ನನಗೆ ಅವಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಿ: ದೇವೇಗೌಡ

ನನಗೆ ವಯಸ್ಸಾಗಿದೆ, ಶಕ್ತಿ ಕುಂದಿಲ್ಲ

399

Get real time updates directly on you device, subscribe now.

ಗುಬ್ಬಿ: ನನಗೆ 90 ವರ್ಷ ಆಗಿರಬಹುದು, ಆದರೆ ಪಕ್ಷ ಕಟ್ಟಲು ಯಾವುದೇ ರೀತಿಯ ಶಕ್ತಿಯೂ ಕುಂದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದರು.
ಪಟ್ಟಣದ ಹೊರವಲಯದ ಹೇರೂರು ಗ್ರಾಮದ ಶ್ರೀಬಾಲಾಜಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ ಆಯೋಜಿಸಿದ್ದ ವಿಧಾನ ಪರಿಷತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯ ಒದಗಿಸುವ ಜೆಡಿಎಸ್‌ ಪಕ್ಷ ಇಂದಿಗೂ ಜಾತ್ಯತೀತ ನಿಲುವು ತಾಳಿದ ಸಮುದಾಯಗಳನ್ನು ಒಡೆದು ಆಳುವ ತಂತ್ರ ಬಳಸಿ ನನಗೆ ಅವಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು, ಚುನಾವಣೆಯಲ್ಲಿ ಗೆಲುವು ಮತ್ತು ಸೋಲು ಸಾಮಾನ್ಯವಾಗಿ ನಾನು ಅನುಭವಿಸುತ್ತಾ ಬಂದಿದ್ದೇನೆ, ಆದರೆ ನನ್ನನ್ನು ನಂಬಿ ಬಂದಿರುವಂತಹ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಜಯ ತಂದು ಕೊಡಬೇಕು ಎಂಬುದು ನನ್ನ ಹಂಬಲವಾಗಿದೆ, ಇಡೀ ರಾಜ್ಯದಲ್ಲಿರುವ ರೈತರ ಪರವಾಗಿ ಕೆಲಸ ಮಾಡುವ ಪಕ್ಷ ಎಂದರೆ ಅದು ನಮ್ಮ ಜೆಡಿಎಸ್‌ ಎಂಬುದನ್ನು ನೀವು ಮರೆಯಬಾರದು, ನೀರಾವರಿಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಹ ನಾನು ಇಳಿ ವಯಸ್ಸಿನಲ್ಲೂ ಕೂಡ ರಾಜ್ಯದ ಬಗ್ಗೆ ದೇಶದ ಬಗ್ಗೆ ಚಿಂತನೆ ಎಂದ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ಮತ್ತೆ ಹೋರಾಟದ ಮೂಲಕ ಪಕ್ಷವನ್ನು ಸದೃಢಗೊಳಿಸುತ್ತೇವೆ ನಮ್ಮನ್ನು ತುಳಿಯಲು ಮುಂದಾದವರಿಗೆ ತಕ್ಕ ಪಾಠ ಕಲಿಸಲು ಕಾರ್ಯಕರ್ತರು ಸಜ್ಜಾಗಬೇಕು ಇದು ನನ್ನ ಆವೇಶದ ನುಡಿಯಲ್ಲ ನೋವಿನ ನಿವೇದನೆ ಎಂದು ಮತ್ತೊಮ್ಮೆ ಕೈ ಮುಗಿದು ಜೆಡಿಎಸ್‌ ಅಭ್ಯರ್ಥಿ ಅನಿಲ್‌ ಕುಮಾರ್‌ ಅವರ ಕೈಯನ್ನು ಹಿಡಿದು ನಮ್ಮ ಪಕ್ಷವನ್ನು ಗೆಲ್ಲಿಸಿಕೊಂಡು ಬರಲೇಬೇಕು ಎಂದು ದೇವೇಗೌಡರು ಕೈಚಾಚಿ ಮನವಿ ಮಾಡಿದರು.
ಒಕ್ಕಲಿಗ ಸಮುದಾಯದ ಸಣ್ಣ ರೈತ ಕುಟುಂಬದಿಂದ ಬಂದ ನಾನು ಪ್ರಾದೇಶಿಕ ಪಕ್ಷದ ಮಹತ್ವವನ್ನ ರಾಜ್ಯದ ಜನತೆಗೆ ತೋರಿಸಿದ್ದಾನೆ, ನಮ್ಮ ಸಮುದಾಯವನ್ನು ಒಡೆದು ರಾಜಕಾರಣ ಮಾಡುವ ಕೆಲ ಪುಣ್ಯಾತ್ಮರು ದುರಹಂಕಾರದಲ್ಲಿ ಅಪಪ್ರಚಾರ ಮಾಡಿದ್ದಾರೆ, ಇಂಥವರಿಗೆ ಉತ್ತರ ನೀವು ನೀಡಬೇಕು, ನಮ್ಮ ಪಕ್ಷದ ಅಭ್ಯರ್ಥಿ ಅನಿಲ್‌ ವಿದ್ಯಾವಂತ ಹಾಗೂ ಜನಸೇವೆ ಮಾಡಲು ಉತ್ಸುಕರಾಗಿದ್ದಾರೆ, ಇಂಥವರನ್ನು ಗೆಲ್ಲಿಸುವ ಮೂಲಕ ರಾಜ್ಯದ ಜನರಿಗೆ ರೈತರಿಗೆ ಅನುಕೂಲವಾಗುವ ಮಾಡುವಂತಹ ಜನಪ್ರತಿನಿಧಿಯನ್ನು ನೀವು ಕಳುಹಿಸಿಕೊಬೇಕು ಎಂದು ತಿಳಿಸಿದರು.
