ನಿಟ್ಟೂರು : ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಅಡಿಕೆ ಕೊಯ್ಲಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ, ಈ ವೇಳೆಗೆ ಸರಿಯಾಗಿ ಅಡಿಕೆ ಕೊಯ್ಲು ಬಂದಿದ್ದು ಗ್ರಾಮೀಣ ಭಾಗದ ರೈತರು ಅಡಿಕೆ ಕೀಳುತ್ತಿದ್ದಾರೆ, ಆದರೆ ಕಿತ್ತ ಅಡಿಕೆಯನ್ನು ಬೇಯಿಸಿ ಅದನ್ನು ಒಣಗಿಸಬೇಕಾಗಿದೆ, ಆದರೆ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ಅಡಿಕೆಯನ್ನು ಹೇಗೆ ಒಣಗಿಸುವುದು ಎಂಬ ಆತಂಕ ಸೃಷ್ಟಿಯಾಗಿದೆ.
ಕನಿಷ್ಠ 8 ದಿನಗಳ ಕಾಲವಾದರೂ ಬಿಸಿಲಿನಲ್ಲಿ ಒಣಗಿದಾಗ ಅಡಿಕೆ ಗುಣಮಟ್ಟ ಕಾಪಾಡಿಕೊಳ್ಳುತ್ತದೆ, ಆದರೆ ಕಳೆದ ವಾರದಿಂದ ಸಹ ಸತತವಾಗಿ ಮಳೆ ಜಿನುಗುತ್ತಲೇ ಇರುವುದರಿಂದ ಅಡಿಕೆ ತೋಟಗಳಿಗೆ ಹೋಗಿ ಇತ್ತ ಮರದಿಂದ ಅಡಿಕೆ ಕೀಳಲು ಸಾಧ್ಯವಾಗದೆ ರೈತರು ಪರದಾಡುತ್ತಿದ್ದಾರೆ, ಇದು ಒಂದು ಕಡೆಯಾದರೆ ಅಡಿಕೆ ಕೆಂಪು ಬಣ್ಣಕ್ಕೆ ತಿರುಗಿ ಗೋಟು ಆಗುತ್ತಿದೆ, ಇದರಿಂದ ಆ ಅಡಿಕೆ ಕಿತ್ತರೆ ಉತ್ತಮ ದರ ಸಿಗುವುದಿಲ್ಲ ಎಂಬ ಆತಂಕ ಸೃಷ್ಟಿಯಾಗಿದೆ.
ಇನ್ನೂ ಕಷ್ಟಪಟ್ಟು ಕಿತ್ತು ಅಡಿಕೆ ಬೇಯಿಸಿ ಈ ಜಡಿಮಳೆಯಲ್ಲಿ ಎಲ್ಲಿ ಒಣಗಿಸುವುದು ಎಂಬುದೇ ದೊಡ್ಡ ಸಮಸ್ಯೆಯಾಗಿದೆ.
ಮಲೆನಾಡು ಭಾಗದಲ್ಲಿ ಈಗಾಗಲೇ ವೈಜ್ಞಾನಿಕವಾಗಿ ಅಡಿಕೆ ಒಣಗಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ, ಆದರೆ ನಮ್ಮಲ್ಲಿ ಇನ್ನೂ ಅಂತಹ ವೈಜ್ಞಾನಿಕತೆಯನ್ನು ರೈತರು ಕಂಡುಕೊಂಡಿಲ್ಲ.
ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ, ತುರುವೇಕೆರೆ, ಭಾಗಗಳಲ್ಲಿ ಅತ್ಯಧಿಕ ಅಡಿಕೆ ಬೆಳೆ ಇದ್ದು ಸಾಮಾನ್ಯವಾಗಿ ಈ ಕಾಲದಲ್ಲಿ ಅಡಿಕೆ ಕಿತ್ತಾಗ ಬಿಸಿಲು ಇರುತ್ತಿತ್ತು, ಆದರೆ ಈ ವರ್ಷ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಕಂಡಿರುವುದರಿಂದ ಬಿಸಿಲನ್ನೆ ಕಾಣದೆ ಇರುವುದರಿಂದ ಅಡಿಕೆ ಬೆಳೆಗಾರರು ಯಾವುದೇ ವೈಜ್ಞಾನಿಕ ಒಣಗಿಸುವಂತಹ ಕಲೆ ಗೊತ್ತಿಲ್ಲದೆ ಇದ್ದು ಚಾಪೆಯ ಮೇಲೆ ಬಿಸಿಲಿನಲ್ಲಿ ಒಣಗಿಸುವುದು ಸಾಮಾನ್ಯ, ಆದರೆ ಈ ವರ್ಷ ಮಳೆ ಬೀಳುತ್ತಿರುವುದರಿಂದ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ, ಒಣಗಿಸದೆ ಹೋದರೆ ಬೂಷ್ಟು ಹಿಡಿದು ಅಡಿಕೆ ಹಾಳಾಗುತ್ತದೆ ಮತ್ತು ತೂಕದಲ್ಲಿಯೂ ಕಡಿಮೆಯಾಗುವುದರಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.
ಇತ್ತೀಚೆಗೆ ಅಡಿಕೆಗೆ ಬಂಗಾರದ ಬೆಲೆ ಬಂದಿರುವುದರಿಂದ ಸ್ವಲ್ಪವೂ ಅಡಿಕೆಯನ್ನು ಕಳೆಯುವಂತಹ ಸ್ಥಿತಿಯಲ್ಲಿ ರೈತರು ಇಲ್ಲ, ಸದ್ಯ ಯಾವಾಗ ಮಳೆ ಕಡಿಮೆಯಾಗುತ್ತದೆಯೋ, ಬಿಸಿಲು ಬರುತ್ತದೆಯೋ ಎಂಬ ಆತಂಕದಲ್ಲಿಯೇ ಅಡಿಕೆ ಬೆಳೆದ ರೈತರು ಕಾಲ ಕಳೆಯುವಂತಾಗಿದೆ.
ಕಳೆದ ವಾರದಿಂದ ಬಿಸಿಲು ಕಾಣದೆ ಇರುವುದರಿಂದ ಅಡಿಕೆ ಕಿತ್ತು ಬೇಯಿಸಿ ಒಣಗಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದೇವೆ, ಸ್ವಲ್ಪ ಬಿಸಿಲು ಬಂದರೆ ಸಾಕು ಹೊರಬಂದು ಅಡಿಕೆ ಒಣಗಿಸಿ ಮಳೆ ಮೋಡ ವಾದ ಕೂಡಲೇ ಎತ್ತುವ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ, ಹೀಗೆ ಮುಂದುವರೆದರೆ ಸಾಕಷ್ಟು ನಷ್ಟವನ್ನು ರೈತರು ಅನುಭವಿಸಬೇಕಾಗುತ್ತದೆ ಎಂದು ಚಿದಾನಂದಮೂರ್ತಿ ತಿಳಿಸಿದ್ದಾರೆ.
ಮಳೆಯ ರಗಳೆ- ಅಡಿಕೆ ಒಣಗಿಸಲು ಪರದಾಟ
Get real time updates directly on you device, subscribe now.
Prev Post
Next Post
Comments are closed.