ಕೌಶಲ್ಯಾಭಿವೃದ್ಧಿಯಿಂದ ನಿರುದ್ಯೋಗ ದೂರ: ಸ್ವಾಮೀಜಿ

137

Get real time updates directly on you device, subscribe now.

ಶಿರಾ: ಕೌಶಲ್ಯದ ಅಭಿವೃದ್ದಿಯೇ ನಿರುದ್ಯೋಗ ನಿರ್ಮೂಲನದ ಅಸ್ತ್ರ, ಕೌಶಲ್ಯ ಅಭಿವೃದ್ಧಿ ಕೇಂದ್ರ ಎಲ್ಲೆಡೆ ತೆರೆಯಬೇಕು ಎಂದು ಚಿತ್ರದುರ್ಗದ ಶಿವಶರಣ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ತುಮಕೂರು ವಿವಿಯ ಶಿರಾ ಸ್ನಾತಕೋತ್ತರ ಕೇಂದ್ರ ಹಾಗೂ ಕನಕ ಜಯಂತಿ ಉದ್ಘಾಟಿಸಿ ಮಾತಾನಾಡಿ, ಸವಲತ್ತುಗಳ ಹಾಗೂ ಉದ್ಯೋಗ ಕೊರತೆಯಿಂದ ಗ್ರಾಮೀಣ ಯುವಕರು ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಪಿ ಎಚ್ ಡಿ ಮಾಡಿಯೂ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣಗೊಂಡಿದೆ, ಈ ಎಲ್ಲಕ್ಕೂ ಕೌಶಲ್ಯಗಳ ಕೊರತೆಯೇ ಕಾರಣ ಎಂದರು.
ಕಾಲೇಜು ಎಂಬುದು ಜ್ಞಾನ ದೇಗುಲವಿದ್ದಂತೆ, ಈ ವಿಭಾಗದ ಸದ್ಬಳಕೆ ಮಾಡಿಕೊಳ್ಳಿ, ನಿಮ್ಮ ಗುರಿಯೆಡೆಗೆ ನಿಮ್ಮ ದೃಷ್ಟಿಯಿರಬೇಕು, ಜಾತಿ ಧರ್ಮದ ಎಲ್ಲೆ ಮೀರಿದವರು ಕನಕದಾಸರು, ಅವರನ್ನು ಕೇವಲ ಒಂದೇ ಜಾತಿಗೆ ಮೀಸಲು ಮಾಡುವುದು ಬೇಡ, ಅವರ ಆದರ್ಶಗಳನ್ನು ಪಾಲಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ಮಾತಾನಾಡಿ ಸಮಗ್ರ ಭಾರತದ ಪ್ರಗತಿಗೆ ಶಿಕ್ಷಣ ಅಗತ್ಯ, ಗುಣಾತ್ಮಕ ಶಿಕ್ಷಣವೇ ಮುಖ್ಯ, ತುಮಕೂರು ವಿವಿಯ ಶಿರಾ ಕೇಂದ್ರ ಆರಂಭವಾಗುವುದರೊಂದಿಗೆ ಉನ್ನತ ಶಿಕ್ಷಣ ಎಲ್ಲೆಡೆ ಎಲ್ಲರಿಗಾಗಿ ಎಂಬ ತುಮಕೂರು ವಿವಿಯ ಘೋಷಣೆ ನಿಜವಾಗಿದೆ ಎಂದರು.
ಜ್ಞಾನವೆಂಬುದು ಪ್ರತಿದಿನ ವೃದ್ಧಿಯಾಗುತ್ತಿರಬೇಕು, ಸಂಕಲ್ಪ ರಹಿತ ಜೀವನ ಸಾರ್ಥಕ ಬದುಕು ನೀಡುವುದಿಲ್ಲ, ನಾವು ಸಮಸ್ಯೆ ಎದುರಿಸಬೇಕೆ ಹೊರತು ಹೆದರಬಾರದು, ಮೌಲ್ಯದ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ ನಡೆಯಲಿದೆ ಎಂದರು.
ಸಿಂಡಿಕೇಟ್‌ ಸದಸ್ಯ ಹಾಗೂ ಶಿರಾ ಸ್ನಾತಕೋತ್ತರ ಕೇಂದ್ರ ಉದ್ಘಾಟನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಆರ್.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಶಿರಾ ಭಾಗದ ಜನತೆಯ ಬಹುದಿನಗಳ ಕನಸು ನನಸಾಗಿದೆ ಎಂದರು.
ತುಮಕೂರು ವಿವಿ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ಕೇಂದ್ರದ ಸಂಯೋಜಕ ಡಾ.ಎಚ್‌.ಎಸ್‌.ಬೋರೇಗೌಡ, ಉಪ ಕುಲಸಚಿವರಾದ ಡಾ.ಎಂ.ಮಂಗಳಾಗೌರಿ, ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!