ಕುಣಿಗಲ್: ರಾಜ್ಯಾದ್ಯಂತ ಆಗಿರುವ ಬೆಳೆಹಾನಿಗೆ ಸಂಬಂಧಿಸಿದಂತೆ ಹತ್ತು ದಿನದೊಳಗೆ ಎಲ್ಲಾ ಜಿಲ್ಲಾಧಿಕಾರಿಗಳು ಮಾಹಿತಿ ರೈತರಿಂದ ಕ್ರೂಡೀಕರಿಸಿ ಅಪ್‌ಲೋಡ್ ಮಾಡಿ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದರು.
ಬುಧವಾರ ಸಂಜೆ ತಾಲೂಕಿನ ಎಡೆಯೂರು ಹೋಬಳಿಯ ಜಲಧಿಗೆರೆ, ಬ್ಯಾಲದಕೆರೆ ಗ್ರಾಮಗಳಲ್ಲಿ ರಾಗಿಬೆಳೆ ಹಾನಿಯಾಗಿರುವ ರೈತರ ಹೊಲಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರ ಅಹವಾಲು ಆಲಿಸಿದರು. ರೈತರು ಸರ್ಕಾರ ನೀಡುತ್ತಿರುವ ಪರಿಹಾರ ಹಣ ಯಾವುದಕ್ಕೂ ಸಾಲದು, ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಹೆಕ್ಟೇರ್ ಗೆ 6800 ರೂ. ದರ ನಿಗದಿ ಮಾಡಿದ್ದರು. ಇದೀಗ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯ ನಿಯಮಗಳಿಗೆ ಮಾರ್ಪಾಡು ಮಾಡಿ ಅರೆ ನೀರಾವರಿ ಬೆಳೆಗೆ 20 ಸಾವಿರ, ನೀರಾವರಿ ಬೆಳೆಗೆ 35 ಸಾವಿರ ಹಾಗೂ ತೋಟಗಾರಿಕೆ ಬೆಳೆಗೆ 49 ಸಾವಿರ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ. ಈ ಬೇಡಿಕೆ ಕೇವಲ ರಾಜ್ಯಸರ್ಕಾರದ ಇಡೀ ದೇಶದ ಎಲ್ಲಾ ರಾಜ್ಯಗಳ ಬೇಡಿಕೆ ಇದ್ದು, ಶೀಘ್ರವೆ ಕೇಂದ್ರ ಸರ್ಕಾರವೂ ಸ್ಪಂದಿಸುವ ಭರವಸೆ ಇದೆ.
ರಾಜ್ಯಾದ್ಯಂತ ಅಕಾಲಿಕ ಮಳೆಗೆ ಒಟ್ಟಾರೆ 5 ಲಕ್ಷ ಹೆಕ್ಟೇರ್‌ಗೂ ಬೆಳೆ ಹಾನಿಯಾಗಿದ್ದು ಒಂದು ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ, ಕಳೆದೊಂದು ವಾರದಲ್ಲಿ 358 ಕೋಟಿ ಹಣ ಬೆಳೆ ಪರಿಹಾರ ಬಿಡುಗಡೆ ಮಾಡಿದ್ದು ರೈತರ ಖಾತೆಗೆ ನೇರ ಜಮೆಗೆ ಕ್ರಮ ಕೈಗೊಳ್ಳಲಾಗಿದೆ, ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟಾರೆ 679 ಕೋಟಿ ಹಣ ಇದ್ದು ಮಳೆ ಹಾನಿಗೆ ಸೂಕ್ತ ಪರಿಹಾರ ನೀಡಲು ಕೂಡಲೆ ಕ್ರಮ ಕೈಗೊಳ್ಳಬೇಕು, ಮನೆ ಹಾನಿಗೆ ತಕ್ಷಣವೆ ಒಂದು ಲಕ್ಷ ರೂ. ಪರಿಹಾರ ನೀಡಲು ಸೂಚಿಸಿದೆ. ಮನೆ ಹಾನಿಗೊಂಡ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಈಗಾಗಲೆ ಮೊದಲು ಹಾಗೂ ಎರಡನೆ ಕಂತಿನಲ್ಲಿ ಒಟ್ಟು 750 ಕೋಟಿ ಪರಿಹಾರ ನೀಡಲಾಗಿದೆ. ಬೆಳೆ ಹಾನಿಗೆ ಒಟ್ಟಾರೆ 2,20 ಲಕ್ಷ ರೈತರಿಗೆ ಅವರ ಖಾತೆಗೆ ಒಟ್ಟಾರೆ 182 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಇದೀಗ ಎನ್.