ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ 26ಕ್ಕೆ

317

Get real time updates directly on you device, subscribe now.

ತುಮಕೂರು: ರೈತರ ವಿರೋಧಿ ಕಾಯ್ದೆಗಳ ಅಧಿವೇಶನದಲ್ಲಿ ಹಿಂಪಡೆಯುವುದರ ಜೊತೆಗೆ, ಒಕ್ಕೂಟ ಸರಕಾರ ರೈತರು, ಕಾರ್ಮಿಕರಿಗೆ ಸಂಬಂಧಿಸಿ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನವೆಂಬರ್‌ 26 ರಂದು ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಹೆದ್ದಾರಿ ಮತ್ತು ಟೋಲ್ ಗೇಟ್ ಗಳನ್ನು ತಡೆಯುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕ ಸಿ.ಯತಿರಾಜು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಕದನ ವಿರಾಮ ಘೋಷಿಸಿರುವುದು ಕೇಂದ್ರ ಸರಕಾರವೇ ಹೊರತು ರೈತರಲ್ಲ, ರೈತರ ಹೋರಾಟ ಇಂದಿಗೂ ಮುಂದುವರೆದಿದೆ, ಕಾನೂನು ಬದ್ದ ಬೆಂಬಲ ಬೆಲೆ, ವಿದ್ಯುತ್‌ ಖಾಸಗೀಕರಣ ತಿದ್ದುಪಡಿ ಬಿಲ್‌ ವಾಪಸ್‌, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಹಿಂಪಡೆಯುವುದು ಸೇರಿದಂತೆ ಹತ್ತಕ್ಕು ಹೆಚ್ಚು ಬೇಡಿಕೆಗಳ ಬಗ್ಗೆ ಪ್ರಧಾನಿ ಗಮನಹರಿಸಿಲ್ಲ, ಹಾಗಾಗಿ ಆ ಎಲ್ಲಾ ಬೇಡಿಕೆಗಳ ಕಡೆಗೆ ಸರಕಾರ ಗಮನಹರಿಸಿ, ಬಗೆಹರಿಸಬೇಕು ಎಂದು ಒತ್ತಾಯಿಸಿ, ನವೆಂಬರ್‌ 26ರ ಹೆದ್ದಾರಿ ಬಂದ್‌ ಆಯೋಜಿಸಲಾಗಿದೆ ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕೇಂದ್ರ ಸರಕಾರ ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆದ ರೀತಿಯಲ್ಲಿಯೇ ರಾಜ್ಯದಲ್ಲಿಯೂ ಸರಕಾರ ತರಾತುರಿಯಲ್ಲಿ ಜಾರಿಗೆ ತಂದು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂಬುದು ರಾಜ್ಯ ರೈತ ಸಂಘದ ಪ್ರಬಲ ಆಗ್ರಹವಾಗಿದೆ ಎಂದರು.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಸಾವಿರಾರು ಮನೆಗಳು ಹಾನಿಗೊಳಗಾಗಿವೆ, ಲಕ್ಷಾಂತರ ಹೆಕ್ಟೇರ್ ನಲ್ಲಿ ಬೆಳೆದ ರಾಗಿ, ಶೇಂಗಾ, ತೊಗರಿ, ಭತ್ತದ ಬೆಳೆ ನಾಶವಾಗಿದೆ, ಕೂಡಲೇ ಸಂತ್ರಸ್ಥ ರೈತರಿಗೆ ಪರಿಹಾರ ವಿತರಿಸಬೇಕಾದ ರಾಜ್ಯ ಸರಕಾರ ಇನ್ನೂ ಸಮೀಕ್ಷೆ ನಡೆಸುವ ಮಾತನಾಡುತ್ತಿದೆ, ಅಕಾಲಿಕ ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದೆ, ಕೂಡಲೇ ಸರಕಾರ ಪರಿಹಾರ ವಿತರಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ, ಹಾಗಾಗಿ ನವೆಂಬರ್‌ 26 ರಂದು ಹೆದ್ದಾರಿ ಬಂದ್‌ಗೆ ಬೆಂಬಲ ಘೋಷಿಸಿದೆ ಎಂದರು.
ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್‌ ಮಾತನಾಡಿ, ಕೇಂದ್ರ ಸರಕಾರಕ್ಕೆ ತನ್ನ ತಪ್ಪಿನ ಅರಿವಾಗಿದೆ, ತಮ್ಮ ಪಕ್ಷದ ರಾಜಕೀಯ ಅವನತಿ ತಡೆಯುವ ಉದ್ದೇಶದಿಂದ ಮತ್ತು ಐದು ರಾಜ್ಯಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ರೈತರ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿದೆ, ಆದರೆ ಕಳೆದ ಏಳು ವರ್ಷಗಳಿಂದ ಸುಳ್ಳನ್ನೇ ಹೇಳುತ್ತಿರುವ ಪ್ರಧಾನಿಯ ಮೇಲೆ ನಮಗೆ ನಂಬಿಕೆಯಿಲ್ಲ, ಸಂಸತ್ತಿನಲ್ಲಿ ಕಾಯ್ದೆಗಳನ್ನು ಹಿಂಪಡೆಯುವವರೆಗು ಹೋರಾಟ ನಿಲ್ಲದು, ಕಾನೂನು ಬದ್ದ ಎಂಎಸ್‌ಪಿ ಹಾಗೂ ಕಾರ್ಮಿಕ ಕಾಯ್ದೆಗಳ ರದ್ದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್‌ 26ರ ಹೆದ್ದಾರಿ ತಡೆಯಲ್ಲಿ ಭಾಗವಹಿಸುತಿದ್ದು, ಕ್ಯಾತ್ಸಂದ್ರದ ಜಾಸ್‌ ಟೋಲ್‌ ಬಳಿ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಹೆದ್ದಾರಿ ತಡೆ ಆಯೋಜಿಸಿರುವುದಾಗಿ ತಿಳಿಸಿದರು.
ಕಾರ್ಮಿಕ ಮುಖಂಡರಾದ ಸೈಯದ್‌ ಮುಜೀಬ್‌, ಗಿರೀಶ್‌, ಕೆ.ಆರ್.ಎಸ್.ನ ಎಸ್‌.ಎನ್‌.ಸ್ವಾಮಿ, ಮಹಿಳಾ ಹೋರಾಟಗಾರರಾದ ರತ್ನಮ್ಮ, ಅಶ್ವಿನಿ. ಟಿ.ಇ., ನವೆಂಬರ್‌ 26ರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿ, ಕಾರ್ಮಿಕರು, ದಲಿತರು, ಪ್ರಗತಿಪರರು ನವೆಂಬರ್‌ 26ರ ಹೋರಾಟವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಕೊಳಗೇರಿ ಸಮಿತಿಯ ಅರುಣ್‌.ಬಿ.ಜಿ, ರಂಗಹನುಮಯ್ಯ ಸೇರಿದಂತೆ ಹಲವರು ಇದ್ದರು.

Get real time updates directly on you device, subscribe now.

Comments are closed.

error: Content is protected !!