ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕ್ಕೆಗೆ ಅಂತಿಮ ದಿನವಾದ ಮಂಗಳವಾರ ವಿವಿಧ ಪಕ್ಷದ ಅಭ್ಯರ್ಥಿಗಳು ಬಿ- ಫಾರಂ ನೊಂದಿಗೆ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆ ರಣರಂಗ ಪ್ರವೇಶಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಬೆಂಗಳೂರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ, ಬಿಬಿಎಂಪಿ ಮಾಜಿ ಸದಸ್ಯ ಎನ್.ಲೋಕೇಶ್ ಸಚಿವ ಮಾಧುಸ್ವಾಮಿ ಜೊತೆ ತೆರಳಿ ನಾಮ ಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಅವರು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಟಿ.ಬಿ.ಜಯಚಂದ್ರ ಜೊತೆ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಇನ್ನು ಜೆಡಿಎಸ್ ನಿಂದ ಅಭ್ಯರ್ಥಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸುವಾಗ ಮಾಜಿ ಶಾಸಕರಾದ ಸಿ.ಬಿ.ಸುರೇಶ್ ಬಾಬು, ಸುಧಾಕರ್ ಲಾಲ್ ಸಾಥ್ ನೀಡಿದರು. ಇನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಗಜೇಂದ್ರ ಕುಮಾರ್ ಕೆ.ಎಸ್. ನಾಮಪತ್ರ ಸಲ್ಲಿಸಿದರು.
ಗೌಡರ ತಂತ್ರ ಫಲಿಸುತ್ತಾ?
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲಿಗೆ ಕಾರಣವಾದ ತುಮಕೂರು ಈಗ ಮತ್ತೊಂದು ಗೆಲುವಿಗೆ ರಣತಂತ್ರ ರೂಪಿಸಲು ಜೆಡಿಎಸ್ ಪಕ್ಷ ಮುಂದಾಗಿದೆ. ಕೆಎಎಸ್ ಅಧಿಕಾರಿಯಾಗಿದ್ದ ಅನಿಲ್ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಡಿಎಸ್ ಸೇರಿ ಚುನಾವಣಾ ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ, ಜೆಡಿಎಸ್ ಭದ್ರಕೋಟೆಯಾದ ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಅಷ್ಟೊಂದು ಸುಲಭವಲ್ಲ, ಏಕೆಂದರೆ ಜಿಲ್ಲೆಯ ಜೆಡಿಎಸ್ ನ ಪ್ರಮುಖ ನಾಯಕರು ವರಿಷ್ಠರ ಮೇಲೆ ಅಸಮಾಧಾನ ಹೊಂದಿದ್ದಾರೆ, ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದು ಕಷ್ಟ.
ಇಷ್ಟೆಲ್ಲದರ ನಡುವೆ ಕೆ.ಎನ್.ರಾಜಣ್ಣನವರ ಪುತ್ರ ಆರ್.ರಾಜೇಂದ್ರರನ್ನು ಮಣಿಸಲು ರಾಜಕೀಯ ಪಟ್ಟುಗಳನ್ನು ಹಾಕಲು ಹೊರಟಿರುವ ಜೆಡಿಎಸ್ ವರಿಷ್ಠರಿಗೆ ಜೆಡಿಎಸ್ ವರ್ಸಸ್ ಕಾಂಗ್ರೆಸ್ ಚುನಾವಣೆ ಎಂದೇ ಬಿಂಬಿತವಾಗುತ್ತಿದೆ.
ಅನಿಲ್ ವಿರುದ್ಧ ಟೀಕೆ..
ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ, ಉನ್ನತ ಸ್ಥಾನ ತ್ಯಜಿಸಬಾರದಿತ್ತು, ಅಲ್ಲೂ ಕೂಡ ಜನ ಸೇವೆಗೆ ಅವಕಾಶವಿತ್ತು, ರಾಜಕೀಯಕ್ಕೆ ಬರುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಟ್ವೀಟ್ ಮಾಡಿದ್ದಾರೆ. ದುಡ್ಡು ಮಾಡಿ ರಾಜಕೀಯಕ್ಕೆ ಬರುವ ಅವಾಂತರದ ಹಿಂದೆ ಗಂಟು ಉಳಿಸುವ ಜವಾಬ್ದಾರಿ ಇದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ, ಜನಸೇವೆಗೆ ಇದೇ ರಹದಾರಿ ಎಂಬುದು ಅವರ ಅಭಿಪ್ರಾಯವಾಗಿದೆ.
ಹೊರಗಿನ ಅಭ್ಯರ್ಥಿಗೆ ಮಣೆ..
