ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪಗೆ ಅಭಿನಂದನೆ ಸಲ್ಲಿಕೆ

197

Get real time updates directly on you device, subscribe now.

ತುಮಕೂರು: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಕೆ.ಎಸ್‌.ಸಿದ್ಧಲಿಂಗಪ್ಪ ಅವರು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ತಿಳಿಸಿದರು.
ನಗರದ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಕವಿತಾಕೃಷ್ಣ ಅಭಿಮಾನಿ ಬಳಗದ ವತಿಯಿಂದ ನೂತನ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಸ್‌.ಸಿದ್ಧಲಿಂಗಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಮಕೂರು ಜಿಲ್ಲೆಯನ್ನು ಸೃಜನ ಜಿಲ್ಲೆಯೆಂದು ಕರೆದಿದ್ದಾರೆ, ಇಲ್ಲಿನ ಸಾಹಿತ್ಯ ಲೋಕವೊಂದು ಕರ್ನಾಟಕಕ್ಕೆ ಸುಪ್ರಸಿದ್ಧವಾದಂತಹ ಕಾಣಿಕೆಗಳನ್ನು ನೀಡುತ್ತಾ ಬಂದಿದೆ, ಅಂತಹುದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಮನಾರ್ಹವಾದಂತಹ ಸಾಧನೆಯ ಮೈಲಿಗಲ್ಲು ಸಾಧಿಸಿದೆ. ಇಂತಹ ಸಂದರ್ಭದಲ್ಲಿ ಉತ್ತಮ ವ್ಯಕ್ತಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.
ಕೆ.ಎಸ್‌.ಸಿದ್ಧಲಿಂಗಪ್ಪ ಅವರು ಕನ್ನಡಕ್ಕೆ ಅಪಾರ ಕಾಣಿಕೆ ಕೊಟ್ಟಿದ್ದಾರೆ, ಅವರು ಹಿಂದೆ ಗುಬ್ಬಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ ದುಡಿದಿದ್ದಾರೆ. ಜೊತೆಗೆ ಪಿಯು ಬೋರ್ಡ್ ನ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಡಿಡಿಪಿಐ ಆಗಿ ಕೆಲಸ ನಿರ್ವಹಿಸಿದ್ದಾರೆ, ಇಂತಹವರು ಕಸಾಪ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ, ಎಲ್ಲರೂ ಕೂಡ ಸಹಕಾರ ನೀಡಿ ಅವರ ಅವಧಿಯಲ್ಲಿ ಮಾದರಿಯಾದಂತಹ, ಕ್ರಿಯಾಶೀಲವಾದಂತಹ ಕಾರ್ಯಗಳು ನಡೆದು ಕನ್ನಡ ಮುಗಿಲು ಮುಟ್ಟಲಿ ಎಂದು ಹಾರೈಸುತ್ತೇನೆ ಎಂದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್‌ ಮಾತನಾಡಿ, ಕೆ.ಎಸ್‌.ಸಿದ್ಧಲಿಂಗಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಕವಿತಾಕೃಷ್ಣ ಸಾಹಿತ್ಯ ಬಳಗದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು ಎಂದರು.
ಕನ್ನಡಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕನ್ನಡಪರ ಕಾರ್ಯಕ್ರಮಗಳಿಗೆ ಉಚಿತವಾಗಿ ಭವನ ಕೊಡುವ ವ್ಯವಸ್ಥೆ ಮಾಡಬೇಕು, ಕನ್ನಡ ಬೆಳೆಸಬೇಕು, ಕನ್ನಡ ಉಳಿಸಬೇಕು ಸಾಹಿತ್ಯ ಕಾರ್ಯಕ್ರಮಗಳಿಗೆ ಕನ್ನಡಪರ ಸಂಘಟನೆಗಳನ್ನು ಬಳಸಿಕೊಳ್ಳಬೇಕು, ನಾವೂ ಸಹ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲೆಯ ಎಲ್ಲಾ ಕಡೆ ಕನ್ನಡ ನಾಮಫಲಕ ಕಡ್ಡಾಯ ಎಂಬ ಧ್ಯೇಯದೊಂದಿಗೆ ಮುಂದಿನ ವಾರದಿಂದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಮುಂದಿನ ವಾರದಿಂದಲೇ ಜಿಲ್ಲೆಯ ಎಲ್ಲಾ ಕಡೆ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ಅಭಿಯಾನ ನಡೆಸಲು ಕನ್ನಡಪರ ಒಕ್ಕೂಟ ಮುಂದಾಗಿರುವುದಾಗಿ ತಿಳಿಸಿದರು.
ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕವಿತಾಕೃಷ್ಣ ಸಾಹಿತ್ಯ ಬಳಗದಿಂದ ಧನಿಯಾಕುಮಾರ್‌ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಪರವಾಗಿ ನನ್ನನ್ನು ಗೌರವಿಸಿದ್ದು, ಅವರ ಗೌರವಕ್ಕೆ ಚಿರಋಣೀಯಾಗಿದ್ದೇನೆ, ಕವಿತಾಕೃಷ್ಣ ಮತ್ತು ಧನಿಯಾಕುಮಾರ್‌ ಹಾಗೂ ಎಲ್ಲಾ ಕನ್ನಡಪರ ಸಂಘಟನೆಗಳ ಸಲಹೆಗಳನ್ನು ನಾಡು, ನುಡಿ, ನೆಲ, ಜಲದ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ತುಮಕೂರಿನಲ್ಲಿ ಉತ್ತಮ ವಾತಾವರಣ ನಿರ್ಮಿಸುವುದು, ಕನ್ನಡ ನಾಮಫಲಕಗಳನ್ನು ಹಾಕಿಸುವುದು, ಹೊರ ರಾಜ್ಯದ ಜನರಿಗೆ ಕನ್ನಡ ಕಲಿಕೆಗೆ ಪ್ರೇರೇಪಣೆ ಮಾಡುವಂತಹ ನಿಟ್ಟಿನಲ್ಲಿ ಕನ್ನಡ ಪ್ರೇಮ, ಸಾಹಿತ್ಯ ಪ್ರೇಮವನ್ನು ಅವರಲ್ಲೂ ಸಹ ಮೂಡಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗಪ್ಪ, ಡಾ.ಯೋಗೇಶ್‌, ವಿಠ್ಠಲ್‌, ಪ್ರಸಾದ್‌, ಮಲ್ಲೇಶ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!