ಮಳೆ ಹಾನಿ- ತಕ್ಷಣ ಪರಿಹಾರ ನೀಡಲು ಡೀಸಿ ಸೂಚನೆ

195

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಸತತವಾಗಿ ಬಿಡದೆ ಸುರಿಯುತ್ತಿರುವ ಮಳೆಯಿಂದ ಮಾನವ ಮತ್ತು ಜಾನುವಾರುಗಳ ಪ್ರಾಣ ಹಾನಿಯಾದಲ್ಲಿ ಆಯಾ ತಹಶಿಲ್ದಾರ್ ಗಳು ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿ, ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿದ್ದು, ಮಳೆಯ ಪರಿಸ್ಥಿತಿ ಬಗ್ಗೆ ಖುದ್ದು ಅವಲೋಕಿಸಬೇಕೆಂದು ಸೂಚಿಸಿದರು.
ತಾಲ್ಲೂಕು ಕೇಂದ್ರದಲ್ಲಿ ಪ್ರಕೃತಿ ವಿಕೋಪಗಳ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ನಗರ ಮತ್ತು ಗ್ರಾಮೀಣ ಭಾಗಗಳಿಗೆ ಸಂಬಂಧಸಿದಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ, ತಾಲ್ಲೂಕು ಪಂಚಾಯಿತಿಗಳಲ್ಲಿ ಸಹಾಯವಾಣಿ ತೆರೆಯಬೇಕು.
ಹೆಚ್ಚಿನ ಮಳೆಯ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಎಲ್ಲಾ ಸಿಬ್ಬಂದಿ ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ನಿರ್ದೇಶನ ನೀಡಿದರು. ಮಳೆಯಿಂದ ರಸ್ತೆ, ಕೆರೆ, ಮನೆ ಸೇರಿದಂತೆ ಯಾವುದೇ ಹಾನಿಗೆ ಸಂಬಂಧಿಸಿದ ದೂರು, ಮನವಿ ಬಂದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕೆಂದು ಸೂಚಿಸಿದರು.
ತುಂಬಿದ ಕೆರೆ, ಡ್ಯಾಂಗಳನ್ನು ವೀಕ್ಷಿಸಲು ಬರುವ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಅಗತ್ಯತೆಗೆ ಅನುಗುಣವಾಗಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಎಲ್ಲಾ ತಾಲ್ಲೂಕುಗಳಲ್ಲಿ ರಕ್ಷಣಾ ಕಾರ್ಯಪಡೆ ಸಿದ್ಧರಾಗಿರುವಂತೆ ಕ್ರಮ ವಹಿಸಬೇಕು.
ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ, ಹೇಮಾವತಿ ನಾಲಾ ವಲಯದ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆ, ನಾಲೆಗಳ ನೀರಿನ ಮಟ್ಟ ಮತ್ತು ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಕೆರೆ, ನಾಲಾ ಬಫರ್‌ ಜೋನ್ ಗಳಲ್ಲಿ ಅಥವಾ ನೆರೆಯಿಂದ ಹಾನಿ ಉಂಟಾಗಬಹುದಾದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕೆಂದು ಸೂಚಿಸಿದರಲ್ಲದೆ ಸದರಿಯವರ ಸುರಕ್ಷತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮಳೆಯಿಂದ ಹಾನಿಯಾದ, ಹಾನಿಯಾಗಬಹುದಾದ ಸರ್ಕಾರಿ ಶಾಲಾ ಕೊಠಡಿ, ಹಾಸ್ಟೆಲ್ ಗಳ ಸಮೀಕ್ಷೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು ಹಾಗೂ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಯ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಮನೆ ಹಾನಿ ಉಂಟಾದಲ್ಲಿ ಜಂಟಿ ಸಮೀಕ್ಷೆ ನಡೆಸಿ ತಂತ್ರಾಂಶದಲ್ಲಿ ಮಾಹಿತಿ ನಮೂದಿಸಬೇಕು. ಬೆಳೆ ಹಾನಿಯ ಬಗ್ಗೆ ಪರಿಹಾರ ತಂತ್ರಾಂಶದಲ್ಲಿ ಮಾಹಿತಿಯನ್ನು ಇಂದೀಕರಿಸಲು ತಹಶೀಲ್ದಾರರು ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು ಎಂದು ನಿರ್ದೇಶಿಸಿದರು.
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಎಲ್ಲಾ ಮೀನುಗಾರಿಕೆ ಚಟುವಟಿಕೆಗಳ ಮೇಲೆ ವೈಯಕ್ತಿಕ ನಿಗವಹಿಸಿ, ಅಗತ್ಯ ಕ್ರಮಕೈಗೊಳ್ಳಬೇಕು. ಸಂಬಂಧಪಟ್ಟ ಇಲಾಖೆಯವರು ತಮ್ಮ ವ್ಯಾಪ್ತಿಯ ಸಾರ್ವಜನಿಕ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗದ ರೀತಿ ರಸ್ತೆ, ಸೇತುವೆಗಳನ್ನು ತುರ್ತಾಗಿ ತೆರವುಗೊಳಿಸಬೇಕೆಂದು ಸೂಚಿಸಿದರು.

Get real time updates directly on you device, subscribe now.

Comments are closed.

error: Content is protected !!