ಶಿವಕುಮಾರ ಶ್ರೀಗಳ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ- ಗುದ್ದುಗೆ ದರ್ಶನ ಪಡೆದ ಸಿಎಂ

ಹೆಲಿಕ್ಯಾಪ್ಟರ್‌ ಮೂಲಕ ಗುದ್ದುಗೆಗೆ ಪುಷ್ಪಾರ್ಚನೆ

302

Get real time updates directly on you device, subscribe now.

ತುಮಕೂರು: ವೀರಶೈವ, ಲಿಂಗಾಯತ ಮಹಾ ವೇದಿಕೆ ಮತ್ತು ವೀರಶೈವ, ಲಿಂಗಾಯತ ಯುವ ವೇದಿಕೆಯಿಂದ ಕಾರ್ತಿಕ ಮಾಸದ ಕಡೇ ಸೋಮವಾರದ ಅಂಗವಾಗಿ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಲಕ್ಷ ಬಿಲ್ವಾರ್ಚನೆ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ನಡೆದಾಡುವ ದೇವರು, ಕರ್ನಾಟಕ ರತ್ನ, ಪದ್ಮಭೂಷಣ ಡಾ.ಶಿವಕುಮಾರ ಮಹಾ ಶಿವಯೋಗಿಗಳ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮದ ಅಂಗವಾಗಿ ವೇದಿಕೆ ವತಿಯಿಂತ ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿದವು.
ಮುಂಜಾನೆ 4 ಗಂಟೆಗೆ ರುದ್ರಾಭಿಷೇಕ, 5.30 ಕ್ಕೆ ಉದ್ಘಾಟನೆ ಮತ್ತು ಪುಷ್ಪ ಬಿಲ್ವಾರ್ಚನೆ ಹಾಗೂ ಮಧ್ಯಾಹ್ನ 3.30ಕ್ಕೆ ಮಹಾ ಮಂಗಳಾರತಿಯೊಂದಿಗೆ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಹೆಲಿಕ್ಯಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು.
ಶ್ರೀಗಳ ಗದ್ದುಗೆ ಮಂದಿರದ ಮೇಲೆ ಹೆಲಿಕಾಪ್ಟರ್‌ ಹಾರಾಟ ನಡೆಸುತ್ತಿದ್ದಂತೆಯೇ ನೆರೆದಿದ್ದ ಶ್ರೀಮಠದ ಮಕ್ಕಳು, ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಲಿಂಗಾಯಿತ ಯುವ ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್‌ ಕಲ್ಲೂರು, ಪೂಜ್ಯರ ಗದ್ದುಗೆಗೆ ಲಕ್ಷ ಪುಷ್ಪಾ ಬಿಲ್ವಾರ್ಚನೆ, 45 ಅಡಿಗಳ ಕಟೌಟ್ ಮಾಡಿಸಲಾಗಿದೆ. ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಿದ್ದೇವೆ. ಶ್ರೀಗಳ ಸೇವಾ ಕಾರ್ಯ ನೆನಪಿಸಿಕೊಳ್ಳುವಂತಹ ಏಕೈಕ ಮಠ ಸಿದ್ದಗಂಗಾ ಮಠ, ಪ್ರತಿ ವರ್ಷ ಕಡೆಯ ಕಾರ್ತಿಕ ಸೋಮವಾರದಂದು ವಿಶೇಷ ಕಾರ್ಯಕ್ರಮವನ್ನು ವೇದಿಕೆ ವತಿಯಿಂದ ಮಾಡಲಾಗುವುದು ಎಂದರು.
ಪೂಜ್ಯರು ಮಾಡಿರುವ ದಾಸೋಹ, ಶಿಕ್ಷಣ ದಾಸೋಹ ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯ ನೆನೆಯುವ ಕಾರ್ಯವನ್ನು ವೇದಿಕೆ ಮಾಡುತ್ತಿದೆ ಎಂದು ಹೇಳಿದರು.

ಶ್ರೀಗಳ ಗದ್ದುಗೆಗೆ ನಮಿಸಿದ ಸಿಎಂ
ಶ್ರೀಮಠದಲ್ಲಿ ವೀರಶೈವ ಲಿಂಗಾಯತ ಮಹಾವೇದಿಕೆ ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆ ಹಮ್ಮಿಕೊಂಡಿದ್ದ ಲಕ್ಷ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಪೂಜಾ ವಿಧಿ ವಿಧಾನದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಶ್ರೀಗಳ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ ಪ್ರಯುಕ್ತ ಶ್ರೀಮಠದಲ್ಲಿ ಭಕ್ತಾದಿಗಳಿಗಾಗಿ ವಿಶೇಷ ಪ್ರಸಾದವಾಗಿ ರೈಸ್ ಬಾತ್‌, ಚಿತ್ರಾನ್ನ, ಪಾಯಸ ಬೂಂದಿ ವ್ಯವಸ್ಥೆ ಮಾಡಲಾಗಿತ್ತು. ಈ ಧಾರ್ಮಿಕ ಸಮಾರಂಭದಲ್ಲಿ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಹರಗುರು ಚರಮೂರ್ತಿಗಳು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಶಾಸಕ ಜೋತಿಗಣೇಶ್‌, ಮಾಜಿ ಸಚಿವ ಸೊಗಡು ಶಿವಣ್ಣ, ಚಲನಚಿತ್ರ ನಟ ಡಾರ್ಲಿಂಗ್‌ ಕೃಷ್ಣ, ಚಿತ್ರನಟಿ ಅದಿತಿ ಪ್ರಭುದೇವ್‌, ನಟ ಧರ್ಮಕೀರ್ತಿ, ವೀರಶೈವ ಲಿಂಗಾಯಿತ ಮಹಾವೇದಿಕೆ ಮತ್ತು ವೀರಶೈವ ಲಿಂಗಾಯಿತ ಯುವ ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್‌ ಕಲ್ಲೂರು, ರಾಜ್ಯ ಕಾರ್ಯದರ್ಶಿ ಪ್ರಪುಲ್‌ ಕುಮಾರ್‌, ವಿಜಯಸೇನೆಯ ದೀಪಕ್‌, ತುಮಕೂರು ಜಿಲ್ಲೆಯ ಜಿಲ್ಲಾಧ್ಯಕ್ಷ ಚಂಗಾವಿ ರವಿ, ಜಿಲ್ಲಾ ಗೌರವಾಧ್ಯಕ್ಷ ರುದ್ರೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜು ಬಿ.ಜಿ.ಪಾಳ್ಯ, ಜಿಲ್ಲಾ ಉಪಾಧ್ಯಕ್ಷ ಮುನಿ ಬಸವರಾಜು, ಪುಷ್ಪರಾಜ್‌, ಜಿಲ್ಲಾ ವೇದಿಕೆಯ ಪದಾಧಿಕಾರಿಗಳಾದ ಡಿ.ರಾಜಕುಮಾರ್‌, ಮೋಹನ್‌ ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!