ರೈತರಿಗೆ ಶಾಪವಾದ ಮಳೆ- ಅಪಾರ ನಷ್ಟವಾಯ್ತು ಬೆಳೆ

148

Get real time updates directly on you device, subscribe now.

ಕುಣಿಗಲ್‌: ನೀರಿಗಾಗಿ ಹೋರಾಟ ನಡೆಸಿ, ಅಧಿಕಾರಿಗಳ, ಶಾಸಕರ ಮನ ಒಲಿಸಿ ಕಷ್ಟಪಟ್ಟು ನೀರು ಹರಿಸಿಕೊಂಡ ಬೇಗೂರು ಅಮಾನಿ ಕೆರೆ ಭಾಗದ ಕೆಲ ರೈತರಿಗೆ ಕೆರೆ ನೀರು ಸೇರಿದಂತೆ ಮಳೆ ನೀರು ಶಾಪವಾಗಿ ಪರಿಣಮಿಸಿ, ಕಷ್ಟಪಟ್ಟು ಇಟ್ಟ ಬೆಳೆ ಸಂಪೂರ್ಣ ಜಲಮಯವಾಗಿ ಪರದಾಡುವಂತಾಗಿದೆ.
ತಾಲೂಕಿನ ಕಸಬಾ ಹೋಬಳಿಯಲ್ಲಿರುವ ಬೇಗೂರು ಅಮಾನಿಕೆರೆ ಸರಿಸುಮಾರು 450 ಎಕರೆಗೂ ಹೆಚ್ಚು ವಿಸ್ತಾರವಾದ ಕೆರೆಯಾಗಿದೆ. ಈ ಕೆರೆಗೆ ಮಳೆನೀರು ಪ್ರಮುಖ ಆಶ್ರಯವಾಗಿದ್ದು, ಹೇಮಾವತಿ ಯೋಜನೆಯಾದ ನಂತರ ಕುಣಿಗಲ್‌ ದೊಡ್ಡಕೆರೆ ತುಂಬಿದ ನಂತರ ಈ ಕೆರೆಗೆ ಹರಿದು ಬರುವ ವ್ಯವಸ್ಥೆ ಇದೆ, ಬೇಗೂರು ಅಮಾನಿಕೆರೆಗೆ ಮುಂಭಾಗದಲ್ಲಿ ಸುಮಾರು 900 ಎಕರೆ ಅಚ್ಚುಕಟ್ಟು ಪ್ರದೇಶ ಇದ್ದರೆ ಕೆರೆ ಹಿನ್ನೀರಿಗೆ ಸರಿ ಸುಮಾರು ಐದು ಸಾವಿರ ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಆಶ್ರಯ ತಾಣವಾಗಿದೆ.
ಕೆರೆಯಲ್ಲಿ ಅಪಾರ ಪ್ರಮಾಣದ ಮರಳಿನ ಸಂಗ್ರಹ ಇದ್ದು ಕಳೆದ 15 ವರ್ಷದ ಹಿಂದೆ ನಡೆದ ಮರಳು ಮಾಫಿಯಕ್ಕಾಗಿ ಕೆರೆಯಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಅಡಿ ಆಳ ಕೊರೆದು ಮರಳು ಎತ್ತಿದ ಪರಿಣಾಮ ಒಂದು ಕಡೆ ಹೂಳು ತೆಗೆದಂತಾಗಿ ಬೃಹತ್‌ ಗುಂಡಿಗಳೂ ಆದವು, ಈ ಕೆರೆಯಲ್ಲಿ ನೀರು ನಿಂತಲ್ಲಿ ಸುತ್ತಮುತ್ತಲ ಪ್ರದೇಶದ ಸುಮಾರು ನಾಲ್ಕಾರು ಸಾವಿರ ಬೋರ್ ವೆಲ್ ಗಳಿಗೆ ಜೀವ ಬಂದತಾಗುತ್ತದೆ, ಈ ಬಾರಿ ಹೇಮಾವತಿ ಹರಿಯಲು ಮುಂದಾದಾಗ ಈ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೂ ಆದ ರಂಗಣ್ಣಗೌಡ ಮತ್ತು ಈ ಭಾಗದ ಮುಖಂಡರೊಂದಿಗೆ ಅಧಿಕಾರಿಗಳೊಂದಿಗೆ, ಶಾಸಕ ಡಾ.ರಂಗನಾಥ್‌ ಅವರೊಂದಿಗೆ ಸತತ ಚರ್ಚೆ ನಡೆಸಿ ಬೇಗೂರು ಕೆರೆಗೆ ಹೇಮೆ ನೀರು ಹರಿಸಿದರು.
