ತುಮಕೂರು: ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಕೋಮುವಾದಿ ದ್ವೇಷ ಸಾರುವ, ಸುಳ್ಳು ಆರೋಪ ಹೊರಿಸುವ ಮೂಲಕ ದಾಳಿ ನಡೆಸುವ ದುಷ್ಕೃತ್ಯಗಳು ಹೆಚ್ಚಿದ್ದು, ಇಂತಹ ಕೋಮು ಸಂಘಟನೆಗಳ ಮೇಲೆ ನಿಯಂತ್ರಣ ಹಾಕುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಚರ್ಚ್ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸೈಯದ್ ಮುಜೀಬ್ ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳಿಗೆ ಯಾವುದೇ ಭಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ, ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರುವ ಪುಂಡಾಟಿಕೆ ಗುಂಪುಗಳು ದಾಳಿ ಮಾಡಿ ಹಲ್ಲೆ ನಡೆಸುತ್ತಿದ್ದರು ಸರ್ಕಾರ ಮೌನಕ್ಕೆ ಶರಣಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದಲ್ಲಿಯೇ ತನ್ನಿಚ್ಛೆಯ ಧರ್ಮವನ್ನು ಆಯ್ದುಕೊಳ್ಳುವ ಅವಕಾಶವಿದ್ದರೂ ಸಂವಿಧಾನ ವಿರೋಧಿಯಾಗಿರುವ ಕಾನೂನು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು, ಧರ್ಮ ಸಹಿಷ್ಣುತೆಯನ್ನು ಗಾಳಿಗೆ ತೂರಲಾಗಿದೆ, ದೇಶದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳ ಮೇಲೆ 300ಕ್ಕೂ ಹೆಚ್ಚು ದಾಳಿ ನಡೆಸಿ, ಮತಾಂತರ ತಡೆಯುವ ಹೆಸರಿನಲ್ಲಿ ಥಳಿಸುತ್ತಿರುವುದು ಆತಂಕದ ಸಂಗತಿ ಎಂದರು.
ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಗೋರಕ್ಷಣೆ, ಲವ್ ಜಿಹಾದ್ ಹೆಸರಿನಲ್ಲಿ ಗುಂಪು ಹಿಂಸಾಚಾರ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ, ಗೋಹತ್ಯೆ ಮಾಡಿದರೆ ಪೊಲೀಸರಿಗೆ ದೂರು ನೀಡಲಿ ಅದನ್ನು ಬಿಟ್ಟು, ಹಲ್ಲೆ ನಡೆಸುವಂತಹ ಹೇಯ ಕೃತ್ಯಗಳನ್ನು ಮಾಡುತ್ತಿರುವುದು ಖಂಡನೀಯ, ಇಂತಹ ಸಂಘಟನೆಗಳಿಗೆ ರಾಜಕೀಯ, ಕಾನೂನಿನ ಬೆಂಬಲ ನೀಡುವ ಮೂಲಕ ದಲಿತ, ಮುಸ್ಲಿಂ ಸಮುದಾಯದ ಮೇಲೆ ಹಲ್ಲೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ದೂರಿದರು.
ಎಸ್.ಎಫ್.ಐ ಜಿಲ್ಲಾಧ್ಯಕ್ಷ ಶಿವಣ್ಣ ಮಾತನಾಡಿ, ರಾಜಕೀಯ ಲಾಭಕ್ಕಾಗಿ, ಸುಳ್ಳು ಆರೋಪಗಳನ್ನು ಸೃಷ್ಟಿಸುವ ತಂಡಗಳು ಕೋಮುವಾದಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದೇವೆ. ಇಂತಹ ಘಟನೆಗಳಲ್ಲಿ ಕೋಮುವಾಧಿ ದುಷೃ್ಕತ್ಯ ಎಸಗುತ್ತಿರುವವರು ತಪ್ಪಿಸಿಕೊಂಡು, ಸಂತ್ರಸ್ತರು ಮತ್ತು ಅವರನ್ನು ಬೆಂಬಲಿಸುವವರನ್ನು, ಸುಳ್ಳು ಕೇಸುಗಳಲ್ಲಿ ಸಿಲುಕಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ಸಂವಿಧಾನ ಬದ್ದವಾಗಿ ನಡೆದು ಕೊಳ್ಳ ಬೇಕಾದ ಸರ್ಕಾರ, ಸ್ಥಳೀಯ ಆಡಳಿತ, ಪೊಲೀಸ್ ಇಲಾಖೆಯೂ ಸ್ಥಳೀಯ ಒತ್ತಡಗಳಿಗೆ ಒಳಗಾಗಿ ನಡೆದು ಕೊಂಡು ಗಲಭೆ ಸೃಷ್ಟಿಸಲೆಂದು ಇರುವ ಗುಂಪುಗಳು, ತುಮಕೂರು, ಕೋಲಾರ, ಕೊಡಗು, ಮಂಗಳೂರು ಜಿಲ್ಲೆಗಳಲ್ಲಿ ಇಂತಹ ಪ್ರಕರಣ ನಡೆಸಿದ್ದು, ಇದರಿಂದಾಗಿ ಶಾಂತಿ- ಸೌರ್ಹಾದತೆ ಹಾಳಾಗುತ್ತಿದ್ದು, ಇಂತಹ ಗುಂಪುಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸುಬ್ರಮಣ್ಯ ಮಾತನಾಡಿ, ದೇಶದ ಅಲ್ಪಸಂಖ್ಯಾತರ ಆರ್ಥಿಕ- ಸಾಮಾಜಿಕ ಮತ್ತು ಶೈಕ್ಷಣಿಕ, ರಾಜಕೀಯ ಪರಿಸ್ಥಿತಿಗಳ ಕುರಿತು ಭಾರತ ಸರ್ಕಾರ ನೇಮಿಸಿದ್ದ ಡಾ.ರಾಜೇಂದ್ರ ಸಾಚಾರ್ ಸಮಿತಿಯು ಅಲ್ಪ ಸಂಖ್ಯಾತ ಸಮುದಾಯದ ಶೈಕ್ಷಣಿಕ ಸ್ಥಿತಿ ಅತಿ ಕೆಟ್ಟದಾಗಿದೆ ಎಂಬುದನ್ನು ದಾಖಲೆಗಳ ಸಮೇತ ತನ್ನ ವರದಿಯಲ್ಲಿ ತಿಳಿಸಿದೆ, ಇದರ ಸುಧಾರಣೆಗೆ ಕೆಲಸ ಮಾಡಬೇಕಾದ ಸರ್ಕಾರ, ಮುಸ್ಲಿಂ ಅಲ್ಪ ಸಂಖ್ಯಾತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿರುವುದು ಖಂಡನೀಯ, ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಅಲ್ಪಸಂಖ್ಯಾತರ ಮೇಲಿನ ದಾಳಿ ತಡೆಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕುರನಾ, ಇಂತಿಯಾಜ್, ನಾಗಣ್ಣ, ಜಯಣ್ಣ, ಶಿವಣ್ಣ, ಮುತ್ತುರಾಜು, ಶಂಕರಪ್ಪ, ನಸೀಮಾ ಮುಂತಾದವರು ಭಾಗವಹಿಸಿದ್ದರು.
ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯ
Get real time updates directly on you device, subscribe now.
Comments are closed.