ಕೆರೆ ತುಂಬಿದ ಶ್ರೇಯಸ್ಸಿನ ಲಾಭ ಪಡೆಯಲು ನಾಯಕರ ಪೈಪೋಟಿ

ರಾಜಕೀಯದ ಕೇಂದ್ರವಾಗಿದ್ದ ಮದಲೂರು ಕೆರೆ ಕೋಡಿ

5,892

Get real time updates directly on you device, subscribe now.

– ವಿಜಯಕುಮಾರ್‌ ತಾಡಿ.

ಶಿರಾ: ತಾಲ್ಲೂಕಿನ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದ ಮದಲೂರು ಕೆರೆ ಶುಕ್ರವಾರ ಬೆಳಗ್ಗೆ ಕೋಡಿ ಹರಿಯಲು ಆರಂಭಿಸಿದ್ದು, ಕೆರೆ ತುಂಬಿದ ಶ್ರೇಯಸ್ಸಿನ ಲಾಭ ಪಡೆಯಲು ವಿವಿಧ ಪಕ್ಷಗಳಲ್ಲಿ ಪೈಪೋಟಿ ಕಂಡು ಬಂದಿದೆ.

ಹಿನ್ನೆಲೆ: ಒಂದು ಕಾಲದಲ್ಲಿ ಹೇಮಾವತಿ ನೀರು ಶಿರಾಕ್ಕೆ ಹರಿಯಲಿದೆ ಎನ್ನುವ ಮಾತೇ ಹಾಸ್ಯಾಸ್ಪದವಾಗಿ ಕಂಡು ಬಂದಿತ್ತು. ನಂತರ ಹೇಮಾವತಿ ಶಿರಾ ಕೆರೆ ಒಡಲನ್ನು ತುಂಬಿ ಹತ್ತಾರು ವರ್ಷಗಳಿಂದ ಶಿರಾ ಜನರು ನೀರನ್ನು ಕುಡಿಯುತ್ತಿದ್ದಾರೆ. ಅದೇ ಮಾದರಿಯಲ್ಲಿ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಯುತ್ತದೆ ಎಂದು ಮಾಜಿ ಸಚಿವ ಜಯಚಂದ್ರ ಕನಸು ಕಂಡಾಗ ಇದು ಸಾಧ್ಯವೇ ಎಂದು ಹುಬ್ಬೇರಿಸಿದವರೇ ಹೆಚ್ಚು.
2012ರ ಜನವರಿಯಲ್ಲಿ ಅಂದಿನ ಶಾಸಕ ಜಯಚಂದ್ರ ಅವರ ಇಚ್ಛಾಶಕ್ತಿಯಿಂದ ಮದಲೂರು ಕೆರೆ ಮತ್ತು ಮಾರ್ಗದ ಹನ್ನೊಂದು ಕೆರೆಗಳಿಗೆ ನೀರು ಹರಿಸುವ ಕಾಲುವೆ ನಿರ್ಮಾಣ ಕಾಮಗಾರಿ ಅಧಿಕೃತವಾಗಿ ಆರಂಭಗೊಂಡಾಗ ಮೊದಲು ಪುಳಕಗೊಂಡಿದ್ದು ಕಾಲುವೆ ಮಾರ್ಗದ ರೈತರು. ಸರ್ಕಾರದಿಂದ ವಶಪಡಿಸಿಕೊಳ್ಳುವ ಭೂಮಿಗೆ ದರ ನಿಗದಿಯಾಗುವ ಮುನ್ನವೇ ಉತ್ಸಾಹದಿಂದ ತಮ್ಮ ಜಮೀನನ್ನು ಬಿಟ್ಟುಕೊಡಲು ಮುಂದೆ ಬಂದಿದ್ದು, ರಾಜಕೀಯ ಲಾಭದ ನಿರೀಕ್ಷೆಯಲ್ಲಿದ್ದ ಹಲವರಿಗೆ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಅಷ್ಟರಲ್ಲೇ ಕಾಲುವೆ ರಾಜಕೀಯ ಆರಂಭಗೊಂಡು, ಕೆಲ ಜಾಗಗಳಲ್ಲಿ ಕಾಲುವೆ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಡಲು ತಕರಾರು ಉಂಟಾದ ಕಾರಣ ಕಾಮಗಾರಿ ವೇಗ ಕುಂಠಿತಗೊಂಡಿತು.
