಅಭಿಯಾನ ಯಶಸ್ವಿಗೊಳಿಸಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಮಾಜಿ ಶಾಸಕ ಡಾ.ರಫಿಕ್‌ ಅಹಮದ್‌ ಕರೆ ನೀಡಿದರು.
ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಜನಜಾಗೃತಿ ಆಂದೋಲನ ಬಿಜೆಪಿ ಸುಳ್ಳು ವದಂತಿಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್‌ ತೀರ್ಮಾನದಂತೆ ನಡೆಸಲಾಗುತ್ತಿದ್ದು, ಆಂದೋಲನ ಯಶಸ್ವಿಗೊಳಿಸುವ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸಾಧನೆ ಮತ್ತು ಬಿಜೆಪಿ ಸರ್ಕಾರಗಳ ವೈಫಲ್ಯದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಅಭಿಯಾನದ ಅಂಗವಾಗಿ ನ.21 ಭಾನುವಾರ ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ನಿಂದ ಗಾಜಿನಮನೆವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ತುಮಕೂರು ನಗರದ ಕಾರ್ಯಕರ್ತರು, ಬ್ಲಾಕ್‌ ಕಾಂಗ್ರೆಸ್‌ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದರು.
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, 7 ವರ್ಷದಲ್ಲಿ ಶೇ.250 ರಷ್ಟು ಹೆಚ್ಚಳವಾಗಿರುವುದರಿಂದ ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ, ಇದರಿಂದಾಗಿ ಹೊಟೇಲ್‌ ಬಿಲ್‌ ಹೆಚ್ಚಳವಾಗಿದ್ದು, ಜಿಎಸ್‌ಟಿಯಿಂದ ದಿನಸಿ ಬೆಲೆಯೂ ಹೆಚ್ಚಳವಾಗಿ ಮಧ್ಯಮವರ್ಗದ ಜನರು ಪರದಾಡುವಂತಾಗಿದೆ ಎಂದು ದೂರಿದರು.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸಿದ್ಧತೆ ಆರಂಭಿಸಿದ್ದು, ಮುಖಂಡರು ಮತ್ತು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕಿದೆ, ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಾಂಗ್ರೆಸ್‌ ಪಕ್ಷವೇ ಮುಖ್ಯವಾಗಿದ್ದು, ಭಿನ್ನಾಭಿಪ್ರಾಯ ಬಿಟ್ಟು ಒಗ್ಗೂಡಿ ಚುನಾವಣೆ ಎದುರಿಸಬೇಕು ಎಂದರು.
ಪಾಲಿಕೆ ಸದಸ್ಯರಾದ ಸೈಯದ್‌ ನಯಾಜ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷ ಮುಂದಿನ ಬಾರಿ ಸರ್ಕಾರವನ್ನು ರಚಿಸಬೇಕೆಂದರೆ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆ ಗಂಭೀರವಾಗಿ ಪರಿಗಣಿಸಬೇಕು, ಎಲ್ಲಾ ಕ್ಷೇತ್ರಗಳನ್ನು ಒಂದೇ ರೀತಿ ನಡೆಸಬೇಕು, ಸಂಘಟಿತವಾಗಿ ಹೋರಾಟ ಮಾಡಿದರೆ ಮಾತ್ರ ಪಕ್ಷವನ್ನು ಅಧಿಕಾರಕ್ಕೆ ತರಬಹುದು ಎನ್ನುವುದನ್ನು ಅರಿಯಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೈಯದ್‌ ನಯಾಜ್‌, ಶಶಿಹುಲಿಕುಂಟೆ, ಮಹೇಶ್‌, ಶಕೀಲ್‌ ಅಹಮದ್‌, ಜಿಯಾವುಲ್ಲಾ, ಸುಮುಖ, ಮಹಮದ್‌ ಫೀರ್‌, ಗುರು, ಆಟೋ ರಾಜಣ್ಣ, ಅನಿಲ್‌, ಪ್ರಭಾವತಿ ಸುಧೀಶ್ವರ್‌, ಸಿಮೆಂಟ್‌ ಮಂಜಣ್ಣ, ಶೆಟ್ಟಾಳಯ್ಯ, ಸುಜಾತ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!