ತುಮಕೂರು: ಸುಮಾರು ಎರಡು ತಿಂಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದ ತುಮಕೂರು ಸೇರಿದಂತೆ ಇಡೀ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಳೆದು ನಿಂತಿದ್ದ ಸಾವಿರಾರು ಕೋಟಿ ರೂ. ಗಳ ರಾಗಿ, ನೆಲಕಡಲೆ, ಟೊಮೋಟೊ ಇತ್ಯಾದಿ ಆಹಾರ ಧಾನ್ಯ, ತರಕಾರಿ, ತೋಟಗಾರಿಕೆಯ ಬೆಳೆಗಳು ನಷ್ಟವಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಬೆಳೆ ನಷ್ಟ ಸಮೀಕ್ಷೆ ಪೂರ್ಣಗೊಳಿಸಿ, ಆಹಾರ ಧಾನ್ಯ ಬೆಳೆಗಳಿಗೆ ಎಕರೆಗೆ ಕನಿಷ್ಠ 25,000 ರೂ. ಹಾಗೂ ತರಕಾರಿ ಬೆಳೆಗಳಿಗೆ ಎಕರೆಗೆ ಕನಿಷ್ಠ 1,00,000 ರೂ. ನಷ್ಟ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಈ ದಿಸೆಯಲ್ಲಿ ಕೂಡಲೇ ಕಾರ್ಯ ಪ್ರವೃತ್ತವಾಗದಿದ್ದಲ್ಲಿ ಮುಂದಿನ ಡಿಸೆಂಬರ್, ಜನವರಿಯಲ್ಲಿ ತುಮಕೂರು ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ರೈತ ಸಂಘ ಸ್ವತಂತ್ರವಾಗಿ ಮತ್ತು ಐಕ್ಯ ರೈತ ಚಳವಳಿ ಸಂಘಟಿಸಲಿದ್ದು, ರೈತರು ಪಕ್ಷಾತೀತವಾಗಿ ಈ ಹೋರಾಟದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು.
ಕೋಲಾರ 59,000 ಹೆಕ್ಟೇರ್, ಚಿಕ್ಕಬಳ್ಳಾಪುರ 43,002 ಹೆಕ್ಟೇರ್ ನಲ್ಲಿ ಪ್ರಮುಖ ಬೆಳೆಯಾದ ರಾಗಿ ಬೆಳೆಯಲಾಗಿದೆ. ಇದರಲ್ಲಿ ಬಹುತೇಕ ಅರ್ಧಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ರಾಗಿ ಬೆಳೆ ನೆಲ ಕಚ್ಚಿ, ಮೊಳಕೆ ಬಂದಿದೆ, ಇದೇ ರೀತಿಯಲ್ಲಿ ತುಮಕೂರು ಜಿಲ್ಲೆಯಲ್ಲೂ 2284 ಹೆಕ್ಟೇರ್ ನಿರಾವರಿ ಪ್ರದೇಶ ಹಾಗೂ 1.27 ಲಕ್ಚ ಹೆಕ್ಟೇರ್ ನಲ್ಲಿ ಅಪಾರ ಬೆಳೆ ನಷ್ಟವಾಗಿದೆ. ನೆಲಗಡಲೆ, ಈರುಳ್ಳಿ, ಭತ್ತ, ರಾಗಿ ಮತ್ತು ರಾಗಿ ಹುಲ್ಲು ಎರಡನ್ನು ಕಳೆದು ಕೊಂಡ ರೈತ ಮುಂದಿನ ದಿನಗಳಲ್ಲಿ ತನಗೂ ಊಟವಿಲ್ಲ, ಜಾನುವಾರುಗಳಿಗೂ ಮೇವು ಇಲ್ಲದ ಸ್ಥಿತಿಯಿಂದ ನರಳುವಂತಾಗಿದೆ, ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹಾಕಿರುವ ಬಂಡವಾಳ ಕಳೆದು ಕೊಂಡು ರೈತರು ಆತಂಕದಲ್ಲಿ ಇದ್ದಾರೆ. ಇದೇ ರೀತಿ ವಿಪರೀತ ಬಂಡವಾಳ ಹಾಕಿ ಟೊಮೋಟೊ, ಕ್ಯಾರೇಟ್, ಆಲೂಗೆಡ್ಡೆ, ಈರುಳ್ಳಿ ಇತ್ಯಾದಿ ತರಕಾರಿ, ತೋಟಗಾರಿಕೆಯ ಬೆಳೆ ಬೆಳೆದಿರುವ ರೈತರು ಸುಧಾರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಗಿ, ಟೊಮೋಟೊ ಇತ್ಯಾದಿ ಬೆಳೆ ಬೆಳೆಯಲು ರೈತರು ಹೂಡಿಕೆ ಮಾಡಿರುವ ಕನಿಷ್ಠ ಖರ್ಚುಗಳನ್ನಾದರೂ ನಷ್ಟ ಪರಿಹಾರವಾಗಿ ನೀಡಬೇಕೆಂದು ರೈತ ಸಂಘದ ರಾಜ್ಯ ಸಮಿತಿ ಆಗ್ರಹಿಸುತ್ತದೆ. ಈ ದೆಸೆಯಲ್ಲಿ ಡಿಸೆಂಬರ್, ಜನವರಿ ಯಲ್ಲಿ ಪ್ರಬಲ ಚಳವಳಿಯನ್ನು ಇಡೀ ರಾಜ್ಯಾದ್ಯಂತ ಸಂಘಟಿಸಲಾಗುತ್ತದೆ, ದೆಹಲಿ ರೈತ ಚಳವಳಿಯ ಗೆಲುವಿನ ವಿಶ್ವಾಸದೊಂದಿಗೆ ಈ ಬೇಡಿಕೆಗಳು ಈಡೇರುವವರೆಗೆ ಹೋರಾಟಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಕೋರಿದರು.