ಇದೇ ವೇಳೆ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕಾಲುವೆ ಮಾರ್ಗದ ಮೊದಲ ಮೂರ್ನಾಲ್ಕು ಕೆರೆಗಳಿಗೆ ನೀರು ಹರಿಸಿದ್ದಾಗಿತ್ತು, ಸ್ವಾಧೀನಗೊಂಡ ಭೂಮಿಗೆ ಒಂದಕ್ಕೆ ನಾಲ್ಕುಪಟ್ಟು ಹೆಚ್ಚಿನ ಪರಿಹಾರ ನಿಗದಿಪಡಿಸಿದ್ದನ್ನೂ ಸೇರಿ ಒಟ್ಟಾರೆ 60 ಕೋಟಿ ವೆಚ್ಚದ ಕಾಲುವೆ ಕಾಮಗಾರಿ ಎಲ್ಲಾ ಅಡೆತಡೆಗಳನ್ನು ದಾಟಿ 2017ರ ವರ್ಷ ಮಧ್ಯದ ವೇಳೆಗೆ ಪೂರ್ಣಗೊಂಡಿತು. ಅದಕ್ಕೆ ಸಾಕ್ಷಿ ಎನ್ನುವಂತೆ ಅಕ್ಟೋಬರ್‌ ತಿಂಗಳಿನಲ್ಲಿ ಸುಮಾರು 15 ದಿನಗಳ ಕಾಲ ನೀರನ್ನು ಹರಿಸಿ ಪರಿಶೀಲನೆ ನಡೆಸಲಾಯಿತು.
2018ರಲ್ಲಿ ಚುನಾವಣೆ ಎದುರಾದ ಸಂದರ್ಭದಲ್ಲಿ ಶಿರಾ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಿ, ಜಯಚಂದ್ರ ಸೋಲನ್ನಪ್ಪಬೇಕಾಯಿತು. ನಂತರ ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾದ ಕ್ಷೇತ್ರಕ್ಕೆ 2020ರಲ್ಲಿ ಉಪ ಚುನಾವಣೆ ನಡೆಸುವ ಅನಿವಾರ್ಯತೆ ಉಂಟಾಯಿತು. ಈ ಸಂದರ್ಭದಲ್ಲಿ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಹಿಂದೆಂದಿಗಿಂತಲೂ ರಾಜಕೀಯ ವಸ್ತುವಾಗಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಿತು. ಗ್ರಾಮ ವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಮದಲೂರು ಕೆರೆ ಕಾಲುವೆ ನಿರ್ಮಾಣಕ್ಕೆ ಪ್ರಮುಖ ಕಾರಣ ಎಂದು ಜೆಡಿಎಸ್‌ ವಾದಿಸಿದರೆ, ಕಾಂಗ್ರೆಸ್‌ ಇದು ತಮ್ಮದೇ ಯೋಜನೆ ಎಂದು ಪ್ರತಿಬಿಂಬಿಸಿತು, ಸ್ಥಳೀಯ ಶಾಸಕರು ಕಾಂಗ್ರೆಸ್ಸಿನವರೇ ಆಗಿದ್ದರೂ ಯೋಜನೆಗೆ ಅನುಮತಿ, ಅನುದಾನ ನೀಡಿದ್ದು ನಮ್ಮ ಸರ್ಕಾರ ಎಂದು ಬಿಜೆಪಿ ಬೀಗಿತು.
