ಪೂರ್ಣಿಮಾ ಕಾಡುಗೊಲ್ಲರನ್ನು ಮುಗಿಸಲು ಹೊರಟಿದ್ದಾರೆ

175

Get real time updates directly on you device, subscribe now.

ತುಮಕೂರು: ಹಿರಿಯೂರು ಶಾಸಕಿ ಪೂರ್ಣೀಮ ಶ್ರೀನಿವಾಸ್‌ ಅವರು ಕಾಡುಗೊಲ್ಲರ ಅಭಿವೃದ್ದಿ ನಿಗಮವನ್ನು, ಗೊಲ್ಲ- ಕಾಡುಗೊಲ್ಲ ಅಭಿವೃದ್ಧಿ ನಿಗಮವೆಂದು ಬದಲಾಯಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಕಾಡುಗೊಲ್ಲರನ್ನು ಮುಗಿಸಲು ಹೊರಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಕೆ.ನಾಗಣ್ಣ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಬುಡಕಟ್ಟು ಸಂಸ್ಕೃತಿ ಹೊಂದಿರುವ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನ ನಡೆದಿದ್ದು, ಇಂದಿಲ್ಲ ನಾಳೆ ಕಾಡುಗೊಲ್ಲ ಸಮುದಾಯ ಎಸ್.ಟಿ ಜಾತಿ ಪಟ್ಟಿಗೆ ಸೇರಲಿದೆ, ಆದರೆ ಕಾಡುಗೊಲ್ಲರ ಹೆಸರಿನಲ್ಲಿ ಗೊಲ್ಲ ಸಮುದಾಯಕ್ಕೆ ಸೇರಿದ ಪೂರ್ಣೀಮ ಅವರು ಶಾಸಕಿಯಾಗಿ ಆಯ್ಕೆಯಾಗಿರುವುದಲ್ಲದೆ, ಪದೇ ಪದೆ ಸರಕಾರಕ್ಕೆ ನಿಗಮ ಹೆಸರಿನಲ್ಲಿ ಹಸ್ತಕ್ಷೇಪ ನಡೆಸುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಕಾಡುಗೊಲ್ಲರು ಎಂದಿಗೂ ನಮಗೆ ನಿಗಮ ಬೇಕು ಎಂದು ಕೇಳಿದವರಲ್ಲ, 2010ರಲ್ಲಿ ಅಂದಿನ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಡಾ.ಸಿ.ಎಸ್‌.ದ್ವಾರಕಾನಾಥ್‌ ಅವರು ಅಧ್ಯಯನ ನಡೆಸಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ, 100 ರೂಗಳ ಅನುದಾನ ಮೀಸಲಿಡುವಂತೆ ಸರಕಾರಕ್ಕೆ ವರದಿ ಸಲ್ಲಿಸಿದ್ದರು, 2020ರಲ್ಲಿ ಶಿರಾ ಉಪ ಚುನಾವಣೆ ಗೆಲ್ಲುವ ಸಲುವಾಗಿ ಕಾಡುಗೊಲ್ಲರ ಮತ ಪಡೆಯಲು ಅಂದಿನ ಸರಕಾರ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೊಂಚ ಹಣ ನೀಡಿರುವುದು ಸರಿಯಷ್ಟೇ ಎಂದರು.
ಸರಕಾರದ ಆದೇಶ ಆದ ಒಂದೇ ದಿನದಲ್ಲಿ ಶಾಸಕಿ ಪೂರ್ಣೀಮ ಅವರು, ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಬದಲಾಗಿ, ಸಮಸ್ತ ಗೊಲ್ಲರ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಾಯಿಸಿದ್ದರು, ಆ ನಂತರ ಕಾಡುಗೊಲ್ಲರ ಹೋರಾಟಕ್ಕೆ ಮಣಿದು, ಕಾಡುಗೊಲ್ಲರ ಅಭಿವೃದ್ಧಿ ನಿಗಮ ಎಂದು ಮರು ನಾಮಕರಣ ಮಾಡಿ, ಅಧಿಕಾರಿಯನ್ನು ನೇಮಕ ಮಾಡಿದ್ದರು, ಆದರೆ 07-07-2021 ರಂದು ಮತ್ತೆ ಪತ್ರ ಬರೆದು ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಬದಲಾಗಿ, ಗೊಲ್ಲ- ಕಾಡುಗೊಲ್ಲ ಅಭಿವೃದ್ಧಿ ನಿಗಮವೆಂದು ಬದಲಾಯಿಸಲು ಒತ್ತಾಯಿಸಿದ್ದಾರೆ, ಇದು ಎಲ್ಲಾ ವಿಚಾರದಲ್ಲಿಯೂ ಯಾದವರಿಗಿಂತ ಭಿನ್ನವಾಗಿರುವ ಕಾಡುಗೊಲ್ಲರನ್ನು ತುಳಿಯುವ ಪ್ರಯತ್ನವಾಗಿದೆ, ಸರಕಾರ ಇವರ ಪತ್ರಕ್ಕೆ ಮನ್ನಣೆ ನೀಡಬಾರದು ಎಂದು ಜಿ.ಕೆ.ನಾಗಣ್ಣ ಸರಕಾರವನ್ನು ಒತ್ತಾಯಿಸಿದರು.
ಕಾಡುಗೊಲ್ಲ ಸಮುದಾಯ ರಾಜ್ಯದಲ್ಲಿ ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿದೆ, ಸರಕಾರ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ ನಮ್ಮ ಅಭ್ಯಂತರವಿಲ್ಲ, ಆದರೆ ಆಚಾರ, ವಿಚಾರದಲ್ಲಿ, ಕೊಡು, ತರುವುದು ಇಲ್ಲದ ಗೊಲ್ಲ- ಕಾಡುಗೊಲ್ಲ ಒಂದೇ ಎಂದು ಪ್ರತಿಪಾದಿಸಲು ಹೊರಟಿರುವುದು ಸರಿಯಲ್ಲ, ಇದನ್ನು ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿ ಹಾಗೂ ಕಾಡುಗೊಲ್ಲರ ಯುವ ಸೇನೆ ಖಂಡಿಸುತ್ತಿದೆ, ಈ ಸಂಬಂಧ ನವೆಂಬರ್‌ 27 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು, ಅಲ್ಲದೆ ಸರಕಾರದ ಗಮನ ಸೆಳೆಯಲು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಜಿ.ಕೆ.ನಾಗಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಡುಗೊಲ್ಲರ ಯುವಸೇನೆ ಅಧ್ಯಕ್ಷ ರಮೇಶ್‌, ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಗೋವಿಂದರಾಜು, ಸುನೀಲ್‌ ಕುಮಾರ್‌, ಶಶಿಕುಮಾರ್‌ ಇದ್ದರು.

Get real time updates directly on you device, subscribe now.

Comments are closed.

error: Content is protected !!