ರೈತರ ಸಾವಿಗೆ ಕಾರಣವಾದ ಪ್ರಧಾನಿ ಅಭಿನಂದನೆಗೆ ಆರ್ಹರಲ್ಲ: ಪರಂ

750 ರೈತರ ಸಾವಿಗೆ ಕೇಂದ್ರ ಸರ್ಕಾರ ಕಾರಣ

174

Get real time updates directly on you device, subscribe now.

ತುಮಕೂರು: ಮಳೆ, ಚಳಿ, ಗಾಳಿ ಎನ್ನದೆ ರೈತರನ್ನು ಅಯ್ಯೋ ಎನ್ನಿಸಿದ, 750ಕ್ಕೂ ಹೆಚ್ಚು ರೈತರ ಸಾವಿಗೆ ಕಾರಣವಾಗಿರುವ ಒಕ್ಕೂಟ ಸರಕಾರ ಅಭಿನಂದನೆಗೆ ಅರ್ಹರಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯ ಪಟ್ಟಿದ್ದಾರೆ.
ನಗರ ಗಾಜಿನಮನೆಯಲ್ಲಿ ನವೆಂಬರ್‌ 21 ರಂದು ನಡೆಯುವ ಕಾಂಗ್ರೆಸ್‌ ಪಕ್ಷದ ಜನಜಾಗೃತಿ ಅಭಿಯಾನದ ಉದ್ಘಾಟನಾ ಸಮಾರಂಭದ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದು ವರ್ಷದಿಂದ ಮಳೆ, ಬಿಸಿಲು, ಚಳಿ ಎನ್ನದೆ ಸಿಂಘು ಗಡಿಯಲ್ಲಿ ಧರಣಿ ನಡೆಸಿದ ರೈತರನ್ನು ಕನಿಷ್ಠ ಸೌಜನ್ಯಕ್ಕೂ ಭೇಟಿಯಾಗಿ ಮಾತುಕತೆ ನಡೆಸದ ಪ್ರಧಾನಿಯನ್ನು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿರುವುದಕ್ಕೆ ಅಭಿನಂದಿಸಿದರೆ ಅದು ಹೋರಾಟ ನಿರತ ರೈತರಿಗೆ ಮಾಡಿದ ಅಪಮಾನವಾಗುತ್ತದೆ, ಹಾಗಾಗಿ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಕೇಂದ್ರ ಸರಕಾರದ ಯಾರು ಸಹ ಅಭಿನಂದನೆಗೆ ಅರ್ಹರಲ್ಲ ಎಂದರು.
ಕಳೆದ ಒಂದು ವರ್ಷದಿಂದ ರೈತರು ನಡೆಸುತ್ತಿದ್ದ ಹೋರಾಟ ಇಡೀ ವಿಶ್ವದ ಗಮನ ಸೆಳೆದಿದೆ, ವಿವಿಧ ರಾಷ್ಟ್ರಗಳ ರಾಷ್ಟ್ರಾಧ್ಯಕ್ಷರು, ಪ್ರಧಾನಿಗಳು ರೈತರ ಬಗ್ಗೆ ಮಾತನಾಡಿದಾಗ, ಪ್ರಧಾನಿ ನರೇಂದ್ರಮೋದಿ, ನಮ್ಮ ದೇಶದ ಆಂತರಿಕ ವಿಚಾರದಲ್ಲಿ ತಲೆ ಹಾಕದಂತೆ ಮನವಿ ಮಾಡಿ, ಉಪ ಚುನಾವಣೆಯ ಸೋಲು ಮತ್ತು ಮುಂದೆ ನಡೆಯುವ ಐದು ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿರುವುದಾಗಿ ಹೇಳುತ್ತಿರುವುದು ವಿಪರ್ಯಾಸವೇ ಸರಿ, ಈ ಕುರಿತು ಅಧಿವೇಶನದಲ್ಲಿ ಸ್ಪಷ್ಟವಾಗಿ ಘೋಷಿಸಬೇಕು, ರೈತರ ಪ್ರಮುಖ ಬೇಡಿಕೆಯಾಗಿರುವ ಬೆಂಬಲ ಬೆಲೆ ಕಾನೂನು ಹಾಗೂ ವಿದ್ಯುತ್‌ ತಿದ್ದುಪಡಿ ಬಿಲ್‌ ಮಂಡಿಸುವುದರ ಕುರಿತು ಸಹ ಸ್ಪಷ್ಟತೆ ನೀಡಬೇಕೆಂಬುದು ಕಾಂಗ್ರೆಸ್‌ ಪಕ್ಷದ ಒತ್ತಾಯವಾಗಿದೆ ಎಂದು ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಬಿಜೆಪಿ ಪಕ್ಷ ಕೇಳುತ್ತಿರುವ ದೇಶಕ್ಕೆ ಕಾಂಗ್ರೆಸ್‌ ಪಕ್ಷದ ಕೊಡುಗೆ ಏನು ಎಂಬುದಕ್ಕೆ ಆರಂಭವಾಗುವ ಜನಜಾಗೃತಿ ಅಭಿಯಾನದಲ್ಲಿ ಕಾಂಗ್ರೆಸ್‌ ಉತ್ತರ ನೀಡಲಿದೆ ಎಂದ ಅವರು, ಎಐಸಿಸಿ ಅಧ್ಯಕ್ಷರಾದ ಸೋನಿಯಗಾಂಧಿ ಮತ್ತು ಉಪಾಧ್ಯಕ್ಷರಾದ ರಾಹುಲ್‌ ಗಾಂಧಿ ಹಾಗೂ ಪಕ್ಷದ ಹಿರಿಯರು ನನ್ನನ್ನು ಎಐಸಿಸಿ ಶಿಸ್ತು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ. ಇದಕ್ಕಾಗಿ ಎಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಕಳೆದ 15 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷಿ ಇಲಾಖೆಯೇ ನೀಡಿದ ಅಂಕಿ ಅಂಶಗಳ ಪ್ರಕಾರ ಸುಮಾರು 11.55 ಲಕ್ಷ ಹೆಕ್ಟೇರ್ ನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ, 1.50 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ, ಜನರು ಬೆಳೆಯ ಜೊತೆಗೆ, ಮನೆ, ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಹಾಗಿದ್ದರೂ ಸರಕಾರ ಇದುವರೆಗೂ ಪರಿಹಾರ ನೀಡಿಲ್ಲ, ಕನಿಷ್ಠ ಪ್ರಧಾನಿಯವರಿಗೆ ಮನವಿ ಮಾಡಿಲ್ಲ, ಈ ಹಿಂದೆಯೂ ಸಾವಿರಾರು ಕೋಟಿ ನಷ್ಟವಾಗಿದ್ದರೂ ಬಿಡುಗಡೆಯಾಗಿರುವುದು ಕೇವಲ 2019- 20ರಲ್ಲಿ 1600 ಕೋಟಿ ಮತ್ತು 2020- 21 ರಲ್ಲಿ 1200 ಕೋಟಿ ರೂ ಮಾತ್ರ, ಇಂಧನಗಳ ಮೇಲೆ ಹಾಕಿದ ಸೆಸ್ ನಿಂದ ಲಕ್ಷಾಂತರ ಕೋಟಿ ರೂ. ಗಳನ್ನು ಕೇಂದ್ರ ಸರಕಾರ ಪಡೆದಿದೆ, ಈಗಲಾದರೂ ಸಂಕಷ್ಟದಲ್ಲಿರುವವರಿಗೆ ಪರಿಹಾರ ಬಿಡಗುಡೆ ಮಾಡಲಿದೆ ಎಂದು ಆಗ್ರಹಿಸಿದರು.
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಮಾತನಾಡಿ, ನವೆಂಬರ್‌ 21 ರಂದು ನಡೆಯುವ ಜನಜಾಗೃತಿ ಅಭಿಯಾನದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಮಳೆ ಇಲ್ಲದಿದ್ದರೆ ಟೌನ್ ಹಾಲ್ ನಿಂದ ಗಾಜಿನ ಮನೆಯವರಗೆ ಎಲ್ಲಾ ನಾಯಕರು ಪಾದಯಾತ್ರೆ ಮಾಡಲಿದ್ದೇವೆ, ಮಳೆಯಿದ್ದರೆ ನೇರವಾಗಿ ಕಾರ್ಯಕ್ರಮ ಜರುಗಲಿದೆ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ವೀರಪ್ಪಮೊಯಿಲಿ, ಕೆ.ಹೆಚ್‌.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲಾ ನಾಯಕರು ಈ ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಡಾ.ರಫಿಕ್ ಅಹಮದ್‌, ಎಸ್‌.ಷಫಿ ಅಹಮದ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಮುರಳೀಧರ ಹಾಲಪ್ಪ, ಹೆಚ್‌.ಸಿ.ಹನುಮಂತಯ್ಯ ಸೇರಿದಂತೆ ಹಲವರು ಇದ್ದರು.

Get real time updates directly on you device, subscribe now.

Comments are closed.

error: Content is protected !!