ತುಮಕೂರು: ಸರ್ಕಾರದ ನಿರ್ದೇಶನದನ್ವಯ ಕೇರಳ ರಾಜ್ಯದಿಂದ ಬಂದ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೊಳಿಸಿದಾಗ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಿದ್ಧಗಂಗಾ ನರ್ಸಿಂಗ್ ಕಾಲೇಜು ವಸತಿ ನಿಲಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಅವರು ಸರ್ಕಾರದ ಸೂಚನೆ ಬಂದ ಕೂಡಲೇ ಕೇರಳದಿಂದ ಬಂದಂತ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಇದುವರೆಗೆ ನಗರದ ಅಶ್ವಿನಿ, ಅರುಣ, ಶ್ರೀದೇವಿ, ಅಕ್ಷಯ, ಶ್ರೀಕೃಷ್ಣ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಈ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಯಾವುದೇ ಸೋಂಕಿನ ಪ್ರಕರಣ ದೃಢಪಟ್ಟಿರುವುದಿಲ್ಲ. ಆದರೆ ವರದರಾಜು ನರ್ಸಿಂಗ್ ಕಾಲೇಜಿನ 90 ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಿದಾಗ 7 ವಿದ್ಯಾರ್ಥಿಗಳು ಹಾಗೂ ಶ್ರೀಸಿದ್ಧಗಂಗಾ ನರ್ಸಿಂಗ್ ಕಾಲೇಜಿನ 150 ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಿದಾಗ 8 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಸೋಂಕು ದೃಢಪಟ್ಟ ಕಾಲೇಜನ್ನು ಕಂಟೇನ್ಮೆಂಟ್ ವಲಯವನ್ನಾಗಿ ಮಾಡಿ, ಸರ್ವೇಕ್ಷಣ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರಲ್ಲದೆ, ಸೋಂಕಿತರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಬೆಂಗಳೂರಿಗೆ ಕಳುಹಿಸಬೇಕು ಎಂದು ನಿರ್ದೇಶಿಸಿದರು. ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಿ ಕ್ವಾರಂಟೇನ್ ಮಾಡಬೇಕು ಎಂದು ಸೂಚಿಸಿದರು.
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು.
ನರ್ಸಿಂಗ್ ಪರೀಕ್ಷೆ ನಡೆಯುತ್ತಿರುವುದರಿಂದ ಕೋವಿಡ್ ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಕೋವಿಡ್ ದೃಢಪಟ್ಟ ವಿದ್ಯಾರ್ಥಿಗಳಿರುವ ಕಾಲೇಜು ಹಾಗೂ ಹಾಸ್ಟೆಲ್ ಗಳಿಗೆ ವೈದ್ಯಾಧಿಕಾರಿಗಳು ನಿರಂತರ ಭೇಟಿ ನೀಡಿ ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗಳ ಮೇಲೆ ನಿಗಾವಹಿಸಬೇಕು ಎಂದು ನಿರ್ದೇಶನ ನೀಡಿದರು.
ಸರ್ವೇಕ್ಷಣಾ ಅಧಿಕಾರಿ ಡಾ.ಮೋಹನ್‌ದಾಸ್ ಮಾತನಾಡಿ, ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಯಂತೆ ಕೇರಳದಿಂದ ಹೊಸದಾಗಿ ಬಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಸೋಂಕು ದೃಢಪಟ್ಟ ಕಾಲೇಜಿನ ಸುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಿರುವುದರಿಂದ 14 ದಿನಗಳ ಕಾಲ ಸರ್ವೇಕ್ಷಣಾ ಚಟುವಟಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಆರೋಗ್ಯಾಧಿಕಾರಿ ಡಾ.ರಕ್ಷಿತ್, ಆರೋಗ್ಯ ಇಲಾಖೆ ಸಿಬ್ಬಂದಿ, ಮತ್ತಿತರರು ಹಾಜರಿದ್ದರು.
ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಕ್ವಾರಂಟೈನ್ ಗೆ ಡೀಸಿ ಸೂಚನೆ
ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್
Get real time updates directly on you device, subscribe now.
Prev Post
Next Post
Comments are closed.