ಒಬಿರಾಯನ ಕಾಲದ ನಷ್ಟಪರಿಹಾರದ ನಾಟಕ ನಿಲ್ಲಿಸಿ ಕನಿಷ್ಠ ರಾಜ್ಯ ಸರ್ಕಾರದ ಕೃಷಿ ಬೆಲೆ ಆಯೋಗದ ವರದಿ ಅನ್ವಯವಾದರು ಪರಿಹಾರ ನೀಡಲು ಒತ್ತಾಯ ಮಾಡಿದರು.
ಜಿಲ್ಲಾ ರೈತ ಮುಖಂಡ ಬಿ. ಉಮೇಶ್ ಮಾತನಾಡಿ, ಕೊರೊನಾ ರೋಗ, ಲಾಕ್ ಡೌನ್ ಸಮಸ್ಯೆಗಳಿಂದ ನಿಧಾನವಾಗಿ ಹೊರಬಂದು ಅಪಾರ ಬಂಡವಾಳ ಹೂಡಿಕೆ ಮಾಡಿ ವಿವಿಧ ಬೆಳೆ ಬೆಳೆದಿರುವ ರಾಜ್ಯದ ರೈತನ ಮೇಲೆ ಪ್ರಕೃತಿಯ ವಿಕೋಪದಿಂದ ಉಂಟಾಗಿರುವ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ನೆರವಿನೊಂದಿಗೆ ರೈತರನ್ನು ರಕ್ಷಿಸಲು ಮುಂದಾಗಬೇಕಾಗಿತ್ತು, ಆದರೆ ಸರ್ಕಾರಗಳು ತದ್ವಿರುದ್ಧವಾಗಿ ನಡೆದುಕೊಳ್ಳುವುದು ತೀರಾ ಖಂಡನೀಯ, ಲಕ್ಷ ಲಕ್ಷ ರೂ. ಕಳೆದುಕೊಂಡಿರುವ ರೈತರಿಗೆ ಮಾಮೂಲಿ ರೀತಿಯಲ್ಲಿ ಓಬಿರಾಯನ ಕಾಲದ ಮಾನದಂಡಗಳಿಂದ ಕೂಡಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅನ್ವಯ ಒಣ ಬೇಸಾಯದ ಬೆಳೆಗಳ ಹೆಕ್ಟೇರಿಗೆ 6,800 ರೂ., ನೀರಾವರಿ ಬೆಳೆಗಳ ಹೆಕ್ಟೇರಿಗೆ 13,500 ರೂ. ಹಾಗೂ ತೋಟಗಾರಿಕೆಯ ಬೆಳೆಗಳ ಹೇಕ್ಟೇರಿಗೆ 15,000 ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿವೆ, ಸರ್ಕಾರಗಳ ಈ ರೈತ ವಿರೋಧಿ ನಿಲುವು ಅತ್ಯಂತ ಅಮಾನವೀಯ ಎಂದರು.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಅವೈಜ್ಞಾನಿಕ ಮಾನದಂಡಗಳನ್ನು ಸಂಪೂರ್ಣವಾಗಿ ಪರಿಷ್ಕರಿಸಿ, ಕನಿಷ್ಠ ರೈತರು ಬೆಳೆ ಬೆಳೆಯಲು ಮಾಡಿರುವ ಖರ್ಚಾನ್ನಾದರೂ ನೀಡಬೇಕು, ಇಂತಹ ಬದಲಾವಣೆ ಬರುವವರೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಜೊತೆಗೆ ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೆ ಸಂಬಂಧಿಸಿ ಕೃಷಿ ಬೆಲೆ ಆಯೋಗದ ವರದಿಯನ್ನಾದರೂ ಜಾರಿ ಮಾಡಲು ಅಗತ್ಯವಿರುವ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮುಖಂಡ ಅಜ್ಜಪ್ಪ ಮಾತನಾಡಿ, ರೈತರ ಬೆಳೆ ನಷ್ಟಕ್ಕೆ ಸಂಬಂಧಿಸಿ ಕಂದಾಯ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳು ಪೂರ್ಣ ಸಮೀಕ್ಷೆ ನಡೆಸಬೇಕು. ಇದನ್ನು ಬಿಟ್ಟು ನವೆಂಬರ್ 30, 2021 ರೈತರು ಅರ್ಜಿ ಸಲ್ಲಿಸಲು ಕೊನೆ ದಿನಾಂಕವೆಂದು ಪ್ರಚಾರ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಅರ್ಜಿ ಸಲ್ಲಿಸದಿರುವ ರೈತರ ಬೆಳೆ ನಷ್ಟ ಸಮೀಕ್ಷೆಗಳನ್ನು ಸಂಬಂಧಪಟ್ಟ ಇಲಾಖೆಗಳು ಪೂರ್ಣಗೊಳಿಸಿ ಎಲ್ಲಾ ರೈತರಿಗೆ ನಷ್ಟ ಪರಿಹಾರ ಸಿಗುವ ರೀತಿಯಲ್ಲಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ದೊಡ್ಡ ನಂಜಯ್ಯ, ನರಸಿಂಹಮೂರ್ತಿ, ಕೋದಂಡಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
Get real time updates directly on you device, subscribe now.
Prev Post
Comments are closed.