ತುಮಕೂರು ಜಿಲ್ಲೆ ವಿಶೇಷ ಗೌರವ ಹೊಂದಿರುವ ಜಿಲ್ಲೆಯಾಗಿದ್ದು ಇಲ್ಲಿಂದಲೇ ಮತ್ತೊಮ್ಮೆ ರಾಜಕೀಯ ಚಟುವಟಿಕೆ ಆರಂಭವಾಗಬೇಕು, ಎಲ್ಲಾ ಸಮುದಾಯವನ್ನೂ ಒಟ್ಟುಗೂಡಿಸಿ ಪಕ್ಷ ಮುಂದೆ ಸಾಗುತ್ತಿದೆ, ಈ ಹಿಂದೆ ಪ್ರಾದೇಶಿಕ ಪಕ್ಷ ನೀಡುವ ಎಲ್ಲಾ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಜೆಡಿಎಸ್‌ ಪಕ್ಷವು ನೀಡಿದ ಅಧಿಕಾರ ವಿಕೇಂದ್ರಿಕರಣ ಮಾಡುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳಿಗೆ ಬಲ ತಂದ ಪಕ್ಷ, ಮತ್ತಷ್ಟು ಕೆಲಸ ಮಾಡಲು ಈ ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಮುಖ್ಯವಾಗುತ್ತದೆ, ಹಾಗಾಗಿ ಅನಿಲ್‌ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.
ಶಾಸಕ ಬಿ.ಸಿ.ಗೌರಿಶಂಕರ್‌ ಮಾತನಾಡಿ ಸಾರ್ವತ್ರಿಕ ಚುನಾವಣೆಯಂತೆ ಮೆರಗು ಪಡೆದ ವಿಧಾನ ಪರಿಷತ್‌ ಚುನಾವಣೆ ಸಲ್ಲದ ಕುತಂತ್ರ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿದೆ, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳು ಗೆಲುವು ಸಾಧಿಸುವಷ್ಟಿದೆ, ಚುರುಕಿನ ಕೆಲಸ ಮಾಡಿ ದೇವೇಗೌಡರನ್ನು ನಾನೇ ಸೋಲಿಸಿದೆ ಎಂದು ಹೇಳಿಕೊಂಡವರನ್ನು ಸೋಲಿಸೋಣ, ಜೊತೆಗೆ ಮುಂದಿನ 2023 ಕ್ಕೆ ಕುಮಾರಣ್ಣನವರ ಸರ್ಕಾರ ಸ್ಥಾಪಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ ಗ್ರಾಮ ಸ್ವರಾಜ್ಯ ಕನಸು ದೇವೇಗೌಡರ ಕನಸಾಗಿದೆ. ಇದರ ಸಾಕಾರಕ್ಕೆ ಈ ಚುನಾವಣೆ ಗೆಲುವು ಸಾಕ್ಷಿಯಾಗಬೇಕಿದೆ. ಸಾಮಾಜಿಕ ನ್ಯಾಯ ಕಲ್ಪಿಸುವ ಶಕ್ತಿ ಜೆಡಿಎಸ್‌ ಪಕ್ಷಕ್ಕೆ ಮಾತ್ರ ಇದೆ. ಈಗಾಗಲೇ ಜನರಿಗೆ ಬೇಸರ ತಂದ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜೆಡಿಎಸ್‌ ಅಭ್ಯರ್ಥಿ ಆರ್‌.ಅನಿಲ್‌ ಮಾತನಾಡಿ ಗ್ರಾಮೀಣ ಜನರ ಸಮಸ್ಯೆಗೆ ಉತ್ತರ ನೀಡಬಲ್ಲ ಜೆಡಿಎಸ್‌ ಪಕ್ಷಕ್ಕೆ ನಿಮ್ಮ ಬೆಂಬಲ ನೀಡಿ ಎಂದು ಮತಯಾಚನೆ ಮಾಡಿದರು.
ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್‌ ಮಾತನಾಡಿ, ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಆಡಳಿತ ಮಾಡಿದ ಸಂದರ್ಭದಲ್ಲಿ ರೈತರ ಹಿತ ಕಾಪಾಡಿದ ಪಕ್ಷ ಎಂದರೆ ಅದು ಜೆಡಿಎಸ್‌ ಪಕ್ಷ ಮಾತ್ರ, ಎಂಎಲ್‌ಸಿ ಚುನಾವಣೆಯಲ್ಲಿ ನಿಂತಿರುವ ಅನಿಲ್‌ ಕೆಎಎಸ್‌ ಅಧಿಕಾರಿಯಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದವರು, ನಾವು ಗೆಲ್ಲಿಸಿಕೊಂಡಲ್ಲಿ ಸ್ಥಳೀಯ ಆಡಳಿತದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜಿನಪ್ಪ, ಜಿಪಂ ಮಾಜಿ ಸದಸ್ಯರಾದ ಯಶೋಧಮ್ಮ ಶಿವಣ್ಣ, ಜಿ.ರಾಮಾಂಜಿನಪ್ಪ, ಮುಖಂಡರಾದ ಎಂ.ಗಂಗಣ್ಣ, ಬಿ.ಎಸ್‌.ನಾಗರಾಜು, ಶಿವಲಿಂಗಯ್ಯ, ಕೊಂಡ್ಲಿ ಕರಿಯಪ್ಪ, ಕಳ್ಳಿಪಾಳ್ಯ ಲೋಕೇಶ್‌, ಬೆಳ್ಳಿ ಲೋಕೇಶ್‌, ನರಸೇಗೌಡ, ನರಸಿಂಹಮೂರ್ತಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!