ಡಿ.ಆರ್.ಎಫ್ ನಿಯಮಗಳಿಗೆ ಒಳಪಟ್ಟು ಒಟ್ಟಾರೆ 900 ಕೋಟಿ ರೂ. ಪರಿಹಾರ ನೀಡುವಂತೆ ಇನ್ನೆರಡು ಮೂರು ದಿನದೊಳಗೆ ಪತ್ರ ಬರೆಯಲಾಗುವುದು, ಕಳೆದ ಸಾರಿಯು 760 ಕೋಟಿಗೆ ಮನವಿ ಸಲ್ಲಿಸಲಾಗಿದೆ, ಬುಧವಾರ ಬೆಳಗಿನಿಂದ ಕೊಡಗು, ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ ಒಟ್ಟಾರೆ 15 ಕಡೆ ಭೇಟಿ ನೀಡಿ ರೈತರ ಅಹವಾಲು ಸ್ಪಂದಿಸಿ ಸರ್ಕಾರ ರೈತರ ನೆರವಿಗೆ ನಿಲ್ಲಲಿದೆ. ಸರ್ಕಾರವೂ ಬೆಳೆ ಹಾನಿಗೆ ಒಳಗಾದ ರೈತರ ನೆರವಿಗೆ ಪೂರಕ ಕ್ರಮ ಕೈಗೊಳ್ಳಲಿದೆ. ಮನೆ ಹಾನಿಯಾದ ಮನೆಯ ಮಾಲೀಕರಿಗೂ ಶೀಘ್ರ ಪರಿಹಾರ ನೀಡಲು ಸೂಚಿಸಲಾಗಿದ್ದು, ಸರ್ಕಾರ ಮಳೆ ಹಾನಿಗೊಳಗಾದ ಎಲ್ಲರ ನೆರವಿಗೆ ನಿಂತು ಸ್ಪಂದಿಸಲಿದೆ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ತಾಲೂಕಿನಲ್ಲಿ ಸಂಪೂರ್ಣ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ, ರಾಜ್ಯಸರ್ಕಾರ ನೀಡುವ ಪರಿಹಾರ ಹಣ ಅವೈಜ್ಞಾನಿಕವಾಗಿದ್ದು, ರೈತರು ಒಂದು ಎಕರೆಗೆ ಒಟ್ಟಾರೆ 20 ಸಾವಿರ ರೂ. ಖರ್ಚು ಮಾಡಿ ಬೆಳೆ ಇಟ್ಟಿದ್ದು, ಈಗ ಕೇವಲ ಎಕರೆಗೆ ಅವೈಜ್ಞಾನಿಕವಾಗಿ 2700 ರೂ. ನೀಡಿದರೆ ಯಾವ ಲೆಕ್ಕಕ್ಕೆ, ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ಮಾಡಬೇಕು, ಸರ್ಕಾರ ನೀಡುವ ಮೊತ್ತ ಯಾವುದಕ್ಕೂ ಸಾಲೊಲ್ಲ ಪರಿಹಾರ ಹಣ, ಎಕೆರೆಗೆ 30 ಸಾವಿರ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಥಳದಲ್ಲಿದ್ದ ರೈತರೂ ಧ್ವನಿಗೂಡಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಉಪವಿಭಾಗಧಿಕಾರಿ ಅಜಯ್, ತಹಶೀಲ್ದಾರ್ ಮಹಾಬಲೇಶ್ವರ್, ಜಿಪಂ ಸಿಇಒ ಡಾ.ವಿದ್ಯಾಕುಮಾರಿ, ಕೃಷಿ ಇಲಾಖೆ ಜಂಟಿನಿರ್ದೇಶಕ ಅಶೋಕ್, ಉಪ ನಿರ್ದೇಶಕಿ ಸುಲೋಚನ, ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ಪಿ.ಎಲ್.ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ಬಿಜೆಪಿ ಅಧ್ಯಕ್ಷ ಬಲರಾಮ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಇತರರು ಇದ್ದರು.