ಇದರ ಜೊತೆಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ವತಃ ಮದಲೂರು ಕೆರೆ ಅಂಗಳದಲ್ಲಿ ಚುನಾವಣಾ ಭಾಷಣ ಮಾಡಿ, ಆರು ತಿಂಗಳಲ್ಲಿ ಮದಲೂರು ಕೆರೆ ತುಂಬಿಸಿ ಪೂಜೆ ಸಲ್ಲಿಸುವ ಭರವಸೆ ನೀಡಿದ್ದರು, ಇದರೊಟ್ಟಿಗೆ ಕ್ಷೇತ್ರದ ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾದ ಬಿಜೆಪಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನು ಶಾಸಕನನ್ನಾಗಿಸುವಲ್ಲಿ ಯಶಸ್ವಿಯಾಯಿತು.
ಪ್ರಸ್ತುತ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಮದಲೂರು ಕೆರೆಗೆ ನೀರು ಹರಿಸಿದರೆ, ಅಧಿಕಾರಿಗಳು ಜೈಲಿಗೆ ಹೋಗಬೇಕಾದೀತು ಎಂದು ಎಚ್ಚರಿಸಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದಾಗ ಕ್ಷೇತ್ರದ ವಾತಾವರಣ ಬೇರೆಯದೇ ರಂಗು ಪಡೆದಿತ್ತು. ಇದಕ್ಕೆ ಉತ್ತರ ಎನ್ನುವಂತೆ ನೀರು ಹರಿಸಲು ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಆಡಳಿತ ಪಕ್ಷದ ಶಾಸಕರೇ ಘೋಷಿಸಬೇಕಾಗಿ ಬಂತು.
ಇದರ ನಡುವೆ ಮದಲೂರು ಕೆರೆಗೆ ನೀರಿನ ಹಂಚಿಕೆ ಕುರಿತಂತೆ ಆಡಳಿತ ಪಕ್ಷದಲ್ಲಿಯೇ ಗೊಂದಲ ಉಂಟಾಗಿತ್ತು. ಜಿಲ್ಲಾ ಮಂತ್ರಿಗಳೇ ನೀರಿನ ಹಂಚಿಕೆ ಇಲ್ಲ ಎಂದರೆ, ಕಾಂಗ್ರೆಸ್‌ ಪಕ್ಷ ನೀರಿನ ಹಂಚಿಕೆ ಆಗಿದೆ ಎಂದು ಪ್ರತಿಪಾದಿಸಿತು. ಇಲ್ಲಿನ ಶಾಸಕದ್ವಯರು ಹೆಚ್ಚುವರಿ ನೀರನ್ನು ಬಿಡಿಸುವ ಬಗ್ಗೆ ಸರ್ಕಾರದ ಮನವೊಲಿಸುವ ಬಗ್ಗೆ ಭರವಸೆ ನೀಡಿದ್ದರು. ಇದರ ನಡುವೆ ಮಾಜಿ ಸಚಿವ ಜಯಚಂದ್ರ ಮದಲೂರು ಕೆರೆ ಯೋಜನೆಗೆ ತಾವೇ ಅಪ್ಪ, ಅಮ್ಮ ಎಂದು ಹೇಳಿಕೊಂಡಿದ್ದಾರೆ ಎನ್ನುವ ವಿಷಯ ವಿರೋಧ ಪಕ್ಷಗಳಿಗೆ ತೀವ್ರ ಇರುಸುಮುರುಸು ತಂದಿತ್ತು.
