ಸೋಂಕು ಹರಡುವುದನ್ನು ತಡೆಯಲು ಜಾಗೃತಿ ಅಗತ್ಯ: ಡಿ.ಹೆಚ್.ಓ

ಮಾರಿ ಏಡ್ಸ್ ಬಗ್ಗೆ ಇರಲಿ ಎಚ್ಚರ

156

Get real time updates directly on you device, subscribe now.

ತುಮಕೂರು: ಏಡ್ಸ್ ಗೆ ಚಿಕಿತ್ಸೆಯಾಗಲಿ, ಲಸಿಕೆಯಾಗಲಿ ಇಲ್ಲ, ಜನಜಾಗೃತಿ ಮೂಲಕ ಸೋಂಕು ಹರಡುವುದನ್ನು ತಡೆಯಬೇಕಾಗಿದೆ. ಅಂಕಿ ಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ, ಹೆಚ್‌ಐವಿ ಸೋಂಕಿತ ಗರ್ಭಿಣಿಯಿಂದ ಮಗುವಿಗೆ ತಗುಲುವ ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಹೇಳಿದರು.
ಬುಧವಾರ ನಗರದ ಐಎಂಎ ಸಭಾಂಗಣದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್.ಐ.ವಿ ಸೋಂಕು ಯಾರಿಗೆ, ಹೇಗೆ ಹರಡುತ್ತದೆ. ಅದರ ನಿಯಂತ್ರಣ ಹೇಗೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ, ಇಂತಹ ಜಾಗೃತಿ ಕಾರ್ಯದಿಂದಾಗಿ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶೇಕಡ 0.8ರಿಂದ 0.4ಕ್ಕೆ ಇಳಿಕೆಯಾಗಿ ಅರಿವು ಕಾರ್ಯ ಯಶಸ್ವಿಯಾಗುತ್ತಿದೆ. ಶೂನ್ಯ ಪ್ರಮಾಣಕ್ಕೆ ಇಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಅಸುರಕ್ಷಿತ ಲೈಂಗಿಕ ಕ್ರಿಯೆ, ಸಂಸ್ಕರಿಸದೆ ಬಳಸುವ ಸೂಜಿ, ಸಿರೆಂಜ್‌ ಬಳಸುವುದರಿಂದ, ಸೋಂಕಿತ ರಕ್ತ ಪಡೆಯುವುದರಿಂದ, ಹೆಚ್. ಐ.ವಿ ಸೋಂಕಿತ ತಾಯಿಯಿಂದ ಮಗುವಿಗೆ ಸೋಂಕು ಹರಡುತ್ತದೆ. ಹೆಚ್‌ಐವಿ ಸೋಂಕಿನ ಕೊನೆಯ ಹಂತ ಏಡ್ಸ್, ಹೆಚ್.ಐ.ವಿ ಸೋಂಕು ಪರೀಕ್ಷೆಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಅವಕಾಶವಿದೆ ಎಂದು ಡಾ.ನಾಗೇಂದ್ರಪ್ಪ ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್‌ ಪ್ರಾಸ್ತಾವಿಕ ಮಾತುಗಳನ್ನಾಡಿ, ಪ್ರತಿ ವರ್ಷ ಡಿಸೆಂಬರ್‌ 1 ರಂದು ವಿಶ್ವ ಏಡ್ಸ್ ದಿನ ಆಚರಿಸುವ ಮೂಲಕ ಜನರಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸಿ, ಹರಡುವುದನ್ನು ತಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ, ಅಸಮಾನತೆ ಕೊನೆಗೊಳಿಸಿ, ಏಡ್ಸ್ ಕೊನೆಗೊಳಿಸಿ ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬುದು ಈ ವರ್ಷದ ಘೋಷ ವಾಕ್ಯಎಂದರು.
ಸೋಂಕಿನ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಜಾನಪದ ಕಲಾ ತಂಡಗಳ ಮೂಲಕ ಪ್ರಚಾರ, ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌, ಜಾಹೀರಾತು, ಗುಂಪು ಸಭೆಗಳು, ಕಾರ್ಮಿಕ ವರ್ಗದವರಿಗೆ, ಆಶಾ ಕಾರ್ಯಕರ್ತರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಸನತ್ ಕುಮಾರ್‌ ಹೇಳಿದರು.
ಜಿಲ್ಲೆಯಲ್ಲಿ 18 ಐಸಿಟಿಸಿ ಕೇಂದ್ರಗಳು, 151 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 16 ಖಾಸಗಿ ಸಹಭಾಗಿತ್ವದಲ್ಲಿ ಐಸಿಟಿಸಿ ಸೇವೆ ನೀಡಲಾಗುತ್ತಿದೆ. ನಗರದ ಜಿಲ್ಲಾಸ್ಪತ್ರೆ, ತಿಪಟೂರು, ಶಿರಾ ಆಸ್ಪತ್ರೆ, ನಗರದ ಶ್ರೀದೇವಿ ಮೆಡಿಕಲ್‌ ಕಾಲೇಜು ಎಆರ್‌ಟಿ ಕೇಂದ್ರಗಳು ಕಾರ್ಯಾರಂಭವಾಗಿವೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ತುಮಕೂರು ಐಎಂಎ ಅಧ್ಯಕ್ಷ ಡಾ.ಸಂಜಯ್‌, ಎಸ್‌ಐಟಿ ಪ್ರಾಚಾರ್ಯ ಅರುಣ್‌ಕುಮಾರ್‌, ದಯಾ ಸ್ಪರ್ಶ ಆಸ್ಪತ್ರೆಯ ಜಿನೇಶ್‌ ವರ್ಗಿ, ವೈದ್ಯಾಧಿಕಾರಿಗಳು, ಟ್ಯಾಪ್ರೋ, ಎಆರ್‌ಟಿ, ಎನ್‌ಜಿಓ, ಸಿಬಿಓ, ಬ್ಲಡ್‌ ಬ್ಯಾಂಕ್‌ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೋಂಕು ನಿಯಂತ್ರಣ ಕಾರ್ಯದಲ್ಲಿ ಸಹಕರಿಸುತ್ತಿರುವ ಚಿಕ್ಕನಾಯಕನಹಳ್ಳಿ, ತಿಪಟೂರು ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆ, ರಕ್ತ ಶೇಖರಣಾ ಕೇಂದ್ರ ಘಟಕ, ಇನ್‌-ಕ್ಯಾಪ್‌, ಐಎಂಎ, ದಯಾಭವನ, ಎಸ್‌ಐಟಿ, ವಿದ್ಯಾವಾಹಿನಿ ಕಾಲೇಜು, ಮಧುಗಿರಿಯ ಜಿಎಫ್‌ಜಿಸಿಯ ಮುಖ್ಯಸ್ಥರನ್ನು ಈ ವೇಳೆ ಗೌರವಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಬುಧವಾರ ನಗರದ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರುಕಟ್ಟೆ ಬಳಿ ಜಾಗೃತಿಕೇಂದ್ರ ಸ್ಥಾಪಿಸಲಾಗಿತ್ತು. ಜಾನಪದ ಕಲಾತಂಡಗಳ ಪ್ರದರ್ಶನ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!