ಕೊರಟಗೆರೆ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ರಾಜಕೀಯ ವ್ಯವಸ್ಥೆಯೇ ಹಾಳಾಗಿದೆ, ಪ್ರಸ್ತುತ ಭಾರತ ದೇಶದ ರಾಜಕೀಯ ವ್ಯವಸ್ಥೆಯೇ ಬದಲಾಗಿದೆ. ದೆಹಲಿ ಮಟ್ಟದ ದೊಡ್ಡ ನಾಯಕರು ಸರಿಪಡಿಸುವ ತೀರ್ಮಾನ ಮಾಡಬೇಕು, ನಾನು ಯಾರ ಬಗ್ಗೆಯು ವೈಯಕ್ತಿಕವಾಗಿ ಮಾತನಾಡಲು ಇಷ್ಟ ಪಡೋದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತುಮಕೂರು ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಜನತಾ ಸಂಗಮ ಸಮಾವೇಶ ಉದ್ಘಾಟಿಸಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಯುವಜನತೆ ನನ್ನ ಕೈಬಿಟ್ಟಿದ್ದಾರೆ, ಅವರೇ ನನ್ನ ಎತ್ತಿಕೊಂಡು ಬರ್ತಾರೆ, ನಮ್ಮನ್ನು ತೆಗಿಯಬೇಕು ಎನ್ನುವ ಕೆಲವರ ಅಭಿಪ್ರಾಯ ಸುಳ್ಳಾಗಲಿದೆ, ತುಮಕೂರು ವಿಧಾನ ಪರಿಷತ್ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಗೆಲ್ತಾರೆ, ಜನಸೇವೆ ಮಾಡುವ ಉದ್ದೇಶದಿಂದ ಸರಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ ಬಂದಿದ್ದಾರೆ, ತುಮಕೂರು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಅನಿಲ್ ಪರವಾಗಿ ಮತ ನೀಡಿ ಅಂತಾ ಕೇಳ್ತೀನಿ ಎಂದು ತಿಳಿಸಿದರು.
ಕೊರಟಗೆರೆ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಸಿಎಂ ಕುಮಾರಣ್ಣ ನಮ್ಮ ನಾಯಕರು, ಇವರೇ ನನ್ನ ರಾಜಕೀಯ ಶಕ್ತಿ, ತಾಕೀತು ಮಾಡುವ ಯಾವ ನಾಯಕರ ಮುಲಾಜಿನಲ್ಲಿ ನಾನಿಲ್ಲ, ಗ್ರಾಪಂಗಳಿಗೆ ಮೀಸಲಾತಿ ನೀಡಿದ ಕೀರ್ತಿ ನಮ್ಮ ಮಾಜಿ ಪ್ರಧಾನಿಗೆ ಸಲ್ಲಬೇಕು, ತುಮಕೂರಿನ ಎಂಎಲ್‌ಸಿ ಚುನಾವಣೆಯ ಫಲಿತಾಂಶ ಮುಂದಿನ ತಾಪಂ, ಜಿಪಂ ಮತ್ತು ವಿಧಾನಸಭೆಗೆ ದಿಕ್ಸೂಚಿ ಆಗಲಿದೆ ಎಂದು ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಮಾತನಾಡಿ ಕೊರಟಗೆರೆ ಕ್ಷೇತ್ರ ಚೆನ್ನಿಗಪ್ಪ ಕುಟುಂಬದ ರಾಜಕೀಯ ಜನ್ಮ ಭೂಮಿ, ದೇವೇಗೌಡರ ಸೋಲನ್ನು ಮರೆಸಲು ಎಂಎಲ್‌ಸಿ ಅಭ್ಯರ್ಥಿಗಳನ್ನು ನಾವು ಗೆಲ್ಲಿಸಬೇಕಿದೆ, ಕಾಂಗ್ರೆಸ್ ಅಭ್ಯರ್ಥಿ ರಾಮರಾಜ್ ಚೆಡ್ಡಿ, ಸೀರೆ, ಗಡಿಯಾರ ಕೊಡ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಬಿಜೆಪಿಯ ಇಬ್ಬರು ಸಚಿವರಿದ್ರು ಹೊರಗಿನ ಅಭ್ಯರ್ಥಿಯನ್ನು ಕರೆದುಕೊಂಡು ಬಂದಿದ್ದಾರೆ. ತುಮಕೂರಿನಲ್ಲಿ ಹುಟ್ಟಿದ ಗಂಡಸು ಇವರಿಗೆ ಸಿಗಲಿಲ್ವಾ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ಎಂಎಲ್‌ಸಿ ತಿಪ್ಪೇಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜೀನಪ್ಪ, ಕಾರ್ಯದರ್ಶಿ ಮಹಾಲಿಂಗಪ್ಪ, ಗೌರವಧ್ಯಕ್ಷ ನರಸಿಂಹರಾಜು, ಯುವಾಧ್ಯಕ್ಷ ವೆಂಕಟೇಶ್, ಕಾರ್ಯದಶಿ ಲಕ್ಷ್ಮಣ್, ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಪಪಂ ಅಧ್ಯಕ್ಷ ಮಂಜುಳ, ಉಪಾಧ್ಯಕ್ಷ ಭಾರತಿ ಸಿದ್ದಮಲ್ಲಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕರವೇ ನಟರಾಜು, ರಮೇಶ್ ಇತರರು ಇದ್ದರು.
ಭಾರತ ದೇಶದ ಬಹುದೊಡ್ಡ ರೈತ ನಾಯಕ ನಮ್ಮ ಹೆಮ್ಮೆಯ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಜೆಡಿಎಸ್ ನಿಂದ ನನ್ನ ರಾಜಕೀಯ ಜೀವನ ಪ್ರಾರಂಭ ಜೆಡಿಎಸ್ ಇಂದಲೇ ನನ್ನ ರಾಜಕೀಯ ನಿವೃತ್ತಿ ಆಗಲಿದೆ, ಬಡಜನರ ಸೇವೆಗಾಗಿ ಸರಕಾರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಬಂದಿದ್ದೇನೆ, ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
-ಅನಿಲ್‌ಕುಮಾರ್, ಎಂಎಲ್‌ಸಿ ಅಭ್ಯರ್ಥಿ, ಕೊರಟಗೆರೆ.
ಕರ್ನಾಟಕದ ಮಣ್ಣು ಮತ್ತು ರೈತರ ಧ್ವನಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಸನದಲ್ಲಿ ಸೋತಾಗ ಮಾಜಿ ಪ್ರಧಾನಿ ಆ ಕಡೆ ಹೋಗಲಿಲ್ಲ, ಆದರೆ ತುಮಕೂರಿನಲ್ಲಿ ಸೋತ ನಂತರವು ಬಂದಿದ್ದಾರೆ, ತುಮಕೂರಿನ ಜನರ ಪ್ರೀತಿಗೆ ವಿಶ್ವಾಸಕ್ಕೆ ಅವರು ಈಗ ಮತ್ತೆ ಬಂದಿದ್ದಾರೆ, ತುಮಕೂರಿನ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲುವು ರಾಜ್ಯಕ್ಕೆ ಸಂದೇಶ ನೀಡಲಿದೆ.
-ವೈ.ಎಸ್.ವಿ.ದತ್ತಾ, ಮಾಜಿ ಶಾಸಕ, ಕಡೂರು ಕ್ಷೇತ್ರ.
Comments are closed.