ಉಜ್ವಲ ಭವಿಷ್ಯಕ್ಕೆ ಗುಣಮಟ್ಟದ ಶಿಕ್ಷಣವೇ ಬುನಾದಿ

149

Get real time updates directly on you device, subscribe now.

ಮಧುಗಿರಿ: ವಿದ್ಯಾರ್ಥಿಗಳು ಬಾಲ್ಯಾವಸ್ಥೆಯಿಂದಲೇ ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಣ ಪಡೆಯಲು ಇರುವ ಸಮಸ್ಯೆಗಳನ್ನು ಮೀರಿ, ಶಿಕ್ಷಣ ಪಡೆಯಬೇಕು. ಸರ್ಕಾರ ಎಲ್ಲ ವರ್ಗದವರಿಗೂ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಆದುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿನ ಸವಲತ್ತು ಬಳಸಿಕೊಳ್ಳಬೇಕು. ತಮ್ಮ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣವನ್ನೇ ಬುನಾದಿಯಾಗಿಸಿಕೊಂಡು ಸತ್ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಎಸ್‌.ಬಿ.ಅಪ್ಪಾಜಿಗೌಡ ಕರೆ ನೀಡಿದರು.
ತಾಲೂಕಿನ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಓರಿಯೆಂಟೇಷನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರ್ಕಾರಿ ಕಾಲೇಜುಗಳು ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆಗಳಿಸಿದ್ದು, ತಂತ್ರಜ್ಞಾನಾಧಾರಿತ ಶಿಕ್ಷಣ ನೀಡುತ್ತಿವೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸನ್ನದ್ದಗೊಳಿಸುತ್ತಿವೆ. ಕಾಲೇಜು ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಎಲ್‌ಎಂಎಸ್‌ ತಂತ್ರಾಂಶ ಬಳಸಿ ಪಠ್ಯವಿಷಯಗಳನ್ನು ಸಿದ್ಧಪಡಿಸಿದ್ದು, ಎಲ್ಲಾ ವಿಷಯಗಳ ಅಧ್ಯಯನ ಸಾಮಗ್ರಿ, ಬಹು ಆಯ್ಕೆ ಪ್ರಶ್ನಾವಳಿ, ಪಿಪಿಟಿಗಳನ್ನು ಅನುಭವಿ ಅಧ್ಯಾಪಕರಿಂದ ಸಿದ್ಧಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಿದೆ. ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್‌, ಟ್ಯಾಬ್‌ಗಳನ್ನು ವಿತರಿಸಿದ್ದು, ಎಲ್ಲಾ ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್‌ ರೂಂ ಸ್ಥಾಪಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ವೈಫೈ ಕಲ್ಪಿಸಿದ್ದು ಅವರ ಕಲಿಕೆಗೆ ಪೂರಕವಾಗಿದೆ. ಪ್ರಸಕ್ತ ವರ್ಷದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪದವಿ ತರಗತಿಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿ ಆಯ್ಕೆಯ ವಿಷಯ ಕಲಿಯಲು ಮುಕ್ತ ಅವಕಾಶವಿದೆ. ಮುಂಬರುವ ದಿನಗಳಲ್ಲಿ ಶೈಕ್ಷಣಿಕ ಕ್ರಾಂತಿಯುಂಟಾಗಿ ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿಯಾಗಲಿದೆ. ಆದುದರಿಂದ ಎಲ್ಲ ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಭವ್ಯಭಾರತ ನಿರ್ಮಾಣದಲ್ಲಿ ಪಾಲು ಪಡೆಯಬೇಕೆಂದರು.
ಕಾಲೇಜು ಶಿಕ್ಷಣ ಪ್ರಾದೇಶಿಕ ಕಚೇರಿಯ ವಿಶೇಷಾಧಿಕಾರಿ ಡಾ.ವೈ.ರಮೇಶ್‌ ಮಾತನಾಡಿ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ ಮತ್ತು ಗುರಿ ತಲುಪಿಸಲು ಸಹಕರಿಸುವ ಗುರು ಇರಬೇಕು. ಅತ್ಯಮೂಲ್ಯವಾದ ಸಮಯ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣವೇ ಆಸ್ತಿ, ಶಿಕ್ಷಣ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ, ಬಡವಿದ್ಯಾರ್ಥಿಗಳಿಗೆ ಸರ್ಕಾರ ವಿವಿಧ ರೀತಿಯ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ಹಾಸ್ಟೆಲ್‌ ಸೌಲಭ್ಯ, ಉಚಿತ ಬಸ್‌ ಪಾಸ್‌, ಲ್ಯಾಪ್ ಟಾಪ್‌ ಮತ್ತಿತರ ಸವಲತ್ತು ನೀಡಿ ಗ್ರಾಮೀಣ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದೆ, ಉನ್ನತ ಶಿಕ್ಷಣದ ಹೆಬ್ಬಾಗಿಲಾದ ಪದವಿ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡಲು ಸಜ್ಜಾಗಿದ್ದು, ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದ ಜ್ಞಾನ ನೀಡುತ್ತಿವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮಗ್ನರಾಗಿ ಗುರು ಹಿರಿಯರಿಗೆ ಗೌರವ ನೀಡಿ, ತಂದೆ ತಾಯಿಗಳ ಆಶೋತ್ತರಗಳನ್ನು ಈಡೇರಿಸಬೇಕು. ಮಾನವೀಯ ಸಂಬಂಧಗಳನ್ನು ಬೆಸೆಯುವ ಶಿಕ್ಷಣ ಪಡೆದು ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದರು.
ಪ್ರಾಂಶುಪಾಲ ಟಿ.ಎನ್‌.ನರಸಿಂಹಮೂರ್ತಿ ಮಾತನಾಡಿ, ಜಗತ್ತಿನ ಸಕಲ ಜೀವರಾಶಿಗಳಲ್ಲಿ ಮಾನವನಿಗೆ ಮಾತ್ರ ಶಿಕ್ಷಣ ಪಡೆಯುವ ಅವಕಾಶವಿದ್ದು, ಮನಸ್ಸನ್ನು ಪಳಗಿಸುವ ಶಿಕ್ಷಣದಿಂದ ಉನ್ನತ ಸ್ಥಾನಕ್ಕೇರಬಹುದು. ಜ್ಞಾನ ವಿಕಾಸದಿಂದ ಮೇರು ವ್ಯಕ್ತಿತ್ವ ನಿರ್ಮಾಣ ಸಾಧ್ಯ, ವಿದ್ಯಾರ್ಥಿ ದೆಸೆಯಿಂದಲೇ ಅಧ್ಯಯನದಲ್ಲಿ ಮಗ್ನರಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಉದ್ಯೋಗ ಗಳಿಸಬಹುದು. ಸರ್ಕಾರಿ ಕಾಲೇಜುಗಳು ಶಿಕ್ಷಣ ನೀಡಲು ಮುಂದಾಳತ್ವ ವಹಿಸಿದ್ದು, ಲಕ್ಷಾಂತರ ಯುವಜನರು ಪ್ರತಿವರ್ಷ ಪದವಿಗಳಿಸುತ್ತಿದ್ದಾರೆ. ಪ್ರತಿ ಕಾಲೇಜಿನಲ್ಲಿಯೂ ಎನ್‌ಎಸ್‌ಎಸ್‌, ಯುವರೆಡ್‌ ಕ್ರಾಸ್‌, ಉದ್ಯೋಗ ಮಾರ್ಗದರ್ಶನ ಕೇಂದ್ರ, ಆಪ್ತ ಸಮಾಲೋಚನ ಕೇಂದ್ರಗಳು ವಿದ್ಯಾರ್ಥಿಗಳ ಸೇವೆಗೆ ಲಭ್ಯವಿದೆ ಎಂದರು.
ಸಮಾರಂಭದಲ್ಲಿ ಪ್ರಾದೇಶಿಕ ಕಾಲೇಜು ಶಿಕ್ಷಣ ಲೆಕ್ಕಾಧಿಕಾರಿ ಬಾಲಕೃಷ್ಣ, ಸಹಾಯಕ ಪ್ರಾಧ್ಯಾಪಕ ಸತೀಶ್‌, ಪತ್ರಕರ್ತ ಅಂಜಿನಪ್ಪ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!