ಕುಣಿಗಲ್: ತಾಲೂಕು ಕಚೇರಿ ಹಾಗೂ ಪುರಸಭೆ ಕಾರ್ಯಾಲಯಗಳಲ್ಲಿ ಶುಕ್ರವಾರ ಸಂವಿಧಾನ ದಿನ ಆಚರಿಸಲಾಯಿತು.
ತಾಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹಾಬಲೇಶ್ವರ್ ಸಂವಿಧಾನ ಪ್ರಸ್ತಾವನೆ ಭೋದಿಸಿದರು. ನಂತರ ಮಾತನಾಡಿ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಸಂವಿಧಾನ ಬಲಿಷ್ಠ ಸಂವಿಧಾನವಾಗಿದೆ. ಎಲ್ಲಾ ದೇಶಗಳು ಸಂವಿಧಾನ ಹೊಂದಿದ್ದರೂ, ಭಾರತದ ಸಂವಿಧಾನ ಅತ್ಯಂತ ದೀರ್ಘ ಸಂವಿಧಾನವಾಗಿದೆ. ಸಂವಿಧಾನದ ಆಶಯ, ಆದರ್ಶಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಪಾಲಿಸಿ ಗೌರವಿಸಬೇಕೆಂದರು.
ಪತ್ರಕರ್ತ ಆನಂದ್‌ಸಿಂಗ್ ಮಾತನಾಡಿ, ದೇಶದ ಪ್ರತಿಯೊಂದು ವಿಷಯದಲ್ಲೂ ಧಾರ್ಮಿಕ ವಿಚಾರಗಳು ಬೆರೆತು ಸೌಹಾರ್ದ ವಾತಾವರಣ ಕದಡುವ ಆತಂಕ ಸೃಷ್ಟಿಯಾಗುತ್ತಿರುವುದು ಬೇಸರ, ಸಂವಿಧಾನ ಎಲ್ಲಾ ಭಾರತೀಯರ ಪಾಲಿಗೆ ಪವಿತ್ರ ಗ್ರಂಥವಾಗಿ ಇದರ ಆದರ್ಶಗಳನ್ನು ಪಾಲನೆ ಮಾಡಿದಾಗ ಸಮ ಸಮಾಜ ನಿರ್ಮಾಣವಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು. ಮುಖಂಡರಾದ ವರದರಾಜು,ನಾರಾಯಣ್, ಶರೀಫ್ ಇತರರು ಇದ್ದರು.
ಇನ್ನು ಪುರಸಭೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆ, ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮುಖ್ಯಾಧಿಕಾರಿ ರವಿಕುಮಾರ್ ಪ್ರಸ್ತಾವನೆ ಭೋದಿಸಿ ಮಾತನಾಡಿ, ಈನೆಲದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಹಕ್ಕನ್ನು ಕಲ್ಪಿಸಿ ಎಲ್ಲರೂ ಸರಿಸಮಾನವಾಗಿ ಎಲ್ಲಾ ರೀತಿಯ ಸವಲತ್ತು ಪಡೆಯಲು ಸಂವಿಧಾನದ ಅಂಶಗಳು ಸಹಕಾರಿಯಾಗಿದೆ. ಪ್ರತಿಯೊಬ್ಬರ ಹುಟ್ಟಿನಿಂದ ಹಿಡಿದು ಸತ್ತು ಮಣ್ಣಾಗುವ ತನಕ ಸಂವಿಧಾನ ರಕ್ಷಣೆಗಿದ್ದು ಹಲವು ಹಕ್ಕುಗಳನ್ನು ಕಲ್ಪಿಸುತ್ತದೆ ಎಂದರು.
ಪುರಸಭೆ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಕೇವಲ ಸಂವಿಧಾನದ ಆಶಯಗಳ ಬಗ್ಗೆ ಮಾತನಾಡಿದರೆ ಸಾಲದು, ಅವುಗಳನ್ನು ಪರಿಣಾಮಕಾರಿಯಾಗಿ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು. ಸದಸ್ಯರಾದ ಜಯಲಕ್ಷ್ಮೀ, ಉದಯ, ಮಲ್ಲಿಪಾಳ್ಯ ಶ್ರೀನಿವಾಸ್,ದೇವರಾಜ್ ಇತರರು ಇದ್ದರು.
ಭಾರತದ ಸಂವಿಧಾನ ಬಲಿಷ್ಠವಾದುದು: ತಹಶೀಲ್ದಾರ್
Get real time updates directly on you device, subscribe now.
Comments are closed.