ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಿ: ರಾಕೇಶ್‌ ಸಿಂಗ್

142

Get real time updates directly on you device, subscribe now.

ತುಮಕೂರು: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ- 2022ಕ್ಕೆ ಸಂಬಂಧಿಸಿದಂತೆ ಈಗಾಗಲೇ ನವೆಂಬರ್‌ 8 ರಂದು ಪ್ರಚುರಪಡಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಅನರ್ಹರು ಸೇರ್ಪಡೆಯಾಗಿದ್ದರೆ ಅಂತಹವರನ್ನು ಪಟ್ಟಿಯಿಂದ ನಿಯಮಾನುಸಾರ ಕೈಬಿಟ್ಟು ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಬೇಕೆಂದು ಮತದಾರರ ಪಟ್ಟಿಯ ವೀಕ್ಷಕ ರಾಕೇಶ್‌ ಸಿಂಗ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಮತದಾರರ ಪಟ್ಟಿಯನ್ನು ಮತಗಟ್ಟೆವಾರು ಪರಿಶೀಲಿಸಿ 70- 80 ವರ್ಷಕ್ಕಿಂತ ಮೇಲ್ಪಟ್ಟ, ಮರಣ ಹೊಂದಿರುವ, ಖಾಯಂ ಸ್ಥಳಾಂತರಗೊಂಡ, ಎರಡು ಅಥವಾ ಹೆಚ್ಚಿನ ಭಾಗ, ವಿಧಾನ ಸಭಾ ಕ್ಷೇತ್ರಗಳಲ್ಲಿ ನೋಂದಣಿಯಾಗಿರುವ ಮತದಾರರನ್ನು ನಿಯಮಾನುಸಾರ ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಬಿ.ಎಲ್.ಓ ಗಳೊಂದಿಗೆ ತಮ್ಮ ಮತಗಟ್ಟೆ ಮಟ್ಟದ ಏಜೆಂಟ್‌, ಪ್ರತಿನಿಧಿಗಳ ಮೂಲಕ ಸಂಬಂಧಿಸಿದ ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಮತದಾರರು ಜೀವಂತವಿರುವ, ವಾಸವಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಮತದಾರರು ಮೃತಪಟ್ಟಿದ್ದಲ್ಲಿ, ಖಾಯಂ ಸ್ಥಳಾಂತರಗೊಂಡಿದ್ದಲ್ಲಿ ಅವರ ಸಂಬಂಧಿಕರಿಂದ ನಮೂನೆ-7ನ್ನು ಪಡೆದು ನಿಯಮಾನುಸಾರ ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು ಎಂದರಲ್ಲದೆ, ಜಿಲ್ಲೆಯ ಇಪಿ ರೇಷಿಯೋ ಮತ್ತು ಜೆಂಡರ್‌ ರೇಷಿಯೋ ಕಡಿಮೆ ಮಾಡುವಲ್ಲಿ ರಾಜಕೀಯ ಪಕ್ಷಗಳು ತಮ್ಮ ಬಿಎಲ್‌ಒಗಳ ಮೂಲಕ ಸಹಕರಿಸಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಮಾತನಾಡಿ ನವೆಂಬರ್‌ 8 ರಂದು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯನುಸಾರ 1115260 ಪುರುಷ, 1112523 ಮಹಿಳೆ ಹಾಗೂ 112 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 2227895 ಮತದಾರರಿದ್ದು, ಈ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಡಿಸೆಂಬರ್‌ 8ರ ವರೆಗೆ ಸ್ವೀಕರಿಸಲಾಗುವುದು. ಸ್ವೀಕೃತ ಅರ್ಜಿಗಳನ್ನು ಡಿಸೆಂಬರ್‌ 27ರೊಳಗಾಗಿ ವಿಲೇವಾರಿ ಮಾಡಿ, 2022ರ ಜನವರಿ 13 ರಂದು ಅಂತಿಮ ಮತದಾರರ ಪಟ್ಟಿ ಪ್ರಚುರಪಡಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವತ್ರಿಕ ರಜಾ ದಿನಗಳಾದ ನವೆಂಬರ್ 7, 14, 21 ರಂದು ನಡೆಸಲಾದ ವಿಶೇಷ ಆಂದೋಲನ ಕಾರ್ಯಕ್ರಮದಲ್ಲಿ ನಮೂನೆ- 6ರಲ್ಲಿ 11446, ನಮೂನೆ 7 ರಲ್ಲಿ 7477, ನಮೂನೆ 8 ರಲ್ಲಿ 1551, ನಮೂನೆ 8ಎ ರಲ್ಲಿ 264 ಅರ್ಜಿ ಸೇರಿದಂತೆ ಒಟ್ಟು 20738 ಅರ್ಜಿಗಳು ಸ್ವೀಕೃತವಾಗಿವೆ. ಬರುವ ನವೆಂಬರ್‌ 28ರಂದು ಸಹ ವಿಶೇಷ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಸಂಬಂಧಿಸಿದ ಮತಗಟ್ಟೆಗಳಲ್ಲಿ ಹಾಜರಿದ್ದು, ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಜಿ.ಎಸ್‌. ಬಸವರಾಜು, ಸಿಪಿಐ ಪಕ್ಷದ ಪ್ರತಿನಿಧಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್ ಕುಮಾರ್‌ ಶಹಪೂರವಾಡ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಅಜಯ್‌, ಸೋಮಪ್ಪಕಡಕೊಳ, ಎಲ್ಲಾ ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!