ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ಸೋಲು ನಿಶ್ಚಿತ: ಡಾ.ಪರಮೇಶ್ವರ್

ಉತ್ಸಾಹಿ ಯುವಕ ರಾಜೇಂದ್ರ ಗೆಲುವು ಖಚಿತ

138

Get real time updates directly on you device, subscribe now.

ತುರುವೇಕೆರೆ: ಜಿಲ್ಲೆಯಾದ್ಯಂತ ಪರಿಚಿತರಾಗಿರುವ ಕಾಂಗ್ರೆಸ್‌ ಪಕ್ಷದ ವಿಧಾನಪರಿಷತ್‌ ಅಭ್ಯರ್ಥಿ ರಾಜೇಂದ್ರ ರಾಜಣ್ಣನವರಿಗೆ ಮತ ಹಾಕಿ ರಾಜೇಂದ್ರ ರಾಜಣ್ಣ ಈ ಬಾರಿ ಗೆಲ್ಲುವುದು ಖಚಿತ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಬಿಜಿಎಸ್‌ ಕಲ್ಯಾಣ ಮಂಟಪದಲ್ಲಿ ಬ್ಲಾಕ್‌ ಕಾಂಗ್ರೇಸ್‌ ವತಿಯಿಂದ ಆಯೋಜಿಸಲಾಗಿದ್ದ ವಿಧಾನಪರಿಷತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಈ ಜಿಲ್ಲೆಗೆ ಹೊಸ ಮುಖಗಳಾಗಿದ್ದು ಹೊಸದಾಗಿ ಪರಿಚಯಿಸಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿರುವ ರಾಜೇಂದ್ರರಾಜಣ್ಣ ಜಿಲ್ಲೆಗೆ ಅತ್ಯಂತ ಪರಿಚಿತರಾಗಿದ್ದಾರೆ. ಪರಿಚಿತರೇ ಅಲ್ಲದ ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ, ನಮ್ಮ ಜಿಲ್ಲೆಯ ಉತ್ಸಾಹಿ ತರುಣ ರಾಜೇಂದ್ರ ರಾಜಣ್ಣನಿಗೆ ಮತ ಹಾಕುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಿರಿ ಎಂದು ಮತದಾರರನ್ನು ವಿನಂತಿಸಿದರು.
ಇಡೀ ರಾಜ್ಯದಲ್ಲಿ ಮಳೆ ಹಾನಿಗೆ ತುತ್ತಾಗಿ ರೈತ ಬೆಳೆದ ಬೆಳೆದ 13 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಜನ, ಜಾನುವಾರು ಸಾವನ್ನಪ್ಪಿದ್ದು, ಮಳೆಯ ತೀವ್ರತೆಯಿಂದ ಮನೆಗಳು ನಾಶವಾಗಿವೆ. ಆದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ನೆರವಿಗೆ ಧಾವಿಸಿಲ್ಲ, ಇಡೀ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸದ ಬಿಜೆಪಿ ಸರಕಾರದ ಸಾಧನೆ ಶೂನ್ಯ ಎಂದರು.
ಕೇಂದ್ರ ಮಾಜಿ ಸಚಿವ ಕೆ.ಹೆಚ್‌.ಮುನಿಯಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಜನವಿರೋಧಿ ಸರಕಾರಗಳು ಆಡಳಿತ ನಡೆಸುತ್ತಿವೆ, ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿಸುವ ಮೂಲಕ ಶ್ರೀಸಾಮಾನ್ಯನ ಬದುಕನ್ನು ಸಂಕಷ್ಟಕ್ಕೆ ದೂಡಿವೆ. ದೇಶದ ಬೆನ್ನೆಲುಬಾದ ರೈತನ ಹಿತ ಕಾಯದ ಕೇಂದ್ರ ಸರಕಾರ ಪಂಚರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಕೃಷಿ ಕಾಯಿದೆಗಳನ್ನು ವಾಪಸ್‌ ಪಡೆಯುವ ಗಿಮಿಕ್‌ ಮಾಡಿದೆ, ಸದ್ಯ ಎದುರಾಗಿರುವ ವಿಧಾನಪರಿಷತ್‌ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರಾಜೇಂದ್ರ ರಾಜಣ್ಣನವರಿಗೆ ಮತ ಹಾಕುವ ಮೂಲಕ ಬಿಜೆಪಿಯ ದುರಾಡಳಿತಕ್ಕೆ ತಕ್ಕ ಉತ್ತರ ನೀಡಿ ಎಂದರು.
ಮಾಜಿ ಸಚಿವ ಜಯಚಂದ್ರ ಮಾತನಾಡಿ, ಮುಂಬರುವ ದಿನಗಳಲ್ಲಿ ಬರುವ ಚುನಾವಣೆಗೆ ವಿಧಾನ ಪರಿಷತ್‌ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಜನವಿರೋಧಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಗಳಿಗೆ ತಕ್ಕ ಉತ್ತರ ನೀಡಲು ವಿಧಾನಪರಿಷತ್‌ ಚುನಾವಣೆ ಸಕಾಲವಾಗಿದೆ. ಈ ಬಾರಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜೇಂದ್ರರಿಗೆ ಮತಹಾಕಿ ಗೆಲ್ಲಿಸುವ ಮೂಲಕ ಬಿಜೆಪಿ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿ ಎಂದರು.
ವಿಧಾನಪರಿಷತ್‌ ಅಭ್ಯರ್ಥಿ ರಾಜೇಂದ್ರರಾಜಣ್ಣ ಮಾತನಾಡಿ, ನಾನು ಈ ಹಿಂದೆ ಕೂಡ ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದೆ. ಈ ಬಾರಿ ಪಕ್ಷವು ನನ್ನ ಮೇಲೆ ಭರವಸೆಯಿಟ್ಟು ಕಣಕ್ಕಿಳಿಸಿದೆ. ಮತದಾರ ಬಂಧುಗಳು ನನಗೆ ಹೆಚ್ಚಿನ ಮತ ನೀಡುವ ಮೂಲಕ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕರಾದ ಷಫಿ ಅಹಮದ್‌, ರಾಜ್ಯ ಮಹಿಳಾ ಕಾಂಗ್ರೆಸ್ ನ ಗೀತಾ ರಾಜಣ್ಣ, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್‌.ವಸಂತಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪ್ರಸನ್ನಕುಮಾರ್‌, ನಾಗೇಶ್‌, ಹಿರಿಯ ಕಾಂಗ್ರೆಸ್ಸಿಗ ಚೌದ್ರಿರಂಗಪ್ಪ, ಮುಖಂಡರಾದ ಸುಬ್ರಹ್ಮಣ್ಯ ಶ್ರೀಕಂಠೇಗೌಡ, ವಾಲೇಚಂದ್ರು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!