ಬಿಜೆಪಿ ಅಭ್ಯರ್ಥಿಯಾಗಲು ಟಿಕೆಟ್ ಕೇಳಿದ್ದ ಸ್ಥಳೀಯರನ್ನು ಬಿಟ್ಟು ಅಚ್ಚರಿ ಎಂಬಂತೆ ಹೊರಗಿನ ಅಭ್ಯರ್ಥಿಯನ್ನು ಬಿಜೆಪಿ ವರಿಷ್ಠರು ಕಣಕ್ಕಿಳಿಸಿದ್ದಾರೆ. ಬೆಂಗಳೂರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ, ಬಿಬಿಎಂಪಿ ಮಾಜಿ ಸದಸ್ಯ ಎನ್.ಲೋಕೇಶ್ ಹೆಸರು ಪ್ರಕಟಿಸುವ ಮೂಲಕ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಾಧುಸ್ವಾಮಿ ಹಾಗೂ ಸುರೇಶ್ ಗೌಡ ನಡುವಿನ ಭಿನ್ನಮತ ಜೋರಾಗಿಯೇ ಕಂಡು ಬಂದಿದೆ, ಪಕ್ಷದ ಹಿರಿಯರು ಹೇಳಿದರು ಎಂಬ ಕಾರಣಕ್ಕೆ ಲೋಕೇಶ್ ಪರವಾಗಿ ಮಧುಸ್ವಾಮಿ ವಕಾಲತ್ತು ವಹಿಸಿದ್ದರು. ಈಗ ಪರಿಷತ್ ಚುನಾವಣೆ ಉಸ್ತುವಾರಿಯನ್ನು ಸಚಿವರಿಗೆ ವಹಿಸಿಕೊಂಡಿದ್ದು ಸಂಸದರು, ಶಾಸಕರು ಸೇರಿದಂತೆ ಬಿಜೆಪಿ ಜನಪ್ರತಿನಿಧಿಗಳು ಹೇಗೆ ಸಾಥ್ ನೀಡಲಿದ್ದಾರೆ ಎಂಬುದು ಮುಂದಿರುವ ಪ್ರಶ್ನೆ, ಅಲ್ಲದೆ 1,500 ಕ್ಕೂ ಹೆಚ್ಚು ಒಕ್ಕಲಿಗ ಮತದಾರರಿದ್ದು ಹಿಂದುಳಿದವರ ಮತಗಳನ್ನು ಹೇಗೆ ಸೆಳೆಯುತ್ತಾರೆ ಎಂಬುದರ ಮೇಲೆ ಚುನಾವಣಾ ರಣತಂತ್ರ ರೂಪಿತವಾಗಲಿದೆ.
ಕೈ ಅಭ್ಯರ್ಥಿಗೆ ಬೆಂಬಲ..
ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ವಿಧಾನಪರಿಷತ್ ಚುನಾವಣೆಗೆ ಎರಡನೇ ಬಾರಿಗೆ ಸಜ್ಜಾಗಿದ್ದಾರೆ, ಹಿಂದೆ ಸೋಲಿನ ರುಚಿ ಕಂಡಿರುವ ಆರ್.ರಾಜೇಂದ್ರ ಈಗ ಪಕ್ಷಾತೀತವಾಗಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ. ಕೋವಿಡ್ ಅವಧಿಯಲ್ಲಿನ ಸಾಮಾಜಿಕ ಬದ್ಧತೆ ಅವರನ್ನು ಮತ್ತೊಂದು ಹಂತಕ್ಕೆ ತಂದು ನಿಲ್ಲಿಸಿದೆ. ಜಿಲ್ಲೆಯ ಕಾಂಗ್ರೆಸ್ ನಾಯಕರು ಆರ್.ರಾಜೇಂದ್ರರ ಗೆಲುವಿಗೆ ಪಣತೊಟ್ಟಿದ್ದಾರೆ. ಆರ್.ರಾಜೇಂದ್ರ ಗೆಲುವು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂಬುದು ಈ ನಾಯಕರ ಅಭಿಪ್ರಾಯವಾಗಿದೆ. ಇನ್ನು ಈ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣನವರ ತಂತ್ರಗಾರಿಕೆ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್- ಜೆಡಿಎಸ್ ಪಕ್ಷದಲ್ಲಿ ಒಂದೇ ಸಮುದಾಯ ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ಮತ ವಿಭಜನೆಗೆ ಕಾರಣವಾಗಬಹುದು, ಆದರೂ ಅಹಿಂದ ಮತಗಳಿಗೆ ಕೆ.ಎನ್.ಆರ್ ರಣತಂತ್ರ ಕೆಲಸ ಮಾಡಲಿದೆ ಎಂಬುದು ಸ್ಥಳೀಯರಿಂದಲೇ ಕೇಳಿಬರುತ್ತಿದೆ.
ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಮಣಿಸಲು ಯಾವ ಅಸ್ತ್ರವೂ ಬಳಕೆ ಆಗುವುದಿಲ್ಲ ಎಂಬ ಮಾತು ಕೇಳಿ ಬಂದಿರುವುದು ಮತ್ತೊಂದು ವಿಶೇಷ.
Comments are closed.