ಪ್ರಸ್ತುತ ವರ್ಷ ಶಿರಾದ ಕಡೆಗೆ ಹೇಮಾವತಿ ಹರಿಯಲು ಆರಂಭಗೊಂಡಾಗಿನಿಂದಲೂ ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಆಡಳಿತ ಪಕ್ಷವೇ ಗೊಂದಲದಲ್ಲಿದ್ದಂತೆ ಕಂಡು ಬಂದಿತ್ತು. ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗಳು ಅರ್ಧಕ್ಕೂ ಹೆಚ್ಚಿನ ನೀರಿನಿಂದ ಭರ್ತಿಯಾಗಿದ್ದ ವೇಳೆ ಚಾನಲ್‌ನಿಂದ ಹರಿಯುತ್ತಿದ್ದ ಹೇಮಾವತಿ ನೀರನ್ನು ನಿಲ್ಲಿಸಲಾಗಿತ್ತು. ಒಂದೆರಡು ದಿನಗಳ ಅಂತರದಲ್ಲಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹೇಮಾವತಿ ಹರಿಯುವ ಮಾರ್ಗದಲ್ಲಿ ಸುರಿದ ಭಾರಿ ಮಳೆಯಿಂದ ಒಂದೆ ದಿನದಲ್ಲಿ ಕಳ್ಳಂಬೆಳ್ಳ ಮತ್ತು ಶಿರಾ ಕೆರೆ ಕೋಡಿ ಬಿದ್ದು ಇತಿಹಾಸ ದಾಖಲಿಸಿತ್ತು.
ಎರಡೂ ಕೆರೆಗಳು ಕೋಡಿ ಹರಿದ ನಂತರ ಮದಲೂರು ಕೆರೆ ವಿಚಾರ ತೀವ್ರ ಕುತೂಹಲ ಕೆರಳಿಸಿತ್ತು, ಎರಡೇ ದಿನಗಳ ಅಂತರದಲ್ಲಿ ಮದಲೂರು ಕೆರೆಗೆ ನೀರನ್ನು ಹರಿಸಲಾಯಿತು, ಸತತವಾಗಿ ಹರಿಯುತ್ತಿದ್ದ ನೀರನ್ನು ತಮ್ಮ ಕೆರೆಗಳಿಗೆ ಹರಿಯಲಿ ಎಂದು ನಾಲೆಯ ಕೆಲ ಭಾಗದಲ್ಲಿ ಸ್ಥಳೀಯರು ತಮ್ಮ ಕೆರೆಗಳಿಗೆ ನೀರು ಹರಿಸಿಕೊಳ್ಳುವ ಯತ್ನ ನಡೆಸಿದಾಗ, ಬಿಜೆಪಿ ಇದನ್ನು ವಿರೋಧ ಪಕ್ಷಗಳ ಪಿತೂರಿ, ಮದಲೂರು ಕೆರೆ ತುಂಬಿದರೆ, ರಾಜಕೀಯವಾಗಿ ಲಾಭ ಪಡೆಯಲು ಆಗುವುದಿಲ್ಲ ಎಂದು ಅನ್ಯ ಪಕ್ಷಗಳು ರೈತರನ್ನು ಎತ್ತಿಕಟ್ಟುತ್ತಿವೆ ಎಂದು ಆರೋಪಿಸಿತು. ನಂತರ ಬಿದ್ದ ಭಾರಿ ಮಳೆಯಿಂದ ನೀರು ಸಮೃದ್ಧಗೊಂಡು, ಅನೇಕ ಕೆರೆಗಳು ಭರ್ತಿಗೊಂಡವಲ್ಲದೆ, ಮದಲೂರು ಕೆರೆಗೂ ನೀರು ಸರಾಗವಾಗಿ ಹರಿಯುವಂತಾಯಿತು.
ಇದೇ ವೇಳೆ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ಅನೇಕ ಕೆರೆಗಳು ತುಂಬಿದವಲ್ಲದೆ ಜಯಚಂದ್ರರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಅನೇಕ ಪಿಕಪ್‌, ಬ್ಯಾರೇಜುಗಳು ನೀರಿನಿಂದ ತುಂಬಿ ತುಳುಕಿದವು, ತುಂಬಿದ ಕೆರೆ ಕಟ್ಟೆಗಳು, ಬ್ಯಾರೇಜ್ ಗಳಿಗೆ ಬಾಗಿನ ಅರ್ಪಿಸುವ ವಿಚಾರದಲ್ಲಿಯೂ ರಾಜಕೀಯ ಆರಂಭಗೊಂಡಿದ್ದು ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರೆರಚುವ ಹಂತಕ್ಕೆ ಬಂದು ತಲುಪಿತ್ತು.
