ಎಂ.ಎಲ್.ಸಿ ಎಲೆಕ್ಷನ್ ನಲ್ಲಿ ಕೆ.ಎನ್‌.ರಾಜಣ್ಣಗೆ ಸಹಾಯ ಮಾಡಲ್ಲ: ಮಾಧುಸ್ವಾಮಿ

ಬಿಜೆಪಿ ಪಕ್ಷಕ್ಕೆ ನಾವು ದ್ರೋಹ ಮಾಡಲ್ಲ

320

Get real time updates directly on you device, subscribe now.

ತುಮಕೂರು: ಬಿಜೆಪಿ ಪಕ್ಷದಿಂದ ಎಂ.ಎಲ್.ಸಿ ಚುನಾವಣೆಗೆ ಲೋಕೇಶ್ ಗೌಡ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ, ಅವರು ಗೆಲುವಿಗೆ ನಾವೇಲ್ಲಾ ಶ್ರಮಿಸುತ್ತೇವೆ, ನಾವೆಲ್ಲಾ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಅಭ್ಯರ್ಥಿ ಬಗ್ಗೆ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ, ಅಡ್ರೆಸ್‌ ಇಲ್ಲದ ಅಭ್ಯರ್ಥಿ ಎನ್ನುತ್ತಿದ್ದಾರೆ, ಹಾಗಾದರೆ ಜೆಡಿಎಸ್‌ ಪಕ್ಷ ನಿಲ್ಲಿಸಿರುವ ಅಭ್ಯರ್ಥಿ ಸಾಧನೆ ಏನು, ಅಪಪ್ರಚಾರಗಳಿಗೆ ನಾವು ತಲೆಕೆಡಿಸಿಕೊಳ್ಳಲ್ಲ, ಮತದಾರರ ಮುಂದೆ ಹೋಗಿ ಮತ ಕೇಳುತ್ತೇವೆ ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕೆ.ಎನ್‌.ರಾಜಣ್ಣ ಅವರು ಬಸವರಾಜು ಅವರ ಗೆಲುವಿಗೆ ಶ್ರಮಿಸಿದ್ದಾರೆ ಎಂಬುದು ಅವರ ಮಾತು, ಚುನಾವಣೆಯಲ್ಲಿ ಒಂದಲ್ಲ ಒಂದು ರೀತಿ ಪ್ರಯೋಜನ ಪಡೆಯುವುದು ನಡೆಯುತ್ತಿರುತ್ತದೆ, ರಾಜಣ್ಣ ನಮ್ಮ ಸ್ನೇಹಿತರು, ಅವರು ಜಿ.ಎಸ್‌.ಬಸವರಾಜು ಗೆಲುವಿಗೆ ಸಹಾಯ ಮಾಡಿರಬಹುದು ಎಂದರು.
ನಮ್ಮ ಬಿಜೆಪಿ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಸಲ್ಲದ ಅಪಪ್ರಚಾರ ಮಾಡುವುದು ಬೇಡ, ಪಕ್ಷ ಹೆತ್ತ ತಾಯಿ ಇದ್ದ ಹಾಗೆ, ರಾಜಿಯಾಗುವ ಸ್ಥಿತಿಗೆ ನಾವು ಹೋಗಲ್ಲ, ನಾನು, ಬಸವರಾಜು, ಶಿವಣ್ಣ, ಕೆ.ಎನ್‌.ರಾಜಣ್ಣ ಸ್ನೇಹಿತರು, ಅವರು ಎಂಪಿ ಚುನಾವಣೆಯಲ್ಲಿ ನಮಗೆ ಸಹಾಯ ಮಾಡಿರಬಹುದು, ಹಾಗಂತ ನಮ್ಮ ಪಕ್ಷದ ಅಭ್ಯರ್ಥಿ ಇರುವಾಗ ನಾವು ಯಾರಿಗೂ ಈ ಎಂ.ಎಲ್.ಸಿ ಚುನಾವಣೆಯಲ್ಲಿ ಸಹಾಯ ಮಾಡಲ್ಲ, ಇವತ್ತಿನವರೆಗೂ ನಮ್ಮನ್ನು ರಾಜಣ್ಣ ಅವರು ಸಹಾಯ ಕೇಳಿಲ್ಲ, ಅವರನ್ನು ಸಣ್ಣವರನ್ನಾಗಿ ಮಾಡಬೇಡಿ, ವಿಶ್ವಾಸ ಬೇರೆ, ನೀತಿ ನಿಯತ್ತು ಬೇರೆ ಎಂದರು.