ನಿಮ್ಮ ಜೊತೆಗೆ ಅಧಿಕಾರಿಗಳು ಬಂದ್ರೆ ನೀತಿ ಸಂಹಿತೆ ಉಲ್ಲಂಘನೆ ಆಗಲ್ವ
ಕುಣಿಗಲ್: ಅಧಿಕಾರಿಗಳು ನಾವು ಕರೆದರೆ ಚುನಾವಣೆ ನೀತಿ ಸಂಹಿತೆ ಅಂತಾರೆ, ನಿಮ್ಮ ಜೊತೆ ಮಾತ್ರ ಬಂದಿದ್ದಾರೆ, ಈಗ ನೀತಿ ಸಂಹಿತೆ ಉಲ್ಲಂಘನೆ ಆಗೋದಿಲ್ಲವೆ ಎಂದು ಶಾಸಕ ಡಾ.ರಂಗನಾಥ ಅವರು ಸಚಿವ ಆರ್.ಅಶೋಕ್ ಅವರನ್ನು ಪ್ರಶ್ನಿಸಿದರು.
ಬುಧವಾರ ಸಂಜೆ ತಾಲೂಕಿನ ಜಲಧಿಗೆರೆ ಗ್ರಾಮದಲ್ಲಿ ರೈತರ ಜಮೀನಿನಲ್ಲಿ ರಾಗಿಬೆಳೆ ಹಾಳಾಗಿರುವ ಬಗ್ಗೆ ಪರಿಶೀಲನೆಗೆ ಆಗಮಿಸಿದ ಕಂದಾಯ ಸಚಿವರ ಆರ್.ಅಶೋಕ್ ಅವರನ್ನು ಪ್ರಶ್ನಿಸಿದ ಶಾಸಕರು, ಅಧಿಕಾರಿಗಳು ಈ ರೀತಿ ನಡೆದುಕೊಂಡರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರನ್ನು ಸಮಾಧಾನಗೊಳಿಸಿದ ಸಚಿವರು, ಅಕಾಲಿಕ ಮಳೆಯಿಂದ ಬೆಳೆಹಾನಿ ಸೇರಿದಂತೆ ಇತರೆ ಪರಿಶೀಲನೆಗೆ ಅನುವು ಮಾಡಿಕೊಡುವಂತೆ ನಾವು ಆಯೋಗಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ನಮಗೆ ನಿಬಂಧನೆ ಹಾಕಿ ಅನುಮತಿ ನೀಡಿದ್ದಾರೆ, ನೀವು ಬೇಕೆಂದರೆ ನಾನು ತೋರಿಸುತ್ತೇನೆ ಎಂದರು.
ಇದಕ್ಕೆ ಶಾಸಕರು ಆ ರೀತಿ ಇದ್ದರೆ ಸರಿ ಎಂದರು, ನಂತರ ತಾಲೂಕಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಶಾಸಕರು, ತಾಲೂಕಿನ ಮಿನಿ ವಿಧಾನಸೌಧ ಕಟ್ಟಡಕ್ಕೆ ಅನುದಾನದ ಕೊರತೆ ಇದ್ದು ಮತ್ತಷ್ಟು ಅನುದಾನ ನೀಡುವಂತೆ ಮನವಿ ಮಾಡಿದರು. ಸಚಿವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
Comments are closed.