ತುಮಕೂರು: ಜಿಲ್ಲೆಯಾದ್ಯಂತ ಅತೀವೃಷ್ಟಿಯ ಕಾರಣದಿಂದಾಗಿ ಸಂಭವಿಸಿರುವ ಬೆಳೆ- ಮನೆ ಹಾನಿ ವಿವರಗಳನ್ನು 7 ದಿನಗಳ ಒಳಗಾಗಿ ಪರಿಹಾರ ಆನ್‌ಲೈನ್ ಪೋರ್ಟಲ್ ನಲ್ಲಿ ದಾಖಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಳೆ ಹಾನಿ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರಿ ಪ್ರಮಾಣದ ಮಳೆಯಿಂದ ಉಂಟಾಗಿರುವ ಹಾನಿ ವಿವರಗಳನ್ನು ಪರಿಹಾರ ಪೋರ್ಟಲ್‌ನಲ್ಲಿ ಸಮರ್ಪಕವಾಗಿ ದಾಖಲಿಸಬೇಕು. ವಿವರಗಳನ್ನು ದಾಖಲಿಸುವಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಸಹಕರಿಸಬೇಕು ಎಂದು ಸೂಚಿಸಿದರು.
ಸತತ ಮಳೆಯಿಂದ ಜಿಲ್ಲೆಯಲ್ಲಿ ಸಂಭವಿಸಿರುವ ಬೆಳೆ ಹಾನಿ ಹಾಗೂ ಪರಿಹಾರ ಕುರಿತು ಸಭೆಗೆ ಮಾಹಿತಿ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಕಳೆದ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ನವೆಂಬರ್ 21ರ ವರೆಗೆ ಶೇಕಡಾ 1700 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ 7 ಮಿ.ಮೀ. ಆಗಬೇಕಿದ್ದ ಮಳೆ ಪ್ರಮಾಣ ಕಳೆದ 7 ದಿನಗಳಲ್ಲಿ 131 ಮಿ.ಮೀ. ಮಳೆಯಾಗಿದೆ, ಇದರಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ, ಮನೆ ಹಾನಿ ಸೇರಿದಂತೆ ರಸ್ತೆ, ಕೆರೆ, ಶಾಲಾ ಕಟ್ಟಡಗಳು ಹಾನಿಗೊಳಗಾಗಿವೆ ಎಂದರಲ್ಲದೆ, ಒಟ್ಟು 1,59,000 ರೈತರ ಬೆಳೆಗಳು ಹಾನಿಯಾಗಿದ್ದು, ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 6800 ರೂ. ಗಳ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಮಳೆಯಿಂದ 622 ಮನೆಗಳು ಹಾನಿಗೊಳಗಾಗಿದ್ದು, ಶೇ.15 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ಲಭ್ಯವಿರುವುದಿಲ್ಲ. ಉಳಿದಂತೆ ಶೇ.15 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲಾಗುವುದು. ಹಾನಿಗೊಳಗಾಗಿರುವ ಮನೆಗಳ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಮಹಜರು ವರದಿ ಸಿದ್ಧಪಡಿಸಬೇಕು. ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಮನೆಯು ಎಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿದೆ ಎಂಬುದರ ಕುರಿತ ನಿಖರ ವರದಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಿದ ನಂತರವಷ್ಟೇ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಸುಳ್ಳು ವರದಿ ನೀಡಿ ಪರಿಹಾರ ಅಪೇಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಹೆಚ್ಚು ನಿಗಾವಹಿಸಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಮಳೆಯಿಂದ ದುರಸ್ಥಿಗೆ ಬಂದಿರುವ ಹಾಗೂ ಸಂಪೂರ್ಣ ಹಾಳಾಗಿರುವ ಶಾಲಾ ಕಟ್ಟಡಗಳ ನಿಖರ ಅಂಕಿ- ಅಂಶಗಳನ್ನು ಶೀಘ್ರವಾಗಿ ನೀಡಬೇಕು ಎಂದು ತುಮಕೂರು ಹಾಗೂ ಮಧುಗಿರಿ ಡಿಡಿಪಿಐಗಳಿಗೆ ಸೂಚಿಸಿದರು.
ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 3.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅಕಾಲಿಕ ಮಳೆಯಿಂದ 126000 ಹೆಕ್ಟೇರ್ ಕೃಷಿ ಬೆಳೆ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ 1,53,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದ್ದು, ಮಳೆಯಿಂದ ರಾಗಿ ತೆನೆ ಮೊಳಕೆಯೊಡೆದು ಈವರೆಗೆ ಸುಮಾರು 1,17,000 ಹೆ.ಪ್ರದೇಶದ ರಾಗಿ ಬೆಳೆ ಹಾನಿಗೊಳಗಾಗಿದೆ. ಹಾನಿಗೊಳಗಾಗಿರುವ ರಾಗಿ ಪೈರು ಜಾನುವಾರುಗಳ ಮೇವಿಗೂ ಬಳಸಲು ಯೋಗ್ಯವಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿಗಳಾದ ಅಜಯ್ ಹಾಗೂ ಸೋಮಪ್ಪಕಡಕೊಳ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ರಘು ಸೇರಿದಂತೆ ಎಲ್ಲಾ ತಹಸೀಲ್ದಾರ್ ಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಏಳು ದಿನದಲ್ಲಿ ಬೆಳೆ ಹಾನಿ ವಿವರ ದಾಖಲಿಸಿ
Get real time updates directly on you device, subscribe now.
Next Post
Comments are closed.