ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ಇಲ್ಲ

141

Get real time updates directly on you device, subscribe now.

ತುಮಕೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್‌-19 ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳ ಮತ್ತು ಮಹಾರಾಷ್ಟ್ರದಿಂದ ಕಳೆದ ಒಂದು ತಿಂಗಳ ಹಿಂದೆ ಜಿಲ್ಲೆಗೆ ಬಂದಿರುವ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್‌-19 ನಿಯಂತ್ರಣ ಸಂಬಂಧ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಪರೆನ್ಸ್ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌- 19 ಸೋಂಕು ಹರಡುವುದನ್ನು ತಡೆಯಲು ಪದವಿ, ಇಂಜಿನಿಯರಿಂಗ್‌, ನರ್ಸಿಂಗ್‌ ಕಾಲೇಜುಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಸೋಂಕು ಹೆಚ್ಚಳವಾದ ಕಡೆ ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಲಸಿಕೆ ಪಡೆಯದಿದ್ದರೆ ಕಾಲೇಜಿಗಿಲ್ಲ ಪ್ರವೇಶ: ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಲಸಿಕೆ ಪಡೆಯುವುದು ಕಡ್ಡಾಯವಾಗಿದ್ದು, ಕನಿಷ್ಟ ಒಂದು ಡೋಸ್‌ ಲಸಿಕೆ ಪಡೆಯದೇ ಇರುವ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡುವಂತಿಲ್ಲ, ವಿದ್ಯಾರ್ಥಿಗಳು ಲಸಿಕೆ ಪಡೆಯದೇ ಇದ್ದು, ಅಂತಹ ಕಾಲೇಜುಗಳಲ್ಲಿ ಕೋವಿಡ್‌ ಹೆಚ್ಚಳವಾದರೆ ಸಂಬಂಧಿಸಿದ ಪ್ರಾಚಾರ್ಯ, ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎರಡು ಡೋಸ್‌ ಲಸಿಕೆ ಕಡ್ಡಾಯ: ಸರ್ಕಾರಿ ಕಚೇರಿ, ಮಾಲ್‌, ಚಿತ್ರ ಮಂದಿರ, ಹೋಟೆಲ್‌, ರೆಸ್ಟೋರೆಂಟ್‌, ಈಜುಕೊಳ, ಸಾರ್ವಜನಿಕ ಗ್ರಂಥಾಲಯ, ವ್ಯಾಪಾರ- ವಹಿವಾಟು ಮಳಿಗೆ, ಅಂಗಡಿ- ಮುಗ್ಗಟ್ಟು, ಖಾಸಗಿ ಕಂಪನಿ, ಶಾಲಾ- ಕಾಲೇಜುಗಳಲ್ಲಿನ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವವರು ಎರಡನೇ ಡೋಸ್‌ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಎರಡೂ ಡೋಸ್‌ ಲಸಿಕೆ ಪಡೆಯದೇ ಇದ್ದಲ್ಲಿ ಅಂತಹವರು ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅನುಮತಿ ನೀಡುವಂತಿಲ್ಲ ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚು ನಿಗಾವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಎರಡು ಡೋಸ್‌ ಪಡೆಯದೇ ಇದ್ದರೆ ಪರವಾನಗಿ ರದ್ದು: ವ್ಯಾಪಾರ- ವಹಿವಾಟು ನಡೆಸುವ ವ್ಯಾಪಾರಸ್ಥರು ಕಡ್ಡಾಯವಾಗಿ ಎರಡೂ ಡೋಸ್‌ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದೇ ವ್ಯಾಪಾರ- ವಹಿವಾಟು ನಡೆಸುವಂತಿಲ್ಲ, ಒಂದು ವೇಳೆ ಲಸಿಕೆ ಪಡೆಯದಿದ್ದಲ್ಲಿ ಅಂತಹ ವ್ಯಾಪಾರಸ್ಥರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೂರು ದಿನ ಲಸಿಕಾ ಮೇಳ: ಜಿಲ್ಲೆಯಲ್ಲಿ ಮಂಗಳವಾರ, ಬುಧವಾರ ಮತ್ತು ಗುರುವಾರ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು, ನೂರರಷ್ಟು ಲಸಿಕಾ ಮೇಳ ಯಶಸ್ವಿಗೊಳಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಶೇ.91 ರಷ್ಟು ಮೊದಲ ಡೋಸ್‌ ಲಸಿಕೆ ಹಾಗೂ ಶೇ.63ರಷ್ಟು ಎರಡನೇ ಡೋಸ್‌ ಲಸಿಕಾಕರಣ ಯಶಸ್ವಿಯಾಗಿದ್ದು, ನೂರರಷ್ಟು ಲಸಿಕಾರಣ ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಸೂಚಿಸಿದರು.
ಲಸಿಕೆ ಪಡೆಯಲು ಅರ್ಹತೆವುಳ್ಳವರು ಇನ್ನೂ ಲಸಿಕೆ ಪಡೆಯದಿದ್ದಲ್ಲಿ, ಮೊದಲ ಡೋಸ್‌ ಲಸಿಕೆ ಪಡೆದು ಎರಡನೇ ಡೋಸ್‌ ಲಸಿಕೆ ಪಡೆಯುವವರು ಈ ಮೆಘಾ ಮೇಳದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.
ಲಸಿಕಾ ಮೇಳ ಯಶಸ್ವಿಗೆ ಶಿಕ್ಷಕರು, ನ್ಯಾಯ ಬೆಲೆ ಅಂಗಡಿ, ಸಹಕಾರ ಸಂಘಗಳು ಸೇರಿದಂತೆ ಹಾಲು ವಿತರಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಖ್ಯವಾಗಿ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಲಸಿಕಾ ಮೇಳದ ಯಶಸ್ಸಿಗೆ ಶ್ರಮಿಸಬೇಕು. ಲಸಿಕಾಕರಣ ಕಾರ್ಯದಲ್ಲಿ ಬೇಜವಾಬ್ದಾರಿ ತೋರಿದರೆ ಕ್ರಮ ವಹಿಸಲಾಗುವುದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಕೋವಿಡ್‌ ಲಸಿಕಾ ನೋಂದಣಿ ಸರಿಯಾಗಿ ಮಾಡಿ: ಲಸಿಕೆ ಪಡೆಯದಿದ್ದರೂ ಲಸಿಕೆಯನ್ನು ಯಶಸ್ವಿಯಾಗಿ ಪಡೆಯಲಾಗಿದೆ ಎಂಬ ಮೆಸೇಜ್ ಗಳು ಮೊಬೈಲ್ ಗಳಿಗೆ ರವಾನೆಯಾಗುತ್ತಿದೆ ಎಂಬ ದೂರು ಬಂದಿದ್ದು, ಲಸಿಕಾಕರಣದ ವೇಳೆ ಸರಿಯಾಗಿ ನೋಂದಣಿ ಪ್ರಕ್ರಿಯೆ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.

ಕೋವಿಡ್‌ ನಿಯಮ ಪಾಲಿಸಿ: ಬೇರೆ ಬೇರೆ ದೇಶಗಳಲ್ಲಿ ಹೊಸ ಪ್ರಭೇದದ ಕೋವಿಡ್‌ ಪ್ರಕರಣ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!