ಕನಕದಾಸರ ಬದುಕು ಎಲ್ಲರಿಗೂ ಆದರ್ಶ: ಆಂಜಿನಪ್ಪ

120

Get real time updates directly on you device, subscribe now.

ತುಮಕೂರು: ಕನಕದಾಸರು ಒಬ್ಬ ದಾರ್ಶನಿಕ ಕವಿ, ಕನ್ನಡ ಸಾರಸ್ವತ ಲೋಕದ ಕೀರ್ತನಾ ಪ್ರತಿಭೆಯಾದ ಅವರು ಸಮಾನತೆಯ ಸಂದೇಶ ಸಾರಿದವರು, ಸಮಾಜದ ಅಂಕು ಡೊಂಕು ತಿದ್ದಿದವರು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಿದೆ. ಕನಕದಾಸರ ಬದುಕೇ ನಮಗೆ ಆದರ್ಶ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜಿನಪ್ಪ ತಿಳಿಸಿದರು.
ನಗರದ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಸೋಮವಾರ ದಾಸಶ್ರೇಷ್ಠ ಭಕ್ತ ಕನಕದಾಸರ 534ನೇ ಜಯಂತಿಯನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗದಲ್ಲಿ ಜನಿಸಿದ ಕನಕದಾಸರು, 16ನೇ ಶತಮಾನದಲ್ಲಿಯೇ ಜಾತಿವ್ಯವಸ್ಥೆ ವಿರುದ್ಧ ಧ್ವನಿಯೆತ್ತಿದ್ದರು ಎಂದರು.
ಬಚ್ಚಮ್ಮ ಮತ್ತು ಬೀರಪ್ಪನಾಯಕ ದಂಪತಿಗೆ ಮಗನಾಗಿ ಹುಟ್ಟಿದ ಇವರು, ಕೇವಲ ಕುರುಬ ಸಮುದಾಯಕ್ಕೆ ಸೀಮಿತವಾಗರಲಿಲ್ಲ, ಬದಲಿಗೆ ಎಲ್ಲಾ ಜಾತಿಗೆ ಸೇರಿದ ದಾಸರಾದರು, ಅಲ್ಲದೇ ಭಕ್ತಿಪಂಥವನ್ನು ಮುಂದುವರೆಸುವ ಮೂಲಕ ಸಮಾಜದಲ್ಲಿನ ಮೌಢ್ಯ ನಿವಾರಣೆಗೆ ಶ್ರಮಿಸಿದರು ಎಂದು ಹೇಳಿದರು.
ದಾಸಶ್ರೇಷ್ಠ ಕನಕದಾಸರ ರಾಮದಾನ ಚರಿತ್ರೆ, ಮೋಹನ ತರಂಗಿಣಿ, ನಳಚರಿತ್ರೆ ಮುಂತಾದ ಸಾಹಿತ್ಯಗಳ ಬಗ್ಗೆ ತಿಳಿದುಕೊಳ್ಳಲು ಈಗಾಗಲೇ ಪ್ರಾಧಿಕಾರವನ್ನು ರಚನೆ ಮಾಡಿದ್ದು, ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕವನ್ನು ಸಹ ಹೊರತಂದಿದ್ದಾರೆ. ಹೀಗಾಗಿ ಅವರು ಮಾಡಿರುವ ಸಾಹಿತ್ಯಿಕ ರಚನೆ ಬಹಳ ಅಮೂಲ್ಯವಾದುದು ಎಂದರು.
ಕನಕದಾಸರು ಸಮಾಜಕ್ಕೆ ಅನೇಕ ಸಂದೇಶಗಳನ್ನು ಸಮಾಜಕ್ಕೆ ಕೊಟ್ಟಿದ್ದಾರೆ, ನಿಸ್ವಾರ್ಥ ಮನೋಭಾವನೆ, ನಾನು ಎಂಬ ಅಹಂಕರಾವನ್ನು ಬಿಡಬೇಕು, ನಾವೆಲ್ಲರೂ ಒಂದೇ, ನಾವೆಲ್ಲರೂ ಈ ಸಮಾಜದಲ್ಲಿ ಹುಟ್ಟಿರುವಂತಹವರು, ನಾವೆಲ್ಲರೂ ಸೇವನೆ ಮಾಡುವಂತಹ ಒಂದೇ ಗಾಳಿ, ನೀರು ಒಂದೇ, ಆದರೂ ಕೂಡ ನಾವ್ಯಾಕೆ ವಿಭಿನ್ನವಾಗಿರಬೇಕು, ಆದುದರಿಂದ ಕುಲ ಎಂಬುದು ಈ ಪ್ರಪಂಚದಲ್ಲಿ ಇಲ್ಲ, ನಾವಾಗಿ ಸೃಷ್ಠಿ ಮಾಡಿಕೊಂಡಿರುವಂತಹದ್ದು, ಯಾಕೆ ಕುಲ ಕುಲ ಎಂದು ಹೊಡೆದಾಡುವಿರಿ ಎಂದು ಜಾತಿ ಪದ್ಧತಿ ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆಕೊಟ್ಟ ಕನಕದಾಸರು ಮಹಾನ್‌ ಸಂತರು ಎಂದರು.
