ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ- ರಸ್ತೆ ತಡೆದು ಸಂಘಟನೆಗಳಿಂದ ಪ್ರತಿಭಟನೆ

ಕಾಯ್ದೆಗಳನ್ನು ಸಂಸತ್ತಿನಲ್ಲಿ ವಾಪಸ್ ಪಡೆಯಲಿ

283

Get real time updates directly on you device, subscribe now.

ತುಮಕೂರು: ರೈತ ವಿರೋಧಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ವಾಪಾಸ್‌ ಪಡೆಯಬೇಕು, ಎಂ.ಎಸ್.ಪಿ ಖಾತ್ರಿ ನೀಡಬೇಕು, ವಿದ್ಯುತ್‌ ಖಾಸಗೀಕರಣ, ಬೀಜ ಸಂರಕ್ಷಣೆ ಮಸೂದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಕ್ಯಾತ್ಸಂದ್ರ ಟೋಲ್‌ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರೈತ ವಿರೋಧಿಗಳಾಗಿರುವ ಮೂರು ಮಸೂದೆಗಳನ್ನು ವಾಪಾಸ್‌ ಪಡೆಯುವುದಾಗಿ ಹೇಳಿದ್ದಾರೆ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಪ್ರಧಾನಿಗಳು ಕೊಟ್ಟ ಭರವಸೆಯಂತೆ ಸಂಸತ್ತಿನಲ್ಲಿ ವಾಪಸ್‌ ಪಡೆದುಕೊಳ್ಳುವವರೆಗೆ ಹೋರಾಟ ಮುಂದುವರೆಸಬೇಕು, ಆಗ ಮಾತ್ರ ರೈತರ ಹೋರಾಟಕ್ಕೆ ಜಯಸಿಗಲಿದೆ ಎಂದು ಹೇಳಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಸೋಲುವ ಭಯದಿಂದ ಪ್ರಧಾನಿಗಳು ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳಲು, ಕಾಯ್ದೆ ಹಿಂಪಡೆಯುವುದಾಗಿ ಹೇಳಿದ್ದಾರೆ, ರೈತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಸಂಸತ್ತಿನಲ್ಲಿ ಕಾಯ್ದೆಯನ್ನು ಕಾನೂನಾತ್ಮಕವಾಗಿ ಹಿಂಪಡೆಯುವುದರ ಜೊತೆಗೆ ರೈತರ ಬೇಡಿಕೆಗಳಾದ ಎಂ.ಎಸ್.ಪಿ ಖಾತ್ರಿ, ಬೀಜಸಂರಕ್ಷಣೆ ಮಸೂದೆ, ವಿದ್ಯುತ್‌ ಖಾಸಗೀಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದಿರುವ ಎಂಪಿಎಂಸಿ ಮತ್ತು ಭೂಸುಧಾರಣಾ ತಿದ್ದುಪಡಿ ಮಸೂದೆಗಳನ್ನು ವಾಪಸ್‌ ಪಡೆಯಬೇಕು ಮತ್ತು ಹೋರಾಟದಲ್ಲಿ ಹುತ್ಮಾತ್ಮರಾಗಿರುವ 700 ರೈತರಿಗೆ ತೆಲಂಗಾಣ ಸರ್ಕಾರದಂತೆ ರಾಜ್ಯ ಸರ್ಕಾರವು 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಅನ್ನದಾತರ ಹೋರಾಟಕ್ಕೆ ಕೇಂದ್ರ ಸರ್ಕಾರ ಹೆದರಿ ಮೂರು ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಹೇಳಿದೆ, ಹೋರಾಟದಲ್ಲಿರುವ ರೈತರ ಬೇಡಿಕೆಗಳು ಬಾಕಿ ಇದ್ದು, ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೊಳಿಸುವುದು ಸೇರಿದಂತೆ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಹೋರಾಟದಲ್ಲಿ ಸಾವನ್ನಪ್ಪಿರುವ 