ಕುಣಿಗಲ್‌ ಪುರಸಭೆ ಅಧಿಕಾರಿಗಳಿಂದ ಜಾಗ ರಕ್ಷಣೆ

ಅಕ್ರಮವಾಗಿ ಕಟ್ಟಿದ್ದ ಮನೆ ತೆರವು

140

Get real time updates directly on you device, subscribe now.

ಕುಣಿಗಲ್‌: ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್‌ ನೇತೃತ್ವದಲ್ಲಿ 20ನೇ ವಾರ್ಡ್ ನಲ್ಲಿದ್ದ ಪುರಸಭೆ ಸ್ವತ್ತನ್ನು ಒತ್ತುವರಿದಾರರ ತೀವ್ರ ವಿರೋಧದ ನಡುವೆ ಗುರುವಾರ ಪೊಲೀಸರ ರಕ್ಷಣೆಯಲ್ಲಿ ಸಿಬ್ಬಂದಿ ತೆರವುಗೊಳಿಸಿ ಪುರಸಭೆ ವಶಕ್ಕೆ ಪಡೆದರು.
ಪುರಸಭೆಯ 20ನೇ ವಾರ್ಡ್ ನ ಬೋವಿ ಕಾಲೋನಿಯಲ್ಲಿ 40*17 ಪುರಸಭೆಗೆ ಸೇರಿದ ನಿವೇಶನ ಇದೆ, ಸದರಿ ನಿವೇಶನವನ್ನು ಅಂಗನವಾಡಿ ಕಟ್ಟಡಕ್ಕೆಂದು ಮೀಸಲಿಡಲಾಗಿದೆ, ಆದರೆ ಕಳೆದ ಕೆಲ ದಿನಗಳಿಂದ ಸದರಿ ಜಾಗಕ್ಕೆ ಹೊಂದಿಕೊಂಡಿರುವ ನಿವೇಶನದ ಮಾಲೀಕ ಗೋವಿಂದ ಎಂಬುವವರು ಈ ನಿವೇಶನ ತಮಗೆ ಸೇರಿದ್ದು, ತಮಗೆ ಖಾತೆ ಮಾಡಿಕೊಡಬೇಕೆಂದು, ಹಲವು ವರ್ಷಗಳಿಂದಲೂ ತಾವು ಪುರಸಭೆಗೆ ಅರ್ಜಿ ನೀಡಿದ್ದು, ಸ್ಪಂದಿಸದ ಕಾರಣ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು.
ಪುರಸಭೆ ನಿವೇಶನದಲ್ಲಿ ಮನೆ ಕಟ್ಟದಂತೆ ಕಂದಾಯಾಧಿಕಾರಿ ಜಗರೆಡ್ಡಿ ನೋಟೀಸ್‌ ನೀಡಿದ್ದರೂ ಲೆಕ್ಕಿಸದೆ ಮನೆ ನಿರ್ಮಾಣ ಕಾರ್ಯ ಮುಂದುವರೆಸಿದ್ದರು. ಈ ಮಧ್ಯೆ ಕೆಲ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಪುರಸಭೆ ಸ್ವತ್ತನ ರಕ್ಷಣೆ ಮಾಡುವಂತೆ ಒತ್ತಾಯಿಸಿ ಮನವಿ ನೀಡಿದ್ದು, ಪುರಸಭೆ ಸ್ವತ್ತು ರಕ್ಷಣೆ ಮಾಡದೆ ಇದ್ದಲ್ಲಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಗುರುವಾರ ಪರಿಸರ ಅಭಿಯಂತರ ಚಂದ್ರಶೇಖರ್‌, ಕಂದಾಯಾಧಿಕಾರಿ ಜಗರೆಡ್ಡಿ ತೆರವು ಕಾರ್ಯಾಚರಣೆಗೆ ಆಗಮಿಸಿದಾಗ ಮನೆ ನಿರ್ಮಿಸುತ್ತಿದ್ದವರ ಕುಟುಂಬದವರಿಗೂ ಪುರಸಭೆ ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಕಾವೇರಿದ ವಾತಾವರಣ ನಿರ್ಮಾಣವಾಗಿ ಮಹಿಳೆಯರು ತೆರವು ಮಾಡದಂತೆ ಮನೆಗೆ ಅಡ್ಡಲಾಗಿ ಕುಳಿತುಕೊಂಡರು.
ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್‌, ಅಭಿಯಂತರ ಬಿಂದುಸಾರ ಪೊಲೀಸರ ರಕ್ಷಣೆಕೋರಿದ್ದು, ಮೊದಲಿಗೆ ಮಹಿಳಾ ಪೊಲೀಸರಿಲ್ಲದೆ ಪುರುಷ ಪೊಲೀಸರು ಆಗಮಿಸಿದ ಕಾರಣ ತೆರವು ಕಾರ್ಯಾಚರಣೆ ಅರ್ಧಗಂಟೆ ವಿಳಂಬವಾಯಿತು, ಸ್ಥಳಕ್ಕೆ ಆಗಮಿಸಿ 20ನೇ ವಾರ್ಡ್‌ ಸದಸ್ಯ ಆನಂದಕುಮಾರ್‌, ಸಮಯಾವಕಾಶ ನೀಡುವಂತೆ ಕೋರಿದರು. ಮುಖ್ಯಾಧಿಕಾರಿ ಈಗಾಗಲೆ ಕಾಲಾವಕಾಶ ನೀಡಿದ್ದು, ದಾಖಲೆ ಪರಿಶೀಲಿಸಿ ಇದು ಪುರಸಭೆ ಸ್ವತ್ತುಎಂದು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ, ದಯಮಾಡಿ ಸಹಕರಿಸಿ ಎಂದ ಮೇರೆಗೆ ಸದಸ್ಯರು ಮರು ಮಾತಾಡದೆ ತೆರಳಿದರು. ತಡವಾಗಿ ಆಗಮಿಸಿದ ಮಹಿಳಾ ಪೊಲೀಸರು ತೆರವು ಕಾರ್ಯಾಚರಣೆಗೆ ಅಡ್ಡ ಪಡಿಸಿದ್ದ ಮಹಿಳೆಯರ ಖಾಲಿ ಮಾಡಿಸಿದರೆ, ಮನೆ ನಿರ್ಮಿಸುತ್ತಿದ್ದ ಗೋಂವಿಂದ್‌ ಅಡ್ಡಲಾಗಿ ಮಲುಗಿ ತೀವ್ರ ಪ್ರತಿರೋಧ ತೋರಿದರು, ಪೊಲೀಸರು ಅವರನ್ನು ಎತ್ತಿ ಹೊರ ಹಾಕಿದ ಕೂಡಲೆ ಪುರಸಭೆ ಸಿಬ್ಬಂದಿ ಅಕ್ರಮವಾಗಿ ಕಟ್ಟಲಾಗಿದ್ದ ಮನೆ ತೆರವುಗೊಳಿಸಿ, ಪುರಸಭೆ ಸ್ವತ್ತು ರಕ್ಷಿಸಿದರು.
ಮುಖ್ಯಾಧಿಕಾರಿ ರವಿಕುಮಾರ್‌ ಮಾತನಾಡಿ, ಮುಂದಿನ ತಿಂಗಳು 15 ರಿಂದ ಪುರಸಭೆ ಜಾಗಗಳ ಒತ್ತುವರಿ ತೆರವು ಸೇರಿದಂತೆ ಪುರಸಭೆ ಸ್ವತ್ತಿನ ರಕ್ಷಣೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದರು.

Get real time updates directly on you device, subscribe now.

Comments are closed.

error: Content is protected !!