ಕೊರೊನಾ 3ನೇ ಅಲೆ ತಡೆಗೆ ಅಗತ್ಯ ಕ್ರಮ: ನಿರಾಣಿ

168

Get real time updates directly on you device, subscribe now.

ತುಮಕೂರು: ವೀರಶೈವ, ಲಿಂಗಾಯಿತ ಸಮಾಜ ಕೊಡುವ ಕೈಯೇ ಹೊರತ್ತು, ಬೇಡುವ ಸಮುದಾಯವಲ್ಲ, ಸಮಾಜ ತಮ್ಮ ಶಕ್ತಿ ಮೀರಿ ದೇಣಿಗೆ ಸಂಗ್ರಹಿಸಿ ಐದು ಗರ್ಭಗುಡಿಗಳಿರುವ ದೇವಾಲಯ ಜೀರ್ಣೋದ್ಧಾರ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ.
ನಗರದ ಅರಳೇಪೇಟೆಯಲ್ಲಿ ತುಮಕೂರು ನಗರ ವೀರಶೈವ ಸಮಾಜದ ವತಿಯಿಂದ ಜೀರ್ಣೋದ್ಧಾರಗೊಂಡಿರುವ ಶ್ರೀಬಸವೇಶ್ವರ ದೇವಾಲಯಕ್ಕೆ ಭೇಟಿ, ದೇವರ ದರ್ಶನ ಪಡೆದ ನಂತರ ಮಾತನಾಡಿ, ಸಮಾಜದ ವತಿಯಿಂದ ಇಂತಹ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು ಸಂತೋಷದ ವಿಚಾರ ಎಂದರು.
ಸೋಮವಾರ ಈ ದೇವಾಲಯದ ಕುಂಭಾಭೀಷೇಕ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು, ಆದರೆ ಧಾರವಾಡದ ಕಾರ್ಯಕ್ರಮದಲ್ಲಿ ಇದ್ದ ಕಾರಣ ಬರಲಾಗಲಿಲ್ಲ, ಹಾಗಾಗಿ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೇನೆ, ತುಮಕೂರಿನ ಎಲ್ಲಾ ವೀರಶೈವ, ಲಿಂಗಾಯಿತ ಸಮುದಾಯದ ಜನರಿಗೆ ನಾನು ಆಬಾರಿ, ಈ ಭಾಗದ ಯಾವುದೇ ಕೆಲಸ ಕಾರ್ಯಗಳಿದ್ದರೂ ನನ್ನ ಕೈಲಾದ ಸಹಾಯ ಮಾಡಲು ಸಿದ್ಧ ಎಂದು ಮುರುಗೇಶ್‌ ನಿರಾಣಿ ತಿಳಿಸಿದರು.
ರಾಜ್ಯದಲ್ಲಿ ಮೂರನೇ ಅಲೆಯ ಭೀತಿ ಇದೆ, ಆದರೆ ಈಗಾಗಲೇ ಮುಖ್ಯಮಂತ್ರಿಗಳು ಲಾಕ್‌ಡೌನ್‌ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಈಗಾಗಲೇ ದೇಶದಲ್ಲಿ 100 ಕೋಟಿಗೂ ಹೆಚ್ಚು ಕೊರೊನ ವಿರುದ್ಧದ ಲಸಿಕೆ ನೀಡಲಾಗಿದೆ. ಉಳಿದ ಜನರಿಗೂ ತ್ವರಿತಗತಿಯಲ್ಲಿ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಆರ್‌ಎನ್‌ಡಿ ಮಾಡುವ ಮೂಲಕ ಲಸಿಕೆ ಪಡೆದುಕೊಳ್ಳುವಂತೆ ಕ್ರಮ ವಹಿಸಲಾಗುವುದು, ಅಕ್ಕಪಕ್ಕದ ರಾಜ್ಯಗಳಲ್ಲಿ ಏನೇನು ಕ್ರಮಗಳಾಗುತ್ತಿವೆ, ಬೆಳವಣಿಗೆಗಳೇನು ಎಂದು ಅಧ್ಯಯನ ನಡೆಸಿ, ರಾಜ್ಯದಲ್ಲಿಯೂ ಅಗತ್ಯ ಕ್ರಮ ಮುಖ್ಯಮಂತ್ರಿ ಗಳು ಕೈಗೊಳ್ಳಲಿದ್ದಾರೆ ಎಂದು ಕೈಗಾರಿಕಾ ಸಚಿವರು ನುಡಿದರು.
ಮುಖ್ಯಮಂತ್ರಿ, ಮಂತ್ರಿ, ಶಾಸಕ ಯಾವ ಹುದ್ದೆಗೂ ಆಸೆ ಪಟ್ಟವನಲ್ಲ. ಅವುಗಳೇ ನಮ್ಮನ್ನು ಹುಡುಕಿಕೊಂಡು ಬಂದಿವೆ. ಈಶ್ವರಪ್ಪ ನಮ್ಮ ಮೇಲಿನ ಅಭಿಮಾನದಿಂದ ಮುರುಗೇಶ್‌ ನಿರಾಣಿ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದಾರೆ, ಅಲ್ಲದೆ ಅವರೇ ಸ್ಪಷ್ಟಪಡಿಸಿದ್ದಾರೆ, ಸಿಎಂ ಬಸವರಾಜ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ನಡುವೆ 30 ವರ್ಷದ ಸ್ನೇಹವಿದೆ, ಅಲ್ಲದೆ ನಾನು ಅವರು ಒಂದೇ ಕಾಲೇಜಿನಲ್ಲಿ ಓದಿದವರು, ನಾವು 2023ರ ವಿಧಾನಸಭಾ ಚುನಾವಣೆಯಲ್ಲಿ 125ಕ್ಕೂ ಹೆಚ್ಚು ಸ್ಥಾನ ಪಡೆದು ಪಕ್ಷವನ್ನು ಅಧಿಕಾರಕ್ಕೆ ತರುವುದರ ಕಡೆಗೆ ಗಮನಹರಿಸಿದ್ದೇವೆ, 2024ರ ಚುನಾವಣೆಯಲ್ಲಿಯೂ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾವಿದೆ, 2023, 2028 ಅಥವಾ ಮುಂದಿನ ದಿನಗಳಲ್ಲಿ ಸಿಎಂ ಆಗುವ ಅವಕಾಶ ಸಿಗುಬಹುದು, ಆತುರ ಇಲ್ಲ ಎಂದು ಮುರುಗೇಶ್‌ ನಿರಾಣಿ ಸ್ಪಷ್ಟಪಡಿಸಿದರು.
ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ, ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್‌, ಉಪಾಧ್ಯಕ್ಷ ಚಂದ್ರಮೌಳಿ, ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೋರಿ ಮಂಜಣ್ಣ, ಪದಾಧಿಕಾರಿಗಳಾದ ಅತ್ತಿ ರೇಣುಕಾನಂದ, ವೀರಶೈವ, ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್‌ ಕುಮಾರ್‌ ಪಟೇಲ್‌, ವೀರಶೈವ ಬ್ಯಾಂಕಿನ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!