ಇದರ ನಡುವೆಯೇ ಮಳೆ ನೀರೋ, ಹೇಮಾವತಿಯ ಕೃಪೆಯೋ ಅಂತೂ ಇಂತೂ ಮದಲೂರು ಕೆರೆ ತುಂಬಿ ತಿಮ್ಮಸಾಗರದ ಸಮೀಪದ ಕೋಡಿ ಮೀರಿ ನೀರು ಹರಿಯಲು ಆರಂಭಿಸಿದೆ. ಸಾಮಾಜಿಕ ಜಾಲತಾಣಗಳಾದ ವಾಟ್ಸಪ್‌, ಫೇಸ್ ಬುಕ್ ಗಳಲ್ಲಿ ಮದಲೂರು ಕೆರೆ ಕೋಡಿ ಹರಿಯುತ್ತಿರುವ ಅನೇಕ ವೀಡಿಯೋ, ಅನೇಕರು ಪೂಜೆ ಸಲ್ಲಿಸುವ ಫೋಟೋಗಳಿಂದ ತುಂಬಿ ತುಳುಕುತ್ತಿವೆ. ಬರಿ ಶಿರಾ ತಾಲ್ಲೂಕಿನವರರೇ ಅಲ್ಲದೇ ಪಕ್ಕದ ಆಂಧ್ರದ ಅನೇಕ ರೈತರೂ, ಪಕ್ಕದ ಹಿರಿಯೂರು ತಾಲ್ಲೂಕಿನ ಕೆಲ ಭಾಗದ ರೈತರೂ ಮದಲೂರು ಕೆರೆ ತುಂಬಿರುವ ಬಗ್ಗೆ ಪುಳಕಗೊಂಡಿದ್ದಾರೆ.
ಮದಲೂರು ಕೆರೆ ಕೋಡಿ ಮೀರಿ ಹರಿಯುತ್ತಿರುವ ನೀರಿನ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರವನ್ನು ಭದ್ರಪಡಿಸಿಕೊಳ್ಳುವ ಇರಾದೆಯಲ್ಲಿದ್ದರೆ, ಕಾಲುವೆ ಕಾಮಗಾರಿ ಮುಗಿಸಿದ ಕಾರಣವೇ ಮದಲೂರು ಕೆರೆಗೆ ನೀರು ಹರಿಸಲು ಸಾಧ್ಯವಾಯಿತು ಎನ್ನುವ ಅಂಶದ ಮೇಲೆ ಉಳಿದವರು ರಾಜಕೀಯ ಲಾಭ ಪಡೆಯಲು ಉದ್ದೇಶಿಸಿದ್ದಾರೆ ಎನ್ನುವುದು ಫೇಸ್‌ಬುಕ್‌ ಮತ್ತಿತರೆ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ ಗಳನ್ನು ಗಮನಿಸಿದರೆ ಸ್ಪಷ್ಟವಾಗಿ ಗೊತ್ತಾಗಲಿದೆ. ಆದರೆ, ನಿಜವಾದ ರೈತ ಮಾತ್ರ ಯಾವುದೇ ರಾಜಕೀಯ ಮೀರಿ ಪ್ರತಿ ವರ್ಷವೂ ಮದಲೂರು ಕೆರೆ ನೀರಿನಿಂದ ತುಂಬಲಿ ಎಂದು ಬಯಸುತ್ತಿದ್ದಾನೆ.

Get real time updates directly on you device, subscribe now.

Comments are closed.

error: Content is protected !!