ಹೇಮ ನೀರಿನ ಜೊತೆ ಮಳೆಯು ಎಡೆಬಿಡದೆ ಸುರಿದು ಕೆರೆಯು ಶೇ.38 ರಷ್ಟು ತುಂಬಿತು. ಆದರೆ ಕಳೆದ ಹಲವಾರು ದಶಕಗಳಿಂದ ಕೆರೆಯ ತೂಬನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ, ಕೆರೆಯಲ್ಲಿ ಶೇಖರಣೆಗೊಂಡು ನೀರು ಏಕಾಏಕಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿದ್ದ ರಾಗಿಬೆಳೆಗೆ ನುಗ್ಗಿತು, ಒಂದು ಕಡೆ ಕೆರೆಯ ನೀರು ಮತ್ತೊಂದೆಡೆ ಅಕಾಲಿಕ ಮಳೆಯ ನೀರು ಸೇರಿಕೊಂಡು ಅಚ್ಚಕಟ್ಟು ಪ್ರದೇಶದಲ್ಲಿ ಬೆಳೆಯಲಾಗಿದ್ದ ಸುಮಾರು 170 ಎಕರೆಗೂ ಹೆಚ್ಚು ಪ್ರದೇಶದ ರಾಗಿಬೆಳೆ ಜಲಮಯವಾಗಿ, ಕಷ್ಟಪಟ್ಟು ಬೆಳೆ ಇಟ್ಟು, ನೀರು ಹರಿಸಿದರೂ ಬೆಳೆ ಕೈಗೆ ಬಾರದೆ ಕಣ್ಣ ಮುಂದೆಮೇ ಹಾಳಾಗುತ್ತಿರುವುದು ನೋಡಿ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ ಅಸರ್ಮಪಕ ತೂಬು ನಿರ್ವಹಣೆಯಿಂದ ಕೆರೆ ನೀರು ಪೋಲಾಗುವುದು ನಿಯಂತ್ರಿಸಲು ಮಂಗಳವಾರ ಕುಣಿಗಲ್‌ ಉಪ ವಿಭಾಗದ ಹೇಮಾವತಿ ನಾಲಾ ವಲಯದ ಅಧಿಕಾರಿಗಳು, ಅಚ್ಚುಕಟ್ಟು ಪ್ರದೇಶದ ರೈತರು, ಗ್ರಾಮಸ್ಥರು ಮಣ್ಣಿನ ಮೂಟೆ ಬಿಟ್ಟು ನಿಯಂತ್ರಿಸಲು ಸಿದ್ಧತೆ ನಡೆಸಿದ್ದಾರೆ. ಎಡಬಿಡದೆ ಸುರಿಯುತ್ತಿರುವ ಮಳೆ ಕಾರ್ಯಕ್ಕೆ ಅಡ್ಡಿಯಾಗಿದೆ, ಬೆಳೆಹಾನಿ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ ರೈತ ಪ್ರಕಾಶ, ರೈತನಿಗೆ ನೀರೆ ಮಿತ್ರ, ಕೊನೆಗೆ ನೀರು ಶತೃ ಎಂಬಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!