ಜೆಡಿಎಸ್‌ ಅಭ್ಯರ್ಥಿ ಅನಿಲ್ ಕುಮಾರ್‌ ಪರ ಮತ ಯಾಚನೆ

ಗುಬ್ಬಿಗೆ ದೇವೇಗೌಡರ ಭೇಟಿ

350

Get real time updates directly on you device, subscribe now.

ಗುಬ್ಬಿ: ಅಧಿಕಾರ ವಿಕೇಂದ್ರೀಕರಣದ ಮೂಲಕ ಗ್ರಾಮ ಪಂಚಾಯಿತಿಗೆ ಶಕ್ತಿ ತುಂಬಿಕೊಟ್ಟ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಡಿಸೆಂಬರ್‌ 3 ರಂದು ಗುಬ್ಬಿಯಲ್ಲಿ ವಿಧಾನ ಪರಿಷತ್‌ ಚುನಾವಣಾ ಜೆಡಿಎಸ್‌ ಅಭ್ಯರ್ಥಿ ಆರ್‌.ಅನಿಲ್‌ ಪರ ಮತಯಾಚನೆ ಮಾಡಲಿದ್ದಾರೆ ಎಂದು ಜೆಡಿಎಸ್‌ ಮುಖಂಡ ಬಿ.ಎಸ್‌.ನಾಗರಾಜು ತಿಳಿಸಿದರು.
ಪಟ್ಟಣದ ಸುಭಾಷ್ ನಗರ ಬಡಾವಣೆಯ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಹೊರ ವಲಯದ ಹೇರೂರು ಗ್ರಾಮದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11 ಕ್ಕೆ ನಡೆಯುವ ಪ್ರಚಾರ ಸಭೆಯಲ್ಲಿ ಎಲ್ಲಾ ಗ್ರಾಪಂ ಸದಸ್ಯರು ಮತ್ತು ಪಪಂ ಸದಸ್ಯರು ಭಾಗವಹಿಸಲಿದ್ದಾರೆ. ಈ ಜೊತೆಗೆ ಜಿಲ್ಲೆಯ ಜೆಡಿಎಸ್‌ ಪಕ್ಷದ ಎಲ್ಲಾ ಪ್ರಮುಖರು ಆಗಮಿಸಿ ಅಭ್ಯರ್ಥಿ ಅನಿಲ್‌ ಪರ ಮತಯಾಚನೆ ಮಾಡಲಿದ್ದಾರೆ ಎಂದರು.
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಪ್ರವಾಸ ನಡೆಸಲಾಗಿದೆ. ಎಲ್ಲಡೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಜೆಡಿಎಸ್‌ ಪಕ್ಷದ ಮೇಲಿನ ಒಲವು ಗ್ರಾಪಂ ಸದಸ್ಯರಲ್ಲಿ ಕಂಡಿದೆ. ದೇವೇಗೌಡರು ಈ ಹಿಂದೆ ಗ್ರಾಮೀಣ ಭಾಗಕ್ಕೆ ನೀಡಿದ ಅಧಿಕಾರದಿಂದ ಇಂದು ಎಲ್ಲಾ ಸದಸ್ಯರು ಜನಸೇವೆ ನಡೆಸಿದ್ದಾರೆ. ಜಾತಿ ಮೀಸಲು ಮೂಲಕ ಅಧಿಕಾರವನ್ನು ಎಲ್ಲಾ ವರ್ಗಕ್ಕೂ ಹಂಚಿ ಜಾತ್ಯತೀತ ನಿಲುವು ತಾಳಿದ್ದರ ಫಲ ಇಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಪಂ ಸದಸ್ಯರು ಪ್ರಾದೇಶಿಕ ಪಕ್ಷ ಜೆಡಿಎಸ್‌ ಬೆಂಬಲಿಸಿ ನಮ್ಮಅಭ್ಯರ್ಥಿ ಅನಿಲ್‌ ಅವರನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್‌ ಮಾತನಾಡಿ ರಾಷ್ಟ್ರೀಯ ಪಕ್ಷಗಳು ಗ್ರಾಮೀಣ ಭಾಗಕ್ಕೆ ಅನ್ಯಾಯ ಮಾಡಿವೆ. ಬೇಸತ್ತ ಗ್ರಾಪಂ ಸದಸ್ಯರು ಪ್ರಾದೇಶಿಕ ಪಕ್ಷ ಜೆಡಿಎಸ್‌ ಬೆಂಬಲಿಸಲಿದ್ದಾರೆ. 512 ಮತಗಳ ಗುಬ್ಬಿ ವಿಧಾನಸಭಾ ಕ್ಷೇತ್ರ ಮತ್ತು 112 ಮತಗಳ ತುರುವೇಕೆರೆ ಕ್ಷೇತ್ರಕ್ಕೆ ಸೇರಿದ ನಮ್ಮ ತಾಲ್ಲೂಕಿನ ಮತದಾರರನ್ನು ಸಂಪರ್ಕಿಸಿದ್ದೇವೆ. ಉತ್ತಮ ಅಭ್ಯರ್ಥಿ ಆಯ್ಕೆ ಬಗ್ಗೆ ಸಹಮತ ದೊರೆಕಿದೆ. ಸುಸಂಸ್ಕೃತ ಕುಟುಂಬದ ಅನಿಲ್‌ ಅವರು ವಿದ್ಯಾವಂತರು ಎಂಬುದು ಸದಸ್ಯರಿಗೆ ತಿಳಿದಿದೆ. ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿಗಳು ಶುಕ್ರವಾರ ಗುಬ್ಬಿಗೆ ಭೇಟಿ ನೀಡಿ ಅನಿಲ್‌ ಪರ ಮತ ಕೇಳಲಿದ್ದಾರೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಜಿ.ರಾಮಾಂಜಿನಪ್ಪ ಮಾತನಾಡಿ, ಒಂದು ಚೌಕಟ್ಟಿನ ಸರ್ಕಾರಿ ಸೇವೆಯು ಜನ ಸೇವೆಗೆ ಕಷ್ಟ ಎಂದು ತಿಳಿದು ಸೇವೆಯಿಂದ ಹೊರ ಬಂದು ರಾಜಕಾರಣ ಮೂಲಕ ಗ್ರಾಮೀಣ ಜನರ ಕಷ್ಟ ಸುಖಕ್ಕೆ ಸ್ಪಂದಿಸಲು ಅನಿಲ್‌ ಸಜ್ಜಾಗಿದ್ದಾರೆ. ಈ ಹಿಂದೆ ಗುಬ್ಬಿಯಲ್ಲಿ ತಹಸೀಲ್ದಾರ್‌ ಆಗಿ ಕೆಲಸ ಮಾಡಿದ್ದ ಅನಿಲ್‌ ಅವರು ಇಡೀ ತಾಲ್ಲೂಕಿಗೆ ಚಿರಪರಿಚಿತರು. ಈ ನಿಟ್ಟಿನಲ್ಲಿ ತಾಲ್ಲೂಕಿನ ಗ್ರಾಪಂ ಸದಸ್ಯರು ಒಲವು ತೋರಿದ್ದಾರೆ. ಈ ಜೊತೆಗೆ ಜೆಡಿಎಸ್‌ ಸಿದ್ಧಾಂತ ಮತದಾರರು ತಿಳಿದಿದ್ದಾರೆ. ವರಿಷ್ಠ ದೇವೇಗೌಡರು ತಾಲ್ಲೂಕಿನಲ್ಲಿ ನಡೆಸುವ ಮತಯಾಚನೆ ಮತ್ತಷ್ಟು ವಿಶ್ವಾಸ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್‌ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಎಂ.ಗಂಗಣ್ಣ, ಶಿವಣ್ಣ, ಯತೀಶ್‌, ಗೋಪಾಲಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!