ಹತ್ತು ವರ್ಷದ ನಂತರ ತೀತಾ ಜಲಾಶಯ ಕೋಡಿ

7,245

Get real time updates directly on you device, subscribe now.

ಕೊರಟಗೆರೆ: ರೈತರ ಜೀವನಾಡಿ ಆಗಿರುವ ತೀತಾ ಜಲಾಶಯ ಮಳೆರಾಯನ ಕೃಪೆಯಿಂದ ದಶಕಗಳ ನಂತರ ತುಂಬಿ ಕೋಡಿ ಬಿದ್ದಿದೆ. ದೇವರಾಯನದುರ್ಗದ ತಪ್ಪಲಿನಲ್ಲಿ ಉದಯಿಸುವ ಜಯಮಂಗಳಿ ನದಿ ಪಾತ್ರದ ಏಕೈಕ ಜಲಾಶಯ ಇದಾಗಿದೆ. ಜಯಮಂಗಳಿ ನದಿ ಹಾಗೂ ತೀತಾ ಜಲಾಶಯ ಕೊರಟಗೆರೆ ಕ್ಷೇತ್ರದ ಸಾವಿರಾರು ರೈತರಿಗೆ ನೀರಿನ ಆಸರೆಯಾಗಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಗೊರವನಹಳ್ಳಿ ಮಹಾಲಕ್ಷ್ಮೀ ಪುಣ್ಯಕ್ಷೇತ್ರದ ಸಮೀಪ ಇರುವ ಜಲಾಶಯ ಮಲೆನಾಡಿನ ಸೊಬಗನ್ನು ನಾಚಿಸುವಂತಿದೆ. ತೀತಾ ಜಲಾಶಯದ ತೂಬಿನ ಮಟ್ಟ 764 ಮೀಟರ್‌ ಇದೆ, ಎಡದಂಡೆ ಮತ್ತು ಬಲದಂಡೆಯ ತೂಬಿನ ನಾಲೆಯ ಮೂಲಕ 20ಕ್ಕೂ ಅಧಿಕ ಗ್ರಾಮದ ಸಾವಿರಾರು ರೈತರಿಗೆ ನೀರಾವರಿ ಉಪಯೋಗ ಆಗಲಿದೆ.
ತೀತಾ ಜಲಾಶಯದ ಬಲದಂಡೆಯ ತೂಬು ಮತ್ತು ನಾಲೆಯ ಮೂಲಕ ತೀತಾ, ವೆಂಕಟಾಪುರ, ಗಡ್ಡೋಬನಹಳ್ಳಿ, ಕಂಬದಹಳ್ಳಿ, ಮಾಳೇಹಳ್ಳಿ ಮತ್ತುಎಡದಂಡೆಯ ತೂಬು ಮತ್ತು ನಾಲೆಯ ಮೂಲಕ ಗೊರವನಹಳ್ಳಿ, ಮಾದವಾರ, ತಿಮ್ಮನಹಳ್ಳಿ, ತುಂಬುಗಾನಹಳ್ಳಿ, ಚಿಕ್ಕಾವಳಿ, ರಾಜಯ್ಯನಪಾಳ್ಯ, ಹೊನ್ನಾರನಹಳ್ಳಿ, ಕ್ಯಾಮೇನಹಳ್ಳಿ, ಬಿದಲೋಟಿ, ಹೊಳವನಹಳ್ಳಿ, ಕತ್ತಿನಾಗೇನಹಳ್ಳಿ ಗ್ರಾಮದ ರೈತರಿಗೆ ನೀರಾವರಿಯ ಅನುಕೂಲ ಕಲ್ಪಿಸಲಿದೆ.
ಕೊರಟಗೆರೆ ಕ್ಷೇತ್ರದ ರೈತರ ಜೀವನಾಡಿ ತೀತಾ ಜಲಾಶಯ ತುಂಬಿದ ಸಂತೋಷಕ್ಕೆ ಸ್ಥಳೀಯ ರೈತಾಪಿ ವರ್ಗ ಪಟಾಟಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕರುನಾಡಿನ ಪ್ರವಾಸಿ ತಾಣ ಆಗಿರುವ ಮಹಾಲಕ್ಷ್ಮೀ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳು ತೀತಾ ಜಲಾಶಯಕ್ಕೆ ಬರುತ್ತಿದ್ದಾರೆ. ತೀತಾ ಜಲಾಶಯವು ಕೋಡಿ ಬಿದ್ದ ನೀರು ಚಿಕ್ಕಾವಳಿಯ ಧರ್ಮ ಸಾಗರ ಕೆರೆಗೆ ಹರಿಯುತ್ತಿದ್ದು ರೈತರ ಮುಖದಲ್ಲಿ ಸಡಗರ ಮನೆ ಮಾಡಿದೆ.
ಸ್ಥಳೀಯ ರೈತ ಮುರುಳೀಧರ ಮಾತನಾಡಿ, ರೈತರ ಅನುಕೂಲಕ್ಕಾಗಿ ಜಯಮಂಗಳಿ ನದಿ ಪಾತ್ರಕ್ಕೆ ಅಡ್ಡಲಾಗಿ 1978 ರಲ್ಲಿ ತೀತಾ ಜಲಾಶಯ ನಿರ್ಮಾಣವಾಗಿದೆ, 1991ರಲ್ಲಿ ಕೋಡಿ ಬಿದ್ದಿದ್ದು, ದಶಕಗಳ ನಂತರ ಮೊದಲ ಸಲ ಕೋಡಿ ಬಿದ್ದಿವೆ, ಜಯಮಂಗಳಿ ನದಿ ಪಾತ್ರದ ಸಾವಿರಾರು ರೈತರಿಗೆ ನೀರಿನ ಅನುಕೂಲ ಆಗಲಿದೆ, ಸರಕಾರ ಮತ್ತು ಹೇಮಾವತಿ ಇಲಾಖೆ ನಾಲೆಗಳ ಮೂಲಕ ರೈತರಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!