700 ರೈತ ಹುತ್ಮಾತರ ಕುಟುಂಬದ ರಕ್ಷಣೆ ಮಾಡಬೇಡಲು ಕೇಂದ್ರ ಸರ್ಕಾರ 50 ಲಕ್ಷ ರೂಗಳ ಪರಿಹಾರ ಘೋಷಿಸಬೇಕು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕೆಂದು ಒತ್ತಾಯಿಸಿದ ಅವರು, ಅಕಾಲಿಕ ಮಳೆಯಿಂದ ಬೆಳೆನಷ್ಟವಾಗಿದೆ, ರೈತರು ಬೆಳೆದಿರುವ ಎಲ್ಲ ಬೆಳೆಗಳಿಗೆ ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಅಕಾಲಿಕ ಮಳೆಯಿದಾಗಿ ರೈತರು ಜಾನುವಾರಗಳನ್ನು ಕಳೆದುಕೊಂಡಿದ್ದಾರೆ, ಅನೇಕ ಮನೆಗಳು ಕುಸಿತವಾಗಿದ್ದು, ರೈತರಿಗೆ ಉಂಟಾಗಿರುವ ನಷ್ಟವನ್ನು ರಾಜ್ಯ ಸರ್ಕಾರ ತುರ್ತಾಗಿ ತುಂಬಿಕೊಡಬೇಕು, ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಬಾಕಿ ಇದ್ದು, ಶೀಘ್ರ ವಿಮೆಪರಿಹಾರ ಕೊಡಿಸಬೇಕು ಹಾಗೂ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ರೈತರ ಬೆಳೆಗೆ ಸೂಕ್ತ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಆರ್.ಕೆ.ಎಸ್‌ ಸಂಘಟನೆಯ ಸ್ವಾಮಿ ಮಾತನಾಡಿ, ದುರಂಹಕಾರಿ, ಫ್ಯಾಸಿಸ್ಟ್ ಸರ್ಕಾರ ರೈತರ ಮುಂದೆ ತಲೆ ಬಾಗಿದೆ, ಒಂದು ವರ್ಷದಿಂದ ಸಂಘಟಿತ ಹೋರಾಟದಿಂದ ಮೋದಿ ಸರ್ಕಾರ ಮಣಿದಿದೆ, ಮೋದಿ ಸರ್ಕಾರ ವಚನ ಭ್ರಷ್ಟ ಸರ್ಕಾರ, ಅವರನ್ನು ನಂಬುವಂತಿಲ್ಲ, ರೈತರು ಗೆಲ್ಲಬೇಕಾದರೆ ಹೋರಾಟ ಮುಂದುವರೆಯಬೇಕು, ಶಾಸನ ಬದ್ಧವಾಗಿ ಹಿಂಪಡೆಯುಬೇಕು, ಕಿಸಾನ್‌ ಮೋರ್ಚಾ ಹೋರಾಟಕ್ಕೆ ರಾಜ್ಯದಲ್ಲಿ ಅಪೂರ್ವ ಬೆಂಬಲ ಸಿಕ್ಕಿದೆ ಎಂದರು.
ಎಐಟಿಯುಸಿ ಕಾರ್ಯದರ್ಶಿ ಗಿರೀಶ್‌ ಮಾತನಾಡಿ, ಮೋದಿ ಸರ್ಕಾರವನ್ನು ಜನರು ನಂಬಲು ಸಾಧ್ಯವಿಲ್ಲ, ಅವರು ನೀಡಿದ್ದ ಭರವಸೆಗಳೆಲ್ಲ ಪೊಳ್ಳು, ಚುನಾವಣೆಯಲ್ಲಿ ಗೆಲ್ಲುವಾಗಿನಿಂದ ಇಲ್ಲಿಯವರೆಗೆ ನೀಡಿದ್ದ ಯಾವ ಭರವಸೆಯನ್ನು ಮೋದಿ ಸರ್ಕಾರ ಈಡೇರಿಸಿಲ್ಲ, ಮುಂಬರುವ ಪಂಚರಾಜ್ಯಗಳ ಚುನಾವಣೆಯಲ್ಲಿ ಸರ್ಕಾರ ಬೀಳುತ್ತೆ ಎಂಬ ಭಯದಿಂದ ಜನರನ್ನು ಮರಳು ಮಾಡಲು ಯತ್ನಿಸುತ್ತಿದ್ದಾರೆ, ಜೀವ ವಿರೋಧಿ ಕಾಯ್ದೆಗಳಾಗಿರುವ ವಿದ್ಯುತ್‌, ಕಾರ್ಮಿಕ ಕಾಯ್ದೆಗಳನ್ನು ಸಹ ಹಿಂಪಡೆಯಬೇಕೆಂದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಕೆಂಕೆರೆ ಸತೀಶ್‌, ಪೂಜಾರಪ್ಪ, ಧನಂಜಯಾರಾಧ್ಯ, ಗಿರೀಶ್‌, ಸಿದ್ದರಾಜು, ಅನಿಲ್‌ ಕುಮಾರ್‌, ಬೆಟ್ಟಾಗೌಡ, ರಿಯಾಜ್‌ ಪಾಷ, ಕಲ್ಯಾಣಿ, ಅಜ್ಜಪ್ಪ, ಕಂಬೇಗೌಡ, ಬಿ.ಉಮೇಶ್‌, ಸುಬ್ರಮಣ್ಯ, ಸೈಯದ್‌ ಮುಜೀಬ್‌, ಕಮಲಮ್ಮ ಸೇರಿದಂತೆ ವಿವಿಧ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!