ಡಿ.10 ರಂದು ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರತಿಯೊಬ್ಬರೂ ಜವಾಬ್ದಾರಿ ಹೊರಬೇಕು, ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್‌.ಡಿ.ಕುಮಾರ ಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನಮ್ಮ ಗುರಿಯಾಗಬೇಕು ಎಂದು ಕರೆ ನೀಡಿದರು.
ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್‌.ನಾಗರಾಜ್‌ ಮಾತನಾಡಿ, ಐದುನೂರು ವರ್ಷಗಳ ಹಿಂದೆಯೇ ಕುಲಕುಲ ಎಂದು ಹೊಡೆದಾಡದಿರಿ ಎನ್ನುವ ಮೂಲಕ ಕನಕ ದಾಸರು ವರ್ಣಾಶ್ರಮ ವ್ಯವಸ್ಥೆ ಸೃಷ್ಟಿಸಿರುವ ಜಾತಿ ನರಕವನ್ನು ದಿಟ್ಟತನದಿಂದ ಪ್ರಶ್ನಿಸಿದ್ದರು. ಜಾತಿ ಪದ್ಧತಿ ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆಕೊಟ್ಟ ಸಂತ ಕನಕದಾಸರನ್ನು ನೆನೆಯುವುದರ ಜೊತೆಗೆ ಅವರು ತೋರಿದ ದಾರಿಯಲ್ಲಿ ಸಾಗೋಣ ಎಂದರು.
ಕನಕದಾಸರ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿವೆ. ಕನಕದಾಸರು, ಬಸವಣ್ಣನವರು ಕನ್ನಡದಲ್ಲೆ ಬರೆದರೆ ಹೊರತು ಸಂಸ್ಕೃತದಲ್ಲಿ ಸಾಹಿತ್ಯ ರಚಿಸಲಿಲ್ಲ, ಈ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು. ವರ್ಗರಹಿತ ಸಮಾಜ ಕಟ್ಟಲು ಶ್ರಮಿಸಿದವರು ಕನಕದಾಸರು ಎಂದು ತಿಳಿಸಿದರು.
ಜೆಡಿಎಸ್‌ ನಗರಾಧ್ಯಕ್ಷ ಬೆಳ್ಳಿ ಲೋಕೇಶ್‌ ಮಾತನಾಡಿ, ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ, ಮಹಾನ್‌ ಕವಿ ಮತ್ತು ಭಕ್ತಿಯ ಸಾಮ್ರಾಜ್ಯ ಕಟ್ಟಿದವರು ಕನಕದಾಸರು ಎಂದು ಹೇಳಿದರು.
ಕನಕದಾಸರು ಜಾತಿ- ವರ್ಗಗಳನ್ನು ಮೀರಿದ ವ್ಯಕ್ತಿಯಾಗಿದ್ದು, ಅವರ ಜಾತ್ಯತೀತ ಮನೋಭಾವನೆಯನ್ನು ಎಲ್ಲಾ ಸಮುದಾಯದವರು ಅರ್ಥ ಮಾಡಿಕೊಂಡು ಜಾರಿಗೆ ತರಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಟಿ.ಆರ್‌.ನಾಗರಾಜ್‌, ಬೆಳ್ಳಿ ಲೋಕೇಶ್‌, ನರಸೇಗೌಡ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಆರ್‌.ದೇವರಾಜ್‌, ಎಸ್ಸಿ ಘಟಕದ ಅಧ್ಯಕ್ಷ ಸೋಲಾರ್‌ ಕೃಷ್ಣಮೂರ್ತಿ, ಮಾಜಿ ಜಿಪಂ ಸದಸ್ಯ ರಾಮಾಂಜಿನಪ್ಪ, ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್‌, ಜಿಲ್ಲಾ ವಕ್ತಾರ ಎಂ.ಪಿ.ಮಧುಸೂಧನ್‌, ಪಾಲಿಕೆ ಮಾಜಿ ಸದಸ್ಯ ಬಾಲಕೃಷ್ಣ, ಮುಖಂಡರಾದ ಚಲುವರಾಜ್‌, ಪ್ರಸನ್ನ, ಭೈರೇಶ್‌, ಗಣೇಶ್‌, ಬಾಲಕೃಷ್ಣ, ವಿಶ್ವೇಶ್ವರಯ್ಯ, ಸ್ವಾಮಿ, ತಾಹೇರಾ ಕುಲ್ಸುಂ, ಜಯಶ್ರೀ, ಲಕ್ಷ್ಮಮ್ಮ, ಮಮತಾ, ಯಶೋಧ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!