ನಾವು ಯಾವುದೇ ಕಾರಣಕ್ಕೂ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿಲ್ಲ, ಡಾ.ಪರಮೇಶ್ವರ್‌ ಅವರ ಆರೋಪ ಸುಳ್ಳು, ಇಡೀ ಜಿಲ್ಲೆ ಮುಖ್ಯ, ಮಂಜೂರಾದ ಹಣವನ್ನು ನಾವು ಯಾವುದೇ ಕಾರಣಕ್ಕೂ ವಾಪಸ್‌ ಪಡೆದಿಲ್ಲ, ಕೊರಟಗೆರೆ ಒಂದೇನಾ ತುಮಕೂರು ಜಿಲ್ಲೆಯಲ್ಲಿ ಇರೋದು, ಕೊರಟಗೆರೆಗೆ ಹೆಚ್ಚು ಮನೆ ಕೊಟ್ಟಿದ್ದೇವೆ, ಗುಬ್ಬಿಗೆ ಎಷ್ಟು ಮನೆ ಕೊಟ್ಟಿದ್ದೇವೆ ಎಂಬುದನ್ನು ಪರಮೇಶ್ವರ್‌ ತಿಳಿದುಕೊಳ್ಳಲಿ ಎಂದರು.
ನಮ್ಮ ಪಕ್ಷ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಎಂ.ಎಲ್.ಸಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಮತ ಕೇಳುತ್ತೇವೆ, ಪಕ್ಷ ನಿಷ್ಟೆಯಿಂದ ಮತದಾರರು ನಮ್ಮ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ ಎಂದರು.
ನಮ್ಮ ಸರ್ಕಾರ ಬಂದಾಗಿನಿಂದ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ, ಜಲ ಜೀವನ್‌ ಮಿಷನ್‌, ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಹಾಗೂ ಅಲೆಮಾರಿ ಜನಾಂಗಕ್ಕೆ ಮನೆ ಕೊಡುವ ತೀರ್ಮಾನ ಮಾಡಿ ಹದಿಮೂರು ಸಾವಿರ ಮನೆ ಮಂಜೂರು ಮಾಡಿದ್ದೇವೆ, ಎಲ್ಲಾ ಹಳ್ಳಿಗಳಿಗೆ ಶುದ್ಧ ನೀರು ಕೊಡುವ ಯೋಜನೆ ರೂಪಿಸಿದ್ದೇವೆ, ರಸ್ತೆ, ಚರಂಡಿ ನಿರ್ಮಾಣ ಮಾಡಿದ್ದೇವೆ, ರೈತರ ಬೆಳೆಗಳಿಗೆ ತ್ತಮ ಬೆಲೆ ಒದಗಿಸಿದ್ದೇವೆ, ರೈತರ ಸುಸ್ಥಿರ ಬದುಕಿಗೆ ಶಕ್ತಿ ನೀಡಿದ್ದೇವೆ, ಜಿಲ್ಲೆಯ ಎಲ್ಲಾ ಭಾಗಕ್ಕೂ ಹೇಮೆ ಹರಿಸಿದ್ದೇವೆ, ಬೆಳೆ ನಷ್ಟ, ಬಿದ್ದ ಮನೆಗಳಿಗೆ ಪರಿಹಾರ, ವಸತಿ ಯೋಜನೆ ಮೂಲಕ ಎಲ್ಲರಿಗೂ ಮನೆ, ಪ್ರತಿ ತಾಲ್ಲೂಕಲ್ಲಿ ಹತ್ತು ಶಾಲೆಯನ್ನು ಅಮೃತ್‌ ಶಾಲೆಯಡಿ ಆಯ್ಕೆ ಮಾಡಿ ಅಭಿವೃದ್ಧಿ ಮಾಡಿದ್ದೇವೆ, ಆಸ್ಪತ್ರೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ, ಕೋವಿಡ್‌ ಸಮರ್ಥವಾಗಿ ಎದುರಿಸಿದ್ದೇವೆ, ತಾಯಿ ಮಕ್ಕಳ ಆರೋಗ್ಯಕ್ಕೆ ಒತ್ತು ನೀಡಿದ್ದೇವೆ, ಈ ಎಲ್ಲಾ ಅಂಶಗಳನ್ನು ಮತದಾರರ ಮುಂದೆ ಇಟ್ಟು ಮತ ಕೇಳುತ್ತೇವೆ ಎಂದರು.
ಬೆಲೆ ಏರಿಕೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲವಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಬೆಲೆ ಏರಿಕೆ ಕಾಮನ್‌ ಆಗಿ ನಡೆಯುವ ಪ್ರೊಸೀಜರ್‌, ಅದರ ಪರಿಣಾಮ ಚುನಾವಣೆ ಮೇಲೆ ಬೀರಲ್ಲ ಎಂದು ಸಚಿವ ಮಾಧುಸ್ವಾಮಿ ಅವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.
ತುಮಕೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ಶೇ.80 ರಷ್ಟು ಕೃಷಿ ಬೆಳೆ ಲಾಸ್‌ ಆಗಿದೆ, ನಷ್ಟ ಪರಿಹಾರವನ್ನು ಶೀಘ್ರ ನೀಡುತ್ತೇವೆ, ವಿಮೆ ವ್ಯಾಪ್ತಿ ಬರುವುದಾದರೆ ಅಲ್ಲಿಯೇ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ಯಾರೋ ಆರೋಪ ಮಾಡುವಂತೆ ನಾವು ಕೆಟ್ಟ ರಾಜಕೀಯ ಮಾಡಲ್ಲ, ಜನ ಓಟ್‌ ಹಾಕಿದ್ದಾರೆ ಗೆದ್ದಿದ್ದೇನೆ, ಸೋತರೆ ನಾವು ಸೋಲು ಒಪ್ಪಿಕೊಳ್ಳುತ್ತಿದ್ದೆ, ದೇವೇಗೌಡರು ತುಮಕೂರು ಜಿಲ್ಲೆಯವರಿಗೆ ರಕ್ತ ಕೊಡುವೆ, ನೀರು ಮಾತ್ರ ಕೊಡಲ್ಲ ಎಂದಿದ್ದರು, ಅದಕ್ಕೆ ಅವರನ್ನು ಜಿಲ್ಲೆಯ ಜನ ಸೋಲಿಸಿದ್ದಾರೆ ಎಂದು ಹೇಳಿದರು.
ಎಂ ಎಲ್ ಸಿ ಬಿಜೆಪಿ ಅಭ್ಯರ್ಥಿ ಲೋಕೇಶ್‌ ಗೌಡ ಮಾತನಾಡಿ, ನಾನು ಕೊರಟಗೆರೆ ತಾಲ್ಲೂಕು ವಡ್ಡಗೆರೆ ಗ್ರಾಮದವನು, ಬಿಜೆಪಿಗೆ ಬೂತ್‌ ಮಟ್ಟದ ಕಾರ್ಯಕರ್ತನಾಗಿ ಸೇರಿದೆ, ನಂತರ ಬಿಜೆಪಿ ಪಕ್ಷ ನನಗೆ ಅವಕಾಶ ನೀಡಿದ್ದರಿಂದ ಬಿಬಿಎಂಪಿ ಸದಸ್ಯನಾಗಿ ಆಯ್ಕೆಯಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ, ಈಗ ತುಮಕೂರು ಎಂ.ಎಲ್.ಸಿ ಚುನಾವಣೆಗೆ ಅಭ್ಯರ್ಥಿಯಾಗಿ ಪಕ್ಷ ನನ್ನ ಹೆಸರು ಘೋಷಣೆ ಮಾಡಿದೆ, ಇದು ನನಗೆ ಖುಷಿಯಾಗಿದೆ, ನನಗೆ ಗೆಲ್ಲುವ ವಿಶ್ವಾಸ ಇದೆ, ಎಲ್ಲಾ ಕ್ಷೇತ್ರದಲ್ಲಿ ಪ್ರವಾಸ ಮಾಡುವೆ, ಮತದಾರರ ಬಳಿ ತೆರಳಿ ಆಶೀರ್ವಾದ ಪಡೆಯುವೆ ಎಂದರು.
ನನ್ನ ಬಗ್ಗೆ ವೈರಲ್‌ ಆಗಿರುವ ಆಡಿಯೋ ಫೇಕ್‌, ನನ್ನ ಮಾತು ಜೋಡಣೆ ಮಾಡಿ ಬಿಟ್ಟಿದ್ದಾರೆ, ಇದು ಆರು ವರ್ಷದ ಹಳೆಯದು, ನಾನು ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬುದನ್ನು ಸಹಿಸದವರು ಇಂಥ ಕೃತ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಎಂ.ಬಿ.ನಂದೀಶ್‌, ಹೆಬ್ಬಾಕ ರವಿ, ಪ್ರಭಾಕರ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!