ಸ್ವಾರ್ಥ ಬಿಟ್ಟಾಗ ನೆಮ್ಮದಿ ಸಾಧ್ಯ: ಚುಂಚನಗಿರಿ ಶ್ರೀ

202

Get real time updates directly on you device, subscribe now.

ತಿಪಟೂರು: ಮಾನವ ಜೀವನದಲ್ಲಿ ಎಲ್ಲವೂ ತನ್ನದೇ ಎನ್ನುವ ಸ್ವಾರ್ಥ ಬಿಟ್ಟು ಭಕ್ತಿ ಮಾರ್ಗದಲ್ಲಿ ಸಾಗಿದಾಗ ಮಾತ್ರವೇ ಸುಖ, ಶಾಂತಿ, ನೆಮ್ಮದಿ ಕಾಣುತ್ತಾನೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ದಸರಿಘಟ್ಟದ ಕೆರೆಗೆ ಉತ್ತಮ ಮಳೆ ಹಾಗೂ ಹೇಮವತಿ ನಾಲೆಯಿಂದ ಏತ ನೀರಾವರಿಯ ಮೂಲಕ ತುಂಬಿದ ಹಿನ್ನಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ತೆಪ್ಪೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ಇರುವುದೆಲ್ಲವನ್ನು ಮನುಷ್ಯ ತನ್ನದೆಂದು ಭಾವಿಸುತ್ತಾನೆ. ಆದರೆ ಉಸಿರಾಡುವ ಗಾಳಿ, ಇರುವ ನೆಲ, ಬೆಳಕು, ಹರಿವ ಜಲ ಇವ್ಯಾವುದು ಮನುಷ್ಯನದಲ್ಲ, ಅವೆಲ್ಲವೂ ಸೃಷ್ಟಿಕರ್ತ ಭಗವಂತನದ್ದು, ಎಲ್ಲದನ್ನೂ ನನ್ನದು ಎನ್ನುವ ಸ್ವಾರ್ಥ ಬಿಟ್ಟು ಭಕ್ತರು ನಿಸ್ವಾರ್ಥ ಮನಸ್ಸಿನಿಂದ ಭಗವಂತನಲ್ಲಿ ಲೀನವಾಗಬೇಕು, ಪ್ರಕೃತಿಯ ಪಂಚಭೂತದಲ್ಲಿ ಪ್ರಧಾನವಾಗಿರುವುದು ನೀರು, ಜಗದ ಕೊಳೆಯ ತೊಳೆಯುವ ಪಾವನ ದ್ರವ್ಯ ನೀರಾಗಿದ್ದು, ಅತ್ಯಮೂಲ್ಯವಾಗಿದೆ, ನೀರು ಇಲ್ಲವೆಂದರೆ ಅಂತರಂಗ ಬಹಿರಂಗಗಳೆರಡು ಶುದ್ಧವಾಗಿರಲು ಸಾಧ್ಯವಿಲ್ಲ, ಅಂತಹ ನೀರನ್ನು ಸಂರಕ್ಷಿಸಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಬೇಕಿದೆ ಎಂದರು.
ಸುಖ ಬಂದಾಗ ದೇವರನ್ನು ಮರೆಯುವ ಜನರು ಕಷ್ಟದಲ್ಲಿ ಮಾತ್ರ ದೇವರ ಮೊರೆಗೆ ಹೋಗುತ್ತಾರೆ. ಆದರೆ ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು, ಮನುಷ್ಯನಲ್ಲಿ ಕಷ್ಟಕಾರ್ಪಣ್ಯ ದೂರವಾಗಲು ಭಗವಂತನ ನಾಮಸ್ಮರಣೆ ಅತಿಮುಖ್ಯವಾಗಿದೆ. ಹಿರಿಯರಲ್ಲಿ ಗೌರವ, ಗುರುಗಳಲ್ಲಿ ಭಕ್ತಿ ಭಾವ ಬೆಳೆಸಿಕೊಂಡು ಇಳಿವಯಸ್ಸಿನ ತಂದೆ- ತಾಯಿಗಳಿಗೆ ಆಸರೆಯಾಗಿರುತ್ತಿದ್ದರು, ನಾಗರಿಕತೆ ಬೆಳೆದಂತೆ ಜೀವನ ಶೈಲಿ ಬದಲಾಗಿ ಕುಟುಂಬಗಳು ಒಡೆದು ನೆಮ್ಮದಿ ಕಳೆದುಕೊಂಡು ನರಳಾಡುತ್ತಿದ್ದಾರೆ, ಮಾನವೀಯತೆ ಮತ್ತು ಜೀವನ ಮೌಲ್ಯಗಳು ಮಾಯವಾಗುತ್ತಿವೆ, ಆದುದರಿಂದ ನಾವೆಲ್ಲರೂ ದೇವರು, ಧರ್ಮ, ಆಚಾರ, ನೈತಿಕತೆಗಳಲ್ಲಿ ನಂಬಿಕೆಯಿರಿಸಿ, ಪೂಜೆ, ಪ್ರಾರ್ಥನೆಗಳಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಚ್ಛಾರಿತ್ರ್ಯವುಳ್ಳವರಾಗಬೇಕು, ಅಂತರಂಗ, ಬಹಿರಂಗ ಗಳೆರಡರಲ್ಲೂ ಪರಿಶುದ್ಧತೆ ಕಂಡುಕೊಂಡು ಭೇದಗಳನ್ನು ಮರೆತು ಒಂದೇ ಕುಟುಂಬದವರಂತೆ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸಿ ಜೀವನದಲ್ಲಿ ಮುಕ್ತಿ ಕಂಡುಕೊಳ್ಳಬೇಕು. ಪರೋಪಕಾರ, ಸಮಾಜ ಸೇವೆಗಳಂತಹ ಸತ್ಕಾರ್ಯಗಳಲ್ಲಿ ಸಕ್ರಿಯರಾಗಿ ಸಾರ್ಥಕ್ಯ ಕಂಡುಕೊಂಡು ಭಗವಂತನ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದಸರಿಘಟ್ಟ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಮಂಗಳೂರಿನ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ, ಕಬ್ಬಳ್ಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ, ಹುಳಿಮಾವು ಶಾಖಾ ಶ್ರೀಶೈಲನಾಥ ಸ್ವಾಮೀಜಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಷಡಕ್ಷರಿ, ಮುಖಂಡ ಜಕ್ಕನನಹಳ್ಳಿ ಲಿಂಗರಾಜು, ಶ್ರೀರಂಗ ಆಸ್ಪತ್ರೆಯ ಡಾ.ವಿವೇಚನ್‌, ಬೆಂಗಳೂರಿನ ಅಭಿಯಂತರ ಬಾಲಕೃಷ್ಣ, ದೇವಾಲಯದ ಗುಡಿಗೌಡರು, ಗ್ರಾಮಸ್ಥರು ಇದ್ದರು.

Get real time updates directly on you device, subscribe now.

Comments are closed.

error: Content is protected !!