ತುಮಕೂರು: ಇದೇ ಡಿಸೆಂಬರ್ 10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿವೃತ್ತ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್ ಅವರನ್ನು ಪಕ್ಷದ ವರಿಷ್ಠರು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಅನಿಲ್ ಕುಮಾರ್ ಅವರಿಗೆ ಪಕ್ಷದ ಬಾವುಟ ನೀಡಿ ಬರ ಮಾಡಿಕೊಂಡ ನಂತರ, ಸದಸ್ಯತ್ವದ ಅರ್ಜಿಗೆ ಸಹಿ ಪಡೆಯುವ ಮೂಲಕ ವಿಧಾನಪರಿಷತ್ ಸದಸ್ಯರಿಗೆ ಪ್ರಾಥಮಿಕ ಸದಸ್ಯತ್ವ ನೀಡಲಾಗಿದೆ, ನೂರಕ್ಕೆ ನೂರರಷ್ಟು ನಮ್ಮ ಅಭ್ಯರ್ಥಿ ಅನಿಲ್ ಕುಮಾರ್ ಗೆಲುವು ನಿಶ್ಚಿತ ಎಂದರು.
ಜಿಲ್ಲೆ ಜೆಡಿಎಸ್ ನ ಭದ್ರಕೋಟೆ, ಈ ಹಿಂದಿನ ಸಾಲಿನಲ್ಲಿ ಜೆಡಿಎಸ್ ಪಕ್ಷದವರೇ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು, ಅವರು ಬೇರೆ ಪಕ್ಷಕ್ಕೆ ಹೋದ ಕಾರಣ ಆ ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಜಿಲ್ಲೆಯ ಶಾಸಕರು ಹಾಗೂ ಮುಖಂಡರೊಂದಿಗೆ ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದ್ದು, ಎಲ್ಲಾ ಮುಖಂಡರೊಂದಿಗೆ ಸೇರಿ ಚುನಾವಣೆ ಎದುರಿಸಲಿದ್ದೇವೆ ಎಂದು ಆರ್.ಸಿ.ಆಂಜನಪ್ಪ ತಿಳಿಸಿದರು.
ಡಿ.10 ರಂದು ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಲಿದೆ, ಜೆಡಿಎಸ್ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ, ಜೆಡಿಎಸ್ ಶಕ್ತಿಯುತವಾಗಿದೆ, ಜೆಡಿಎಸ್ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ನಮಗಿದೆ, ನವೆಂಬರ್ 23 ರಂದು ಪಕ್ಷದ ಎಲ್ಲಾ ಶಾಸಕರು, ಮಾಜಿ ಶಾಸಕರು, ಚುನಾಯಿತ ಪ್ರತಿನಿಧಿಗಳ ಜೊತೆಗೆ ಅನಿಲ್ ಕುಮಾರ್ ಅವರು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ, ಅಂದು ನಮ್ಮ ವರಿಷ್ಠ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ದೇವೇಗೌಡರು ಆಗಮಿಸುವ ನಿರೀಕ್ಷೆ ಇದೆ ಎಂದು ಆರ್.ಸಿ.ಆಂಜನಪ್ಪ ನುಡಿದರು.
ಪಕ್ಷಕ್ಕೆ ಸೇರ್ಪಡೆಗೊಂಡು ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ ನಂತರ ಮಾತನಾಡಿದ ಆರ್.ಅನಿಲ್, ಅಧಿಕಾರಿಯಾಗಿ ನಾನು ನಿರೀಕ್ಷಿಸಿದ ರೀತಿಯಲ್ಲಿ ಜನರ ಸೇವೆ ಮಾಡಲು ಸಾಧ್ಯವಾಗಲಿಲ್ಲ, ಹಾಗಾಗಿ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದೇನೆ, ನೆಲದ ಸಮಸ್ಯೆ ಅರಿತು ಕೆಲಸ ಮಾಡುವ ಪಕ್ಷವಿದ್ದರೆ ಅದು ಜೆಡಿಎಸ್ ಮಾತ್ರ, ನಾಲ್ಕೃದು ತಿಂಗಳ ಹಿಂದೆಯೇ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ, ಚುನಾವಣೆಗೆ ಸ್ಪರ್ಧಿಸುವ ಇರಾದೆ ಇರಲಿಲ್ಲ, ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಸಾಮೂಹಿಕ ಕೃಷಿಯಲ್ಲಿ ತೊಡಗಬೇಕೆಂದುಕೊಂಡಿದ್ದೆ, ಹಲವಾರು ಯೋಜನೆಗಳಿದ್ದವು, ಕೃಷಿ ಆಧಾರಿತ ಕೈಗಾರಿಕೆ ಮಾಡಲು ಯೋಜನೆ ಸಿದ್ಧಪಡಿಸಿ, ಕೆಐಎಡಿಬಿಗೆ ಪ್ರಸ್ತಾವನೆ ಸಹ ಸಲ್ಲಿಸಿದ್ದೇವು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವಂತಾಯಿತು ಎಂದರು.
ಕೃಷಿ ಸಂಬಂಧಿತ ಯೋಜನೆ ಬಗ್ಗೆ ಗ್ರಾಮಾಂತರ ಗೌರಿಶಂಕರ್ ಅವರೊಂದಿಗೆ ಚರ್ಚಿಸಿದಾಗ ಅವರು ರಾಜಕೀಯ ಕ್ಷೇತ್ರಕ್ಕೆ ಬರಲು ವರಿಷ್ಠರೊಂದಿಗೆ ಚರ್ಚಿಸಿ ಮನವೊಲಿಸಿದರು, ಅದರಂತೆ ನೆಲದ ಅಸ್ಮಿತೆ ಕಾಪಾಡಲು ಜೆಡಿಎಸ್ ಪಕ್ಷ ಸೇರ್ಪಡೆಗೊಂಡೆ, ನನ್ನ ಮೂಲಕ ಹೆಚ್.ಡಿ.ದೇವೇಗೌಡರು ತಮ್ಮ ಸಂಸತ್ ಚುನಾವಣೆಯ ಸೋಲಿನ ಸೇಡು ತಿರೀಸಿಕೊಳ್ಳುಲು ದಾಳವಾಗುತ್ತಿದ್ದೇನೆ ಎಂಬ ಊಹಾಪೋಹದಲ್ಲಿ ಅರ್ಥವಿಲ್ಲ, ನಾನು ಯಾರ ಸೋಲಿಗೂ ದಾಳವಾಗಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಹಾಲನೂರು ಅನಂತ್ ಕುಮಾರ್, ಆರ್.ರಾಮಾಂಜಿನಯ್ಯ, ಸೋಲಾರ್ ಕೃಷ್ಣಮೂರ್ತಿ, ಮಧುಸೂಧನ್ ಇತರರು ಇದ್ದರು.
ಕೆಎಎಸ್ ಅಧಿಕಾರಿ ಹುದ್ದೆ ತ್ಯಜಿಸಿ ಚುನಾವಣಾ ಅಖಾಡಕ್ಕೆ ಎಂಟ್ರಿ
ಜೆಡಿಎಸ್ ಎಂ.ಎಲ್.ಸಿ ಅಭ್ಯರ್ಥಿ ಅನಿಲ್ ಕುಮಾರ್
Get real time updates directly on you device, subscribe now.
Prev Post
Comments are closed.