ಗೋಪಾಲನಹಳ್ಳಿಯಲ್ಲಿ ಪಶು ಅಧಿಕಾರಿಗಳ ವಾಸ್ತವ್ಯ

150

Get real time updates directly on you device, subscribe now.

ಹುಳಿಯಾರು: ಶೆಟ್ಟಿಕೆರೆ ಹೋಬಳಿಯ ಗೋಪಾಲನಹಳ್ಳಿ ಗ್ರಾಮದಲ್ಲಿ ಚಿಕ್ಕನಾಯಕನಹಳ್ಳಿ ಪಶುಪಾಲನಾ ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಗೋಪಾಲನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೆ.ಮ.ನಾಗಭೂಷಣ ಭಾಗವಹಿಸಿ ಮಾತನಾಡಿ ಹೈನುಗಾರಿಕೆ ನಿರ್ವಹಣೆ ಕುರಿತು ಮಾತನಾಡಿ ಕರುಗಳ ಪಾಲನೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಲಾಭದಾಯ ಪಶುಪಾಲನೆಯಲ್ಲಿ ಹಸಿರು ಮೇವಿನ ಪಾತ್ರ ವಿಚಾರಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ವರ್ಷಕ್ಕೊಂದು ಕರು ಎಂಬ ಧೈಯವನ್ನು ರೈತರು ಮನಸ್ಸಿನಲ್ಲಿ ಇಟ್ಟುಕೊಂಡು ಸರಿಯಾದ ನಿರ್ವಹಣೆ ಮಾಡಿದಾಗ ಮಾತ್ರ ಹೈನುಗಾರಿಕೆಯಲ್ಲಿ ಲಾಭ ನೋಡಬಹುದು. ಜಂತು ನಿವಾರಣ ಔಷಧಿಯನ್ನು ಸಕಾಲದಲ್ಲಿ ಕುಡಿಸುವುದು, ಸಕಾಲದಲ್ಲಿ ಲಸಿಕೆ ಹಾಕಿಸುವುದು ಮುಂತಾದ ಕ್ರಮಗಳನ್ನು ವೈಜ್ಞಾನಿಕವಾಗಿ ಅನುಸರಿಸುವುದರಿಂದ ಇಂದಿನ ಕರುವನ್ನು ನಾಳಿನ ಕಾಮಧೇನುವನ್ನಾಗಿ ಮಾಡಬಹುದು ಎಂದರು.
ಕಿರಿ ಪಶುವೈದ್ಯಕೀಯ ಪರೀಕ್ಷಕರಾದ ಚಂದ್ರಶೇಖರ್‌ ಹೆಚ್‌.ಎಸ್‌. ನೇತೃತ್ವದಲ್ಲಿ 50 ಕರುಗಳಿಗೆ ಜಂತುನಾಶಕ ಔಷಧಿ ಕುಡಿ ಬೆಳವಣಿಗೆಗೆ ಪೂರಕ ಚುಚ್ಚುಮದ್ದು ನೀಡಿ ಆರೋಗ್ಯ ವರ್ಧನೆಯ ಟಾನಿಕ್‌ ನೀಡಲಾಯಿತು. ಕುರಿ, ಮೇಕೆಗಳಿಗೆ ಜಂತುನಾಶಕ ಔಷಧಿ ವಿತರಿಸಲಾಯಿತು. ರಾತ್ರಿ ಊಟದ ನಂತರ ಸರ್ಕಾರಿ ಪ್ರಾಥಮಿಕ ಶಾಲೆಯ ವಾಸ್ತವ್ಯ ಮಾಡಲಾಯಿತು.
ಬೆಳಗ್ಗೆ ಶೆಟ್ಟಿಕೆರೆ ಹಿರಿಯ ಪಶುವೈದ್ಯಾಧಿಕಾರಿ ಡಾ.ಅಶೋಕ್‌ ನೇತೃತ್ವದಲ್ಲಿ 218 ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ, 24 ಜಾನುವಾರುಗಳಿಗೆ ಸಾಮಾನ್ಯ ತೊಂದರೆಗಳಿಗೆ ಚಿಕಿತ್ಸೆ ನೀಡಲಾಯಿತು. ದೊಡ್ಡ ಅಗ್ರಹಾರ ಪಶುವೈದ್ಯಾಧಿಕಾರಿ ಡಾ.ಮಹಾಲಿಂಗೇಶ 38 ಬರಡು ರಾಸುಗಳಿಗೆ ಚಿಕಿತ್ಸೆ ಮತ್ತು 18 ಜಾನುವಾರುಗಳ ಗರ್ಭಪರೀಕ್ಷೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಾನುವಾರು ಅಧಿಕಾರಿ ಷಡಾಕ್ಷರಿ, ಪಶು ವೈದ್ಯಕೀಯ ಪರೀಕ್ಷಕ ಚಂದ್ರಶೇಖರ್‌ ಹೆಚ್‌.ಎಸ್‌, ಸಿಬ್ಬಂದಿ ಅತಾವುಲ್ಲಾ, ದಯಾನಂದ, ಕುಮಾರಸ್ವಾಮಿ ಸಿದ್ದೇಶ, ಅತೀಕ, ಗೋಪಾಲನಹಳ್ಳಿ ಗ್ರಾಮದ ಗ್ರಾಪಂ ಸದಸ್ಯರಾದ ಅಂಬಿಕಾ, ಎಂಪಿಸಿಎಸ್‌ ಅಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ತ್ರಿನೇಶ, ಸಿದ್ಧರಾಮಯ್ಯ, ಚಿಕ್ಕಬಸವಯ್ಯ ಯಶವಂತ, ಚಂದ್ರಶೇಖರ, ಶಿವರುದ್ರಯ್ಯ, ಸಂತೋಷ, ಮಲ್ಲಿಕಾರ್ಜುನ, ರಂಗಸ್ವಾಮಿ ಮುಂತಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!