ವ್ಯವಸ್ಥಿತ ಕೌನ್ಸಿಲಿಂಗ್‌ಗೆ ಶಿಕ್ಷಕರ ಸಂಘದ ಮೆಚ್ಚುಗೆ

327

Get real time updates directly on you device, subscribe now.

ತುಮಕೂರು: ನ.29 ರಿಂದ ನಡೆಯುತ್ತಿದ್ದ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‌ಗೆ ತುಮಕೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಹಕಾರ ನೀಡಿದ್ದು, ವ್ಯವಸ್ಥಿತವಾಗಿ ಕೌನ್ಸಿಲಿಂಗ್‌ ಪ್ರಕ್ರಿಯೆ ಹಾಗೂ ಶಿಕ್ಷಕರಿಗೆ ಕೌನ್ಸಿಲಿಂಗ್‌ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತಿದೆ.
ರಾಜ್ಯಾದ್ಯಂತ ಪ್ರಾಥಮಿಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು ಜಿಲ್ಲೆಯ 1238 ಶಿಕ್ಷಕರು ಕೌನ್ಸಿಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ನ.29ರಂದು 300, ನ.30 ರಂದು 400ಕ್ಕೂ ಹೆಚ್ಚು, ಡಿ.1ರಂದು ಉಳಿದ 538 ಶಿಕ್ಷಕರು ಕೌನ್ಸಿಲಿಂಗ್‌ ಮೂಲಕ ವರ್ಗಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಶಿಕ್ಷಕರು ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆ ಆದೇಶವನ್ನು ಸ್ಥಳದಲ್ಲಿಯೇ ನೀಡಲಾಗುತ್ತಿದೆ ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದರು.
ಯಾವುದೇ ಗೊಂದಲವಿಲ್ಲದಂತೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಶಿಕ್ಷಕರ ಸಂಘದ ಸಹಕಾರದಿಂದ ಇಂದು ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಾಳೆಯಿಂದ ಪ್ರೌಢಶಾಲಾ ಶಿಕ್ಷಕರು, ನಿರ್ದಿಷ್ಟ ಹುದ್ದೆ, ದೈಹಿಕ ಶಿಕ್ಷಕ ಹುದ್ದೆಗಳಿಗೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ, ಇದುವರೆಗೂ ಯಾವುದೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್‌.ಪರಶಿವಮೂರ್ತಿ ಮಾತನಾಡಿ, ಕೌನ್ಸಿಲಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಸನ, ಶಾಮಿಯಾನ ವ್ಯವಸ್ಥೆಯನ್ನು ಸಂಘದ ವತಿಯಿಂದ ಕಲ್ಪಿಸಲಾಗಿದ್ದು, ಶಿಕ್ಷಕರಿಗೆ ಮಧ್ಯಾಹ್ನದ ಊಟವನ್ನು ಸಂಘದಿಂದಲೇ ನೀಡಲಾಗುತ್ತಿದ್ದು, ಶಿಕ್ಷಕರಿಗೆ ಕೌನ್ಸಿಲಿಂಗ್ ನಲ್ಲಿ ಯಾವುದೇ ಗೊಂದಲವಾಗದಂತೆ ವರ್ಗಾವಣೆ ಪಡೆಯಲು ಸಂಘದ ವತಿಯಿಂದ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೌನ್ಸಿಲಿಂಗ್‌ ಪ್ರಕ್ರಿಯೆಯಲ್ಲಿ ನೋಡಲ್‌ ಅಧಿಕಾರಿ ಎ.ಟಿ.ರಂಗದಾಸಪ್ಪ, ಇಒ ಮಾಧವರೆಡ್ಡಿ, ತಿಪಟೂರು ತಾಲ್ಲೂಕು ಅಧ್ಯಕ್ಷ ಜಿ.ಆರ್‌.ಜಯರಾಂ, ಜಿಲ್ಲಾ ಖಜಾಂಚಿ ಷಣ್ಮುಖಪ್ಪ, ಗುಬ್ಬಿ ಕಾರ್ಯದರ್ಶಿ ಎನ್‌.ಟಿ.ಪ್ರಕಾಶ್‌, ತಿಪಟೂರು ಕಾರ್ಯದರ್ಶಿ ಪಟ್ಟಾಭಿರಾಮ, ಜಿಲ್ಲಾ ಕಾರ್ಯದರ್ಶಿ ಚಿಕ್ಕಣ್ಣ, ಎಲ